ಶನಿವಾರ, ಅಕ್ಟೋಬರ್ 24, 2020
18 °C
ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಚೆನ್ನೈ ಸೂಪರ್ ಕಿಂಗ್ಸ್‌ ಹಣಾಹಣಿ ಇಂದು

RCB vs CSK: ದುಬೈನಲ್ಲಿ ‘ದಕ್ಷಿಣ ಡರ್ಬಿ’, ವಿರಾಟ್–ಮಹಿ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಪ್ರತಿ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಹಣಾಹಣಿ ನಡೆಯುವ ಸಂದರ್ಭದಲ್ಲಿ ಆಯಾ ಟೂರ್ನಿಯ ಸಾಧನೆಯಲ್ಲಿ ಚೆನ್ನೈ ಮುಂದಿರುತ್ತಿತ್ತು. ಆದರೆ ಈ ಸಲದ ಪರಿಸ್ಥಿತಿ ಹಾಗಿಲ್ಲ!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಹೇಂದ್ರಸಿಂಗ್ ಧೋನಿ ಪಡೆಯು ಸೋಲಿನ ಮುಖವನ್ನೇ ಹೆಚ್ಚು ನೋಡಿದೆ. ಅದಕ್ಕೆ ಹೋಲಿಸಿದರೆ ವಿರಾಟ್ ಕೊಹ್ಲಿ ಬಳಗವು ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದಲೇ ಈ ‘ದಕ್ಷಿಣ ಡರ್ಬಿ’ ಕುತೂಹಲ ಕೆರಳಿಸಿದೆ.

ಬೆಂಗಳೂರು ತಂಡವು ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅದರ ನಂತರದ ಸ್ಥಾನದಲ್ಲಿರುವ ಚೆನ್ನೈ ತಂಡವು ಆರು ಪಂದ್ಯಗಳನ್ನಾಡಿದೆ. ಎರಡರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ.‌ ಹೋದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ಸುಲಭವಾಗಿ ಜಯಿಸುವ ಅವಕಾಶವನ್ನು ಧೋನಿ ಬಳಗ ಕೈಚೆಲ್ಲಿತ್ತು. ಅದರಲ್ಲೂ ಅನುಭವಿ ಬ್ಯಾಟ್ಸ್‌ಮನ್ ಕೇದಾರ್ ಜಾಧವ್  ಅವರ ನಿಧಾನಗತಿಯ ಬ್ಯಾಟಿಂಗ್ ಹೆಚ್ಚು ಟೀಕೆಗೆ ಒಳಗಾಗಿತ್ತು. ಆದ್ದರಿಂದ ಅವರು ಈ ಪಂದ್ಯದಲ್ಲಿ ಸ್ಥಾನ ಪಡೆಯುವುದು ಸಂಶಯ.

ಉಳಿದಂತೆ ಫಾಫ್ ಡುಪ್ಲೆಸಿ, ಶೇನ್ ವಾಟ್ಸನ್, ರವೀಂದ್ರ ಜಡೇಜ, ಡ್ವೇನ್ ಬ್ರಾವೊ ಮತ್ತು ಅಂಬಟಿ ರಾಯುಡು ಭರವಸೆಯ ಆಟಗಾರರು. ಧೋನಿ ಲಯ ಸ್ಥಿರವಿಲ್ಲ. ಆದರೆ, ವಿಕೆಟ್‌ಕೀಪಿಂಗ್‌ನಲ್ಲಿ ಅವರಿಗೆ ಅವರೇ ಸಾಟಿ. ಆದರೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯ ನಿರ್ಧಾರಗಳು ಅವರಿಗೆ ಕೈ ಕೊಡುತ್ತಿವೆ. ಈ ಪಂದ್ಯದಲ್ಲಿ ಅವರ ತಂತ್ರಗಾರಿಕೆಯ ಪರೀಕ್ಷೆ ನಡೆಯಲಿದೆ.

ಏಕೆಂದರೆ ಆರ್‌ಸಿಬಿಯ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅಮೋಘವಾದ ಫಾರ್ಮ್‌ನಲ್ಲಿದ್ದಾರೆ. ಪಂದ್ಯಕ್ಕೆ ತಿರುವು ಕೊಡುವ ಸಮರ್ಥ ಬೌಲರ್ ಆಗಿದ್ದಾರೆ. ಮಧ್ಯಮವೇಗಿ ನವದೀಪ್ ಸೈನಿ, ಇಸುರು ಉಡಾನ, ಶಿವಂ ದುಬೆ ಕೂಡ ಜೊತೆಯಾಟಗಳಿಗೆ ತಡೆಯೊಡ್ಡುವ ಚತುರ ಬೌಲರ್‌ಗಳು.

ಆರ್‌ಸಿಬಿ ಬ್ಯಾಟಿಂಗ್ ಪಡೆಯು ಕೊಂಚ ಏಕಾಗ್ರತೆಯಿಂದ ಆಡಿದರೆ ದೊಡ್ಡ ಮೊತ್ತವನ್ನು ಗಳಿಸುವ ಮತ್ತು ಯಶಸ್ವಿಯಾಗಿ ಬೆನ್ನತ್ತುವ ಸಾಮರ್ಥ್ಯ ಹೊಂದಿದೆ. ಬೆಂಗಳೂರು ತಂಡದ ಆರಂಭಿಕ ಜೋಡಿ ದೇವದತ್ತ ಪಡಿಕ್ಕಲ್ ಮತ್ತು ಆ್ಯರನ್ ಫಿಂಚ್ ಉತ್ತಮ ಲಯದಲ್ಲಿದ್ಧಾರೆ. ಕರ್ನಾಟಕದ ಪಡಿಕ್ಕಲ್ ಟೂರ್ನಿಯಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರನ್ನು ಕಟ್ಟಿಹಾಕುವ ಸವಾಲು ಚೆನ್ನೈನ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಪೀಯೂಷ್ ಚಾವ್ಲಾ. ಕರ್ಣ ಶರ್ಮಾ ಮತ್ತು ಬ್ರಾವೊ ಅವರ ಮುಂದಿದೆ.

ಸೋಲಿನ ಸುಳಿಯಿಂದ ಹೊರಬರುವುದೇ ಕಿಂಗ್ಸ್‌?

ಈ ಸಲ ಅತಿ ಹೆಚ್ಚು ರನ್‌ ಗಳಿಸಿರುವ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳು. ಆದರೆ, ಅಂಕಪಟ್ಟಿಯಲ್ಲಿ ಮಾತ್ರ ತಂಡವು ಕೊನೆಯ ಸ್ಥಾನದಲ್ಲಿದೆ.

ಕೆ.ಎಲ್.ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಆದರೆ ನಾಯಕರಾಗಿ ಚಿಂತೆಯ ಸುಳಿಯಲ್ಲಿದ್ದಾರೆ. ಟೂರ್ನಿಯಲ್ಲಿ ಆಡಿರುವ  ಆರು ಪಂದ್ಯಗಳಲ್ಲಿ ಐದರಲ್ಲಿ ಕಿಂಗ್ಸ್‌ ಸೋತು ಸುಣ್ಣವಾಗಿದೆ. ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ನಡೆಯಲಿರುವ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ತನ್ನ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡದ ಎದುರು ಮಾತ್ರ ಗೆದ್ದಿದ್ದ ಕಿಂಗ್ಸ್ ತಂಡವು ನಂತರದ ನಾಲ್ಕರಲ್ಲಿ ಸತತ ಸೋಲು ಅನುಭವಿಸಿದೆ. ಅದಕ್ಕೆ ಕಾರಣ ತಂಡದ ದುರ್ಬಲ ಬೌಲಿಂಗ್. ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ಮಾತ್ರ ತಕ್ಕಮಟ್ಟಿಗೆ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರುತ್ತಿಲ್ಲ.

ಬ್ಯಾಟಿಂಗ್‌ನಲ್ಲಿ ನಿಕೊಲಸ್ ಪೂರನ್ ಉತ್ತಮವಾಗಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ ಅಥವಾ ಮನದೀಪ್ ಸಿಂಗ್ ಅವರನ್ನು ಕೈಬಿಟ್ಟು ಕ್ರಿಸ್ ಗೇಲ್ ಅವರನ್ನು ಆಡಿಸುವುದು ಬಹುತೇಕ ಖಚಿತ. ಇಲ್ಲಿಯವರಿಗೆ ಗೇಲ್ ಒಂದೂ ಪಂದ್ಯದಲ್ಲಿ ಆಡಿಲ್ಲ.

ಆದರೆ, ಕೆಕೆಆರ್ ತಂಡವು ಸಮತೋಲನದಿಂದ ಕೂಡಿದೆ. ಹೋದ ಪಂದ್ಯದಲ್ಲಿ ಸಿಎಸ್‌ಕೆ ಎದುರು ಸಾಧಾರಣ ಮೊತ್ತವನ್ನೇ ರಕ್ಷಿಸಿಕೊಂಡು ಜಯಿಸಿತ್ತು. ನಾಯಕ ದಿನೇಶ್ ಕಾರ್ತಿಕ್ , ಆ್ಯಂಡ್ರೆ ರಸೆಲ್ ಅವರು ಲಯಕ್ಕೆ ಮರಳುವ ಅಗತ್ಯ ಇದೆ. ಉಳಿದಂತೆ ಶುಭಮನ್ ಗಿಲ್,  ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಉತ್ತಮವಾಗಿ ಆಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು