ಮಂಗಳವಾರ, ಅಕ್ಟೋಬರ್ 27, 2020
22 °C

ರಾಜಸ್ಥಾನ ಜಯಭೇರಿ: ಸೋಲಿನ ಸರಪಳಿ ತುಂಡರಿಸಿದ ರಾಹುಲ್ – ರಿಯಾನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಹೊಡೆದ ಬಲಶಾಲಿ ಸಿಕ್ಸರ್‌ಗಳ ಭರಾಟೆಗೆ ರಾಜಸ್ಥಾನ ರಾಯಲ್ಸ್‌ ತಂಡದ ಸತತ ಸೋಲಿನ ಸರಪಳಿ ತುಂಡಾಯಿತು. ಸನ್‌ರೈಸರ್ಸ್‌ ಹೈದರಾಬಾದ್ ಬಳಗದ  ಗೆಲುವಿನ ಕನಸು ನುಚ್ಚುನೂರಾಯಿತು.

ಟೂರ್ನಿಯಲ್ಲಿ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ ತಂಡವು ಭಾನುವಾರ ಐದು ವಿಕೆಟ್‌ ಗಳಿಂದ ಡೇವಿಡ್ ವಾರ್ನರ್ ಬಳಗದ ಎದುರು ರೋಚಕ ಜಯ ದಾಖಲಿಸಿತು. ರಾಹುಲ್ ತೆವಾಟಿಯಾ (ಔಟಾಗದೆ 45; 26ಎಸೆತ) ಮತ್ತು ರಿಯಾನ್ ಪರಾಗ್ (ಔಟಾಗದೆ 42;26ಎ) ಅವರು ಮುರಿಯದ ಆರನೇ ವಿಕೆಟ್‌ಗೆ ಸೇರಿಸಿದ 85 ರನ್‌ಗಳು ತಂಡದ ಜಯಕ್ಕೆ ಕಾರಣವಾದವು.

ಟಾಸ್ ಗೆದ್ದು  ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 20 ಓವರ್‌ ಗಳಲ್ಲಿ 4 ವಿಕೆಟ್‌ಗಳಿಗೆ 158 ರನ್ ಗಳಿಸಿತು. ಡೇವಿಡ್ ವಾರ್ನರ್ (48; 38ಎ, 3ಬೌಂ, 2ಸಿ) ಮತ್ತು ಮನೀಷ್ ಪಾಂಡೆ (54; 44ಎ, 2ಬೌಂ, 3ಸಿ) ಅವರ ಆಟದಿಂದ ತಂಡಕ್ಕೆ  ಈ ಮೊತ್ತ ಗಳಿಸಲು ಸಾಧ್ಯವಾಯಿತು. ರಾಯಲ್ಸ್ 19.5 ಓವರ್‌ಗಳಲ್ಲಿ 5ಕ್ಕೆ 163 ರನ್ ಗಳಿಸಿತು.

ಭುವನೇಶ್ವರ್ ಕುಮಾರ್ ಅನುಪ ಸ್ಥಿತಿಯಲ್ಲಿಯೂ ಹೈದರಾಬಾದ್ ಬೌಲರ್‌ ಗಳು ಉತ್ತಮ ಹಿಡಿತ ಸಾಧಿಸಿದ್ದರು. ಎಡಗೇ ಮಧ್ಯಮವೇಗಿ ಖಲೀಲ್ ಅಹಮದ್ (37ಕ್ಕೆ2) ಮತ್ತು ಸ್ಪಿನ್ನರ್ ರಶೀದ್ ಖಾನ್ (25ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ರಾಯಲ್ಸ್‌ 12 ಓವರ್‌ಗಳಾಗುವಷ್ಟರಲ್ಲಿ ಕೇವಲ 78 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 

ಆದರೆ ಕ್ರೀಸ್‌ನಲ್ಲಿದ್ದ 18ರ ಹುಡುಗ ರಿಯಾನ್ ಜೊತೆಗೂಡಿದ ರಾಹುಲ್ ಪಂದ್ಯದ ಗತಿಯನ್ನೇ ಬದಲಿಸಿದರು. 17ನೇ ಓವರ್‌ನಿಂದ ರಿಯಾನ್–ರಾಹುಲ್ ಜೋಡಿಯು ಬೌಲರ್‌ಗಳನ್ನು ಹಣ್ಣುಗಾಯಿ ನೀರು ಗಾಯಿ ಮಾಡಿಬಿಟ್ಟರು. ಈ ಮೂರು ಓವರ್‌ಗಳಲ್ಲಿ  ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸಿಡಿದವು.

ಕೊನೆಯ ಓವರ್‌ನಲ್ಲಿ ಕೇವಲ ಎಂಟು ರನ್‌ಗಳ ಅವಶ್ಯವಾದವು. ಆ ಓವರ್ ಹಾಕಿದ ಖಲೀಲ್ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಮೊದಲ ನಾಲ್ಕು ಎಸೆತಗಳಲ್ಲಿಯೇ ಆರು ರನ್‌ಗಳನ್ನು ಇಬ್ಬರೂ ಬ್ಯಾಟ್ಸ್‌ಮನ್‌ಗಳು ಗಳಿಸಿಬಿಟ್ಟರು. ಐದನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ರಿಯಾನ್ ಸಂತಸದಿಂದ ನರ್ತಿಸಿದರು!

ರಿಯಾನ್ ಬಿಹು ಡ್ಯಾನ್ಸ್!

ತಮ್ಮ ತಂಡದ ಗೆಲುವಿಗಾಗಿ ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್‌ಗಳ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ ಅಸ್ಸಾಂ ಹುಡುಗ ರಿಯಾನ್ ಪರಾಗ್ ಬಿಹು ನೃತ್ಯ ಮಾಡಿ ಸಂಭ್ರಮಿಸಿದರು.

ಖಲೀಲ್ ಅಹಮದ್ ಹಾಕಿದ ಫುಲ್‌ಟಾಸ್ ಎಸೆತವನ್ನು ರಿಯಾನ್ ಸೊಗಸಾದ ಹೊಡೆತದ ಮೂಲಕ ಬೌಂಡರಿಗೆರೆ ದಾಟಿಸಿದರು. ಚೆಂಡು ಖಾಲಿ ಗ್ಯಾಲರಿಯಲ್ಲಿ ಬೀಳುತ್ತಿದ್ದಂತೆ ಪಿಚ್‌ ಪಕ್ಕದಲ್ಲಿ ಬ್ಯಾಟ್‌ ಹೆಲ್ಮೆಟ್ ತೆಗೆದಿಟ್ಟು ಬಿಹು ನೃತ್ಯದ ಹೆಜ್ಜೆಗಳನ್ನು ಹಾಕಿದರು.  ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಸಹ ಆಟಗಾರರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಖಲೀಲ್–ತೆವಾಟಿಯಾ ಚಕಮಕಿ

ರೋಚಕ ಘಟ್ಟ ತಲುಪಿದ್ದ ಕೊನೆಯ ಓವರ್‌ನಲ್ಲಿ ಬೌಲರ್ ಖಲೀಲ್ ಮತ್ತು ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ ನಡುವೆ ಮಾತಿನ ಚಕಮಕಿ ನಡೆಯಿತು. ಪಂದ್ಯದ ನಂತರವೂ ಇದು ಮುಂದುವರಿಯಿತು.

ರಾಜಸ್ಥಾನ ರಾಯಲ್ಸ್‌ ಜಯಿಸಿದ ನಂತರ ರಾಹುಲ್,  ಖಲೀಲ್  ಅವರತ್ತ ಸಾಗಿ ಮತ್ತೆ ಮಾತಿನ ಚಕಮಕಿ ಆರಂಭಿಸಿದರು. ಆಗ ಮಧ್ಯಪ್ರವೇಶಿಸಿದ ಸನ್‌ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಅವರು ರಾಹುಲ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆಗ ಖಲೀಲ್ ಕೂಡ ರಾಹುಲ್ ಅವರ ಹೆಗಲನ್ನು ಬಳಸಿ, ಸಂತೈಸುತ್ತ ನಡೆದಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು