ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಮೊರಿಸ್‌ಗೆ 4 ವಿಕೆಟ್, ಸಂಜು ನಾಯಕನ ಆಟ; ರಾಜಸ್ಥಾನ್‌ಗೆ ಗೆಲುವು

Last Updated 24 ಏಪ್ರಿಲ್ 2021, 18:08 IST
ಅಕ್ಷರ ಗಾತ್ರ

ಮುಂಬೈ: ಕ್ರಿಸ್ ಮೊರಿಸ್ ನಾಲ್ಕು ವಿಕೆಟ್ ಸಾಧನೆ ಹಾಗೂ ನಾಯಕ ಸಂಜು ಸ್ಯಾಮ್ಸನ್ (42*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ.

ಕೊನೆಯ ಹಂತದಲ್ಲಿ ಮೊರಿಸ್ ನಾಲ್ಕು ವಿಕೆಟ್ ನೆರವಿನಿಂದ ಕೆಕೆಆರ್ ತಂಡವನ್ನು 133 ರನ್ನಿಗೆ ಕಟ್ಟಿ ಹಾಕುವಲ್ಲಿ ರಾಜಸ್ಥಾನ್ ಯಶಸ್ವಿಯಾಗಿತ್ತು. ಬಳಿಕ ಗುರಿ ಬೆನ್ನತ್ತುವಲ್ಲಿ ತಡಕಾಡಿದರೂ ನಾಯಕ ಸಂಜು ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಾಜಸ್ಥಾನ್ ತಂಡವು 18.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.

ಇದರೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅತ್ತ ಕೆಕೆಆರ್ ತಂಡವು ಸತತ ನಾಲ್ಕನೇ ಸೋಲಿನ ಮುಖಭಂಗಕ್ಕೊಳಗಾಗಿದೆ.

ರಾಜಸ್ಥಾನ್‌ಗೆ ಆರಂಭದಲ್ಲೇ ಜೋಸ್ ಬಟ್ಲರ್ (5) ವಿಕೆಟ್ ನಷ್ಟವಾಗಿತ್ತು. ಯಶಸ್ವಿ ಜೈಸ್ವಾಲ್ (22) ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಶಿವಂ ದುಬೆ (22) ಜೊತೆಗೆ 45 ರನ್ನಿನ ಮಹತ್ವದ ಜೊತೆಯಾಟ ಕಟ್ಟಿದ ಸಂಜು ತಂಡವನ್ನು ಮುನ್ನಡೆಸಿದರು.

ಈ ನಡುವೆ ರಾಹುಲ್ ತೆವಾಟಿಯಾ (5) ವಿಕೆಟ್ ನಷ್ಟವಾದರೂ ಮುರಿಯದ ಐದನೇ ವಿಕೆಟ್‌ಗೆ ಡೇವಿಡ್ ಮಿಲ್ಲರ್ ಜೊತೆಗೆ 34 ರನ್‌ಗಳ ಜೊತೆಯಾಟ ನೀಡಿದ ಸಂಜು ತಂಡವನ್ನು ಗೆಲುವಿನ ದಡ ಸೇರಿಸಿದರು. ಎಂದಿನ ತಮ್ಮ ಆಕ್ರಮಣಕಾರಿ ಶೈಲಿಗೆ ವಿರುದ್ಧವಾಗಿ ಪರಿಸ್ಥಿತಿಗೆ ತಕ್ಕಂತೆ ಆಟವಾಡಿದ ಸಂಜು 41 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಮಿಲ್ಲರ್ 24 ರನ್ ಗಳಿಸಿ ಔಟಾಗದೆ ಉಳಿದರು.

ಮೊರಿಸ್‌ಗೆ 4 ವಿಕೆಟ್; ಕೆಕೆಆರ್ ತತ್ತರ...
ಈ ಮೊದಲು ರಾಜಸ್ಥಾನ್ ಬೌಲರ್‌‌ಗಳ ನಿಖರ ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್‌ಗೆ ಸಿಲುಕಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.

ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್ ವೇಗಿ ಕ್ರಿಸ್ ಮೊರಿಸ್ ದಾಳಿಯ ಮುಂದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ತತ್ತರಿಸಿತು. ಕ್ರಿಸ್ ಮೊರಿಸ್ ನಾಲ್ಕು ಮತ್ತು ಜೈದೇವ್ ಉನದ್ಕಟ್, ಚೇತನ್ ಸಕಾರಿಯಾ ಹಾಗೂ ಮುಸ್ತಾಫಿಜುರ್ ರಹಮಾನ್ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿದರು. ನಾಯಕನ ನಿರ್ಧಾರ ಸರಿಯೆಂದು ಸಾಬೀತು ಮಾಡಿದ ಬೌಲರ್‌ಗಳು ಪರಿಣಾಮಕಾರಿ ದಾಳಿ ಸಂಘಟಿಸಿದರು. ಇದಕ್ಕೆ ತಕ್ಕತೆ ಫೀಲ್ಡರ್‌ಗಳು ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ಕೆಕೆಆರ್ ತಂಡವನ್ನು ಕಟ್ಟಿ ಹಾಕಿದರು.

ಶುಭಮನ್ ಗಿಲ್ (11) ಜೋಸ್ ಬ್ಲಟರ್ ಅವರ ನೇರ ಥ್ರೋಗೆ ರನೌಟ್ ಆದರು. ನಿತೀಶ್ ರಾಣಾ (22) ಉತ್ತಮ ಆರಂಭ ಪಡೆದರೂ ಯುವಿ ವೇಗಿ ಚೇತನ್ ಸಕಾರಿಯಾಗೆ ಬಲಿಯಾದರು. ಪಿಂಚ್ ಹಿಟ್ಟರ್ ರೂಪದಲ್ಲಿ ಕ್ರೀಸಿಗಿಳಿಗಿದ್ದ ಸುನಿಲ್ ನಾರಾಯಣ್, ಜೈದೇವ್ ಉನದ್ಕಟ್ (6) ದಾಳಿಯಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್‌‌ಗೆ ವಿಕೆಟ್ ಒಪ್ಪಿಸಿದರು.

ನಾಯಕ ಏಯಾನ್ ಮಾರ್ಗನ್ (0) ಹೊಂದಾಣಿಕೆ ಕೊರತೆಯಿಂದಾಗಿ ಯಾವುದೇ ಎಸೆತವನ್ನು ಎದುರಿಸಲಾಗದೇ ರನೌಟ್‌ಗೆ ಬಲಿಯಾದರು. ಈ ನಡುವೆ ಕ್ರೀಸ್‌ನ ಇನ್ನೊಂದು ತುದಿಯಿಂದ ಪ್ರಭಾವಿ ಇನ್ನಿಂಗ್ಸ್ ಕಟ್ಟಿದ ರಾಹುಲ್ ತ್ರಿಪಾಠಿ (36) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ದಿನೇಶ್ ಕಾರ್ತಿಕ್ (25) ನೆಲೆಯೂರಿದರೂ ರನ್ ಗತಿ ಹೆಚ್ಚಿಸಲಾಗದೇ ಹಿನ್ನೆಡೆ ಅನುಭವಿಸಿದರು. ಆ್ಯಂಡ್ರೆ ರಸೆಲ್ (9) ಬ್ಯಾಟ್ ಕೂಡಾ ಸಿಡಿಯಲಿಲ್ಲ.

ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಪ್ಯಾಟ್ ಕಮಿನ್ಸ್ (10) ಹಾಗೂ ಶಿವಂ ದುಬೆ (5) ರನ್ ಗಳಿಸಿದರು. ಡೆತ್ ಬೌಲಿಂಗ್‌ನಲ್ಲಿ ಕೆಕೆಆರ್ಕಟ್ಟಿ ಹಾಕಿದ ಮೊರಿಸ್ 23 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT