ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಈ ಬಾರಿ ಆರ್‌ಸಿಬಿ ಅದೃಷ್ಟ ಬದಲಾಗಲಿದೆ; ಕೊಹ್ಲಿ ಆಶಾವಾದ

Last Updated 2 ಏಪ್ರಿಲ್ 2021, 3:00 IST
ಅಕ್ಷರ ಗಾತ್ರ

ಚೆನ್ನೈ: ಈ ಬಾರಿ ವಿಭಿನ್ನವಾಗಿ ಆಯೋಜನೆಯಾಗತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಅದೃಷ್ಟ ಬದಲಾಗುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ.

'ಇದು ನಿಜ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಮಧ್ಯೆ ಸಾಕಷ್ಟು ಕ್ರಿಕೆಟ್ ಆಡಿದ್ದರೂ, ನಾವು ದೂರ ಹೋಗಿದ್ದೆವು ಎಂಬಂತೆ ಭಾಸವಾಗುತ್ತಿಲ್ಲ. ಹೌದು, ಮತ್ತೆ ಭಾರತದಲ್ಲಿ ಆಡಲು ತುಂಬಾನೇ ಉತ್ಸುಕರಾಗಿದ್ದೇವೆ' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

'ಆದರೂ ಈ ಬಾರಿ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹಾಗೂ ವಿಭಿನ್ನ ವ್ಯವಸ್ಥೆಯಲ್ಲಿ ಐಪಿಎಲ್ ಆಡಲಾಗುತ್ತದೆ. ನಾನು ತುಂಬಾ ಆಶಾವಾದಿಯಾಗಿದ್ದು, ಈ ಬಾರಿ ಉತ್ತಮ ಭಾವನೆಯನ್ನುಂಟು ಮಾಡಿದೆ' ಎಂದು ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಎಬಿ ಡಿ ವಿಲಿಯರ್ಸ್, ಇದೊಂದು ಸುದೀರ್ಘ ಪ್ರಯಾಣವಾಗಿತ್ತು. ಆರ್‌ಸಿಬಿಗೆ ಮರಳಲು ತುಂಬಾ ಸಂತೋಷವಾಗುತ್ತಿದೆ. ನಿನ್ನೆಯಷ್ಟೇ ಐಪಿಎಲ್ ಮುಗಿದಂತೆ ಭಾಸವಾಗುತ್ತಿದೆ. ನನಗನಿಸುತ್ತದೆ ಕಳೆದ ಟೂರ್ನಿಯ ಹುಮ್ಮಸ್ಸು ನಮ್ಮೊಂದಿಗಿದ್ದು, ಈ ಬಾರಿಯೂ ಆನಂದಿಸಲಿದ್ದೇವೆ ಎಂದು ಹೇಳಿದ್ದಾರೆ.

ಹಳೆಯ ಹೆಸರುಗಳ ಜೊತೆಗೆ ಕೆಲವು ಹೊಸ ಹೆಸರುಗಳು ಕಾಣಿಸಿಕೊಂಡಿದೆ. ಹಿಂದಿನಿಂದಲೂ ಪರಿಚಿತವಾಗಿರುವ ಕೆಲವು ಆಟಗಾರರು ನಮ್ಮೊಂದಿಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ನಾವೆಲ್ಲರೂ ಐಪಿಎಲ್‌ನಲ್ಲಿ ನೋಡಿದ್ದೇವೆ. ನಾವೆಲ್ಲರೂ ಜೊತೆಯಾಗಿ ಅನೇಕ ಪಂದ್ಯಗಳನ್ನು ಗೆಲ್ಲಬೇಕಾಗಿದ್ದು, ತುಂಬಾ ಆಶಾದಾಯಕವಾಗಿದ್ದೇವೆ ಎಂದು ಹೇಳಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಗುರುವಾರದಂದು ಚೆನ್ನೈನಲ್ಲಿ ಆರ್‌ಸಿಬಿ ಬಯೋಬಬಲ್ ಅನ್ನು ಸೇರಿಕೊಂಡರು. ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ಭಾಗವಹಿಸಿದ್ದ ಆಟಗಾರರನ್ನು ಹೊರತುಪಡಿಸಿ ಇತರೆಲ್ಲರೂ ಹೋಟೆಲ್ ಕೊಠಡಿಗಳಲ್ಲಿ ಏಳು ದಿನಗಳ ಪ್ರತ್ಯೇಕವಾಸದಲ್ಲಿರುವುದು ಕಡ್ಡಾಯವಾಗಿದೆ. ಈ ಸಂದರ್ಭದಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಅವಕಾಶವಿರುತ್ತದೆ.

ಐಪಿಎಲ್ 14ನೇ ಆವೃತ್ತಿಗಾಗಿ ಆರ್‌ಸಿಬಿಯ 11 ಆಟಗಾರರು ಈಗಾಗಲೇ ತರಬೇತಿಯನ್ನು ಆರಂಭಿಸಿದ್ದಾರೆ. ಅಲ್ಲದೆ ಚೊಚ್ಚಲ ಕಿರೀಟ ಗೆಲ್ಲುವ ಗುರಿಯನ್ನಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT