ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಡೆಲ್ಲಿ ಗೆಲುವಿನ ಶುಭಾರಂಭ; ಹಳಿ ತಪ್ಪಿದ ಚೆನ್ನೈ

Last Updated 10 ಏಪ್ರಿಲ್ 2021, 18:17 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ನಾಯಕರಾದಪದಾರ್ಪಣೆ ಪಂದ್ಯದಲ್ಲಿ ರಿಷಭ್ ಪಂತ್ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ ಗುರು ಮಹೇಂದ್ರ ಸಿಂಗ್ ಧೋನಿಗೆ ಮೊದಲ ಪಂದ್ಯದಲ್ಲೇ ಸೋಲಿನ ರುಚಿ ತೋರಿಸಿದ್ದಾರೆ.

189 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಪರಿಣಾಮ ಬೃಹತ್ ಗುರಿಯನ್ನು ಇನ್ನು ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿಯಶಸ್ವಿಯಾಗಿದೆ.

ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಚೆನ್ನೈ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಪರಿಣಾಮ ಪವರ್ ಪ್ಲೇನಲ್ಲಿ 65 ರನ್‌ಗಳು ಹರಿದು ಬಂದಿದ್ದವು.

ಇಲ್ಲಿಗೂ ಧವನ್-ಪೃಥ್ವಿ ಅಬ್ಬರ ಮುಗಿಯಲಿಲ್ಲ. ವಾಂಖೆಡೆ ಮೈದಾನದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ನೋಡ ನೋಡುತ್ತಿರುವಂತೆಯೇ ತಂಡದ ಮೊತ್ತವು 10 ಓವರ್‌ಗಳಲ್ಲಿ 99 ರನ್ ತಲುಪಿದ್ದವು.

ಪೃಥ್ವಿ ಕೇವಲ 27 ಎಸೆತಗಳಲ್ಲಿ ಹಾಗೂ ಧವನ್ 35 ಎಸೆತಗಳಲ್ಲಿ ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಅತ್ತ ನಾಯಕ ಧೋನಿ ಯೋಜನೆಗಳೆಲ್ಲ ತಲೆಕೆಳಗಾದವು.

ಧವನ್ ಹಾಗೂ ಪೃಥ್ವಿ ಜೋಡಿ ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಕೊನೆಗೂ ಈ ಜೊತೆಯಾಟ ಮುರಿಯುವಲ್ಲಿ ಡ್ವೇನ್ ಬ್ರಾವೋ ಯಶಸ್ವಿಯಾದರು. ಆಗಲೇ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 138 ರನ್ ಪೇರಿಸಿದ್ದರು. 38 ಎಸೆತಗಳನ್ನು ಎದುರಿಸಿದ ಪೃಥ್ವಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು.

ಅಂತಿಮ 30 ಎಸೆತಗಳಲ್ಲಿ ಡೆಲ್ಲಿ ಗೆಲುವಿಗೆ 38 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಧವನ್ ಶತಕದಂಚಿನಲ್ಲಿ ಎಡವಿದರು. 54 ಎಸೆತಗಳನ್ನು ಎದುರಿಸಿದ ಧವನ್ 10 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 85 ರನ್ ಗಳಿಸಿದರು.

ಮಾರ್ಕಸ್ ಸ್ಟೊಯಿನಿಸ್ (14) ವಿಕೆಟ್ ನಷ್ಟವಾದರೂನಾಯಕ ರಿಷಭ್ ಪಂತ್ ಗೆಲುವಿನ ರನ್ ಬಾರಿಸಿದರು. 12 ಎಸೆತಗಳನ್ನು ಎದುರಿಸಿದ ಪಂತ್ ಎರಡು ಬೌಂಡರಿಗಳ ನೆರವಿನಿಂದ 15 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ಶಾರ್ದೂಲ್ ಎರಡು ವಿಕೆಟ್ ಪಡೆದರೂ 53 ರನ್ ತೆತ್ತು ದುಬಾರಿಯನೆನಿಸಿದರು.

ರೈನಾ, ಕರನ್ ಸ್ಫೋಟಕ ಆಟ; ಚೆನ್ನೈ 188/7
ಈ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್, ಸುರೇಶ್ ರೈನಾ ಆಕರ್ಷಕ ಅರ್ಧಶತಕ (54) ಮತ್ತು ಸ್ಯಾಮ್ ಕರನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 188 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ನಾಯಕ ಧೋನಿ ವೈಫಲ್ಯ ಅನುಭವಿಸಿದರೆ ಮೊಯಿನ್ ಅಲಿ (36), ರವೀಂದ್ರ ಜಡೇಜ (26) ಹಾಗೂ ಅಂಬಟಿ ರಾಯುಡು (23) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು.

ಚೆನ್ನೈ ಓಪನರ್‌ಗಳ ವೈಫಲ್ಯ...
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು 7 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಫಾಫ್ ಡು ಪ್ಲೆಸಿಸ್ (0) ಹಾಗೂ ಋತುರಾಜ್ ಗಾಯಕ್‌ವಾಡ್ (5) ಪೆವಿಲಿಯನ್‌ಗೆ ಸೇರಿದ್ದರು. ಈ ಪೈಕಿ ಫಾಫ್ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇವೆರಡು ವಿಕೆಟ್‌ಗಳನ್ನು ಆವೇಶ್ ಖಾನ್ ಹಾಗೂ ಕ್ರಿಸ್ ವೋಕ್ಸ್ ಹಂಚಿಕೊಂಡರು.

ರೈನಾ, ಮೊಯಿನ್ ಅರ್ಧಶತಕದ ಜೊತೆಯಾಟ...
ಈ ಹಂತದಲ್ಲಿ ಜೊತೆಗೂಡಿದ ಮೊಯಿನ್ ಅಲಿ ಹಾಗೂ ಸುರೇಶ್ ರೈನಾ ತಂಡವನ್ನು ನಿಧಾನವಾಗಿ ಮುನ್ನಡೆಸಿದರು. 2016ರ ಬಳಿಕ ರೈನಾ ಇದೇ ಮೊದಲ ಬಾರಿಗೆ ನಾಲ್ಕನೇ ಕ್ರಮಾಂಕದಲ್ಲಿ ಕಾಣಿಸಿಕೊಂಡರು. ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು.

ಮೊಯಿನ್ ಅಲಿ ಹಾಗೂ ಸುರೇಶ್ ರೈನಾ ಮೂರನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ನುಡವೆ ಉತ್ತಮವಾಗಿ ಆಡುತ್ತಿದ್ದ ಮೊಯಿನ್, ಆರ್. ಅಶ್ವಿನ್ ದಾಳಿಯಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ಮೂರನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. 24 ಎಸೆತಗಳನ್ನು ಎದುರಿಸಿದ ಅಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು.

10 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಮೂರು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತ್ತು.

32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸುರೇಶ್ ರೈನಾ...
ಇನ್ನೊಂದೆಡೆ ತಮ್ಮಲ್ಲಿ ಇನ್ನೂ ಕ್ರಿಕೆಟ್ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿರುವ ಸುರೇಶ್ ರೈನಾ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ 2021ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಮಿಂಚುವ ಮೂಲಕ ಎದುರಾಳಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು.

ರಾಯುಡು ಜೊತೆಗೂ ಫಿಫ್ಟಿ ಜೊತೆಯಾಟ...
ನಾಲ್ಕನೇ ವಿಕೆಟ್‌ಗೆ ರಾಯುಡು ಜೊತೆಗೂ 63 ರನ್‌ಗಳ ಜೊತೆಯಾಟದಲ್ಲಿ ರೈನಾ ಭಾಗಿಯಾದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರಾಯುಡು, ರನ್ ಗತಿ ಏರಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. 16 ಎಸೆತಗಳನ್ನು ಎದುರಿಸಿದ ರಾಯುಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದರು.

ರೈನಾ ರನೌಟ್..ಧೋನಿ ಡಕ್ ಔಟ್
ಕೊನೆಯ ಹಂತದಲ್ಲಿ ಸುರೇಶ್ ರೈನಾ ರನೌಟ್ ಆಗುವ ಮೂಲಕ ಹಿನ್ನೆಡೆ ಅನುಭವಿಸಿದರು. ಇದರ ಬೆನ್ನಲ್ಲೇ ನಾಯಕ ಮಹೇಂದ್ರ ಸಿಂಗ್ ಧೋನಿ ಖಾತೆ ತೆರೆಯಲಾಗದೇ ನಿರಾಸೆ ಅನುಭವಿಸಿದರು.

36 ಎಸೆತಗಳನ್ನು ಎದುರಿಸಿದ ರೌನಾ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದರು. ಇನ್ನೊಂದೆಡೆ ಆವೇಶ್ ಖಾನ್ ದಾಳಿಯಲ್ಲಿ ಧೋನಿ ಕ್ಲೀನ್ ಬೌಲ್ಡ್ ಆದರು.

ಕರನ್, ಜಡೇಜ ಅಬ್ಬರ, ಚೆನ್ನೈ 188/7
ಕೊನೆಯ ಹಂತದಲ್ಲಿ ಕೇವಲ 27 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದ ಸ್ಯಾಮ್ ಕರನ್ ಹಾಗೂ ರವೀಂದ್ರ ಜಡೇಜ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಈ ಪೈಕಿ ಟಾಮ್ ಕರನ್ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 23 ರನ್ ಸೊರೆಗೈಯಲಾಗಿತ್ತು. ಎದುರಾಳಿ ತಂಡದ ಪರ ಆಡುತ್ತಿರುವ ಸೋದರ ಟಾಮ್ ಕರನ್ ದಾಳಿಯನ್ನು ಸ್ಯಾಮ್ ಕರನ್ ದಂಡಿಸಿದರು. ಅಲ್ಲದೆ 15 ಎಸೆತಗಳಲ್ಲಿ 34ರನ್ ಸಿಡಿಸಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌‌ಗಳು ಸೇರಿದ್ದವು.

ಅತ್ತ ಗಾಯಮುಕ್ತರಾಗಿರುವ ಜಡೇಜ ಐಪಿಎಲ್ ಮೂಲಕ ತಮ್ಮ ಪುನರಾಗಮನವನ್ನು ಸಾರಿದರು. ಅಲ್ಲದೆ 17 ಎಸೆತಗಳಲ್ಲಿ ಮೂರು ಬೌಂಡರಿ ನೆರವಿನಿಂದ 26 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಏಳು ವಿಕೆಟ್ ನಷ್ಟಕ್ಕೆ 188 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಡೆಲ್ಲಿ ಪರ ಕ್ರಿಸ್ ವೋಕ್ಸ್ ಹಾಗೂ ಆವೇಶ್ ಖಾನ್ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು. ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 47 ರನ್ ಬಿಟ್ಟುಕೊಟ್ಟು ಸಾಕಷ್ಟು ದುಬಾರಿಯೆನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT