ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಫ್ರಾಂಚೈಸ್‌ನಿಂದ ಅಪಾರ ಗೌರವ ದೊರೆತಿದೆ: ಇಮ್ರಾನ್ ತಾಹಿರ್

Last Updated 22 ಅಕ್ಟೋಬರ್ 2020, 16:18 IST
ಅಕ್ಷರ ಗಾತ್ರ

ಕಳೆದ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿ ಪರ್ಪಲ್‌ ಕ್ಯಾಪ್‌ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಇಮ್ರಾನ್‌ ತಾಹಿರ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

2019ರ ಟೂರ್ನಿಯಲ್ಲಿ17 ಪಂದ್ಯಗಳಲ್ಲಿ ಆಡಿದ್ದ ತಾಹಿರ್, 6.69 ಎಕಾನಮಿಯಲ್ಲಿ ಬೌಲಿಂಗ್ ಮಾಡಿ26ವಿಕೆಟ್‌ಗಳನ್ನು ಪಡೆದಿದ್ದರು. ಆದರೂ ಈ ಬಾರಿ ಅವರು ಒಂದೂ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಪಂದ್ಯವೊಂದರಲ್ಲಿ ಒಂದು ತಂಡದ ಪರವಾಗಿ ನಾಲ್ವರು ವಿದೇಶಿ ಆಟಗಾರರು ಮಾತ್ರವೇ ಆಡಲು ಅವಕಾಶವಿದೆ. ಬ್ಯಾಟ್ಸ್‌ಮನ್‌ಗಳಾಗಿ ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ ಮತ್ತು ಆಲ್‌ರೌಂಡರ್‌ಗಳಾಗಿ ಸ್ಯಾಮ್‌ ಕರನ್‌, ಡ್ವೇನ್‌ ಬ್ರಾವೊ ಅವರನ್ನು ಕಣಕ್ಕಿಳಿಸಲು ಚೆನ್ನೈ ತಂಡ ಒಲವು ತೋರಿರುವುದು ಇದಕ್ಕೆ ಕಾರಣ.

ಆದಾಗ್ಯೂ ತಾಹಿರ್ತಂಡದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆರ್‌.ಅಶ್ವಿನ್‌ ಅವರೊಂದಿಗೆ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಚೆನ್ನೈ ಅತ್ಯುತ್ತಮ ತಂಡ. ನಾನು ಪ್ರಪಂಚದಾದ್ಯಂತ ಆಡಿದ್ದೇನೆ. ಆದರೆ, ಚೆನ್ನೈ ಫ್ರಾಂಚೈಸ್‌ನಿಂದ ದೊರೆತಷ್ಟು ಗೌರವ ಬೇರೆಲ್ಲೂ ಸಿಕ್ಕಿಲ್ಲ. ಇಲ್ಲಿನ ಅಭಿಮಾನಿಗಳೂ ನಂಬಲಾಗದಷ್ಟು ಪ್ರೀತಿ ತೋರಿದ್ದಾರೆ. ಚೆನ್ನೈ ತಂಡದಲ್ಲಿ ಆಡುವಾಗ ವಿಭಿನ್ನ ವಾತವರಣ ಇರುತ್ತದೆ. ತಂಡದ ಯಾರೊಬ್ಬರೂ ನಿಮ್ಮ ಪ್ರದರ್ಶನದ ಬಗ್ಗೆ ಮಾತನಾಡುವುದಿಲ್ಲ. ಪರಸ್ಪರ ಬೆಂಬಲ ನೀಡುತ್ತಾರೆ’ ಎಂದು ಹೇಳಿದ್ದಾರೆ.

ಈ ಬಾರಿ ತಂಡದಿಂದ ಹೊರಗುಳಿದಿರುವ ಬಗ್ಗೆ ಮಾತನಾಡಿರುವ ಅವರು, ಯಾವಾಗ ತಂಡದಲ್ಲಿ ಆಡುತ್ತೇನೆ ಎಂಬುದರ ಸುಳಿವು ಸಿಕ್ಕಿಲ್ಲ. ಈಗಾಗಲೇ ನಾಲ್ವರು ವಿದೇಶಿ ಆಟಗಾರರು ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವುದರಿಂದ ಇನ್ನೊಬ್ಬ ಆಟಗಾರ ತಂಡಕ್ಕೆ ಸೇರಿಕೊಳ್ಳುವುದು ಕಠಿಣ ಎಂದಿದ್ದಾರೆ.

‘ಯಾವುದೇ ಸುಳಿವು ಇಲ್ಲ. ಈ ಮೊದಲು ಫಾಫ್‌ ಡು ಪ್ಲೆಸಿ ಟೂರ್ನಿಯುದ್ದಕ್ಕೂ ಆಟಗಾರರಿಗೆ ಪಾನಿಯ ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಅವರು ಟಿ–20ಯಲ್ಲಿ ಉತ್ತಮ ಸರಾಸರಿಯಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ. ಈ ವರ್ಷ ನಾನು ಆ (ಪಾನಿಯಾ ತೆಗೆದುಕೊಂಡು ಹೋಗುವ) ಕೆಲಸ ಮಾಡುತ್ತಿದ್ದೇನೆ. ಫಾಫ್‌ ಆಗ ಹೇಗೆ ಭಾವಿಸಿದ್ದಿರಬಹುದು ಎಂಬುದು ನನಗೆ ಈಗ ಗೊತ್ತಾಗಿದೆ. ಅವರೊಂದಿಗೂ ಮಾತನಾಡಿದ್ದೇನೆ. ಚೆನ್ನೈ ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರು ಒಂದು ಬಾರಿ ಸ್ಥಾನ ಗಟ್ಟಿಗೊಳಿಸಿಕೊಂಡರೆಂದರೆ, ಐದನೇ ಆಟಗಾರ ಅವಕಾಶ ಪಡೆಯುವುದು ತಂಬಾ ಕಷ್ಟ’ ಎಂದಿದ್ದಾರೆ.

ಟೂರ್ನಿಯಲ್ಲಿ ಸದ್ಯ 10 ಪಂದ್ಯಗಳನ್ನು ಆಡಿರುವ ಚೆನ್ನೈ ತಂಡ 7 ಸೋಲು ಅನುಭವಿಸಿದ್ದು, ಮೂರರಲ್ಲಷ್ಟೇ ಗೆದ್ದಿದೆ. ಹೀಗಾಗಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಇದೇ 17ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿದ್ದರು. ಸದ್ಯ ಅವರು ಟೂರ್ನಿಯಿಂದ ಹೊರಬಿದ್ದಿದ್ದು, ಮುಂದಿನ ಪಂದ್ಯಗಳಲ್ಲಿ ತಾಹಿರ್‌ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT