ಸೋಮವಾರ, ಮೇ 23, 2022
30 °C
ಸಿಎಸ್‌ಕೆ ಎದುರು ಹೋರಾಟದ ಮೊತ್ತ ಗಳಿಸಿದ ಸನ್‌ರೈಸರ್ಸ್‌ ಹೈದರಾಬಾದ್

IPL 2021 | CSK vs SRH: ಮನೀಷ್–ವಾರ್ನರ್ ಅರ್ಧಶತಕದ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕರ್ನಾಟಕದ ಮನೀಷ್ ಪಾಂಡೆ ಬುಧವಾರ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ‌

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಜೊತೆಗೆ ಮನೀಷ್ ಶತಕದ ಜೊತೆಯಾಟವಾಡಿದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 171 ರನ್‌ ಗಳಿಸಿತು.

ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈನ ಎಡಗೈ ಮಧ್ಯಮವೇಗಿ ಸ್ಯಾಮ್ ಕರನ್ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಜಾನಿ ಬೆಸ್ಟೊ ವಿಕೆಟ್ ಗಳಿಸಿದರು. ಕಳೆದ ಪಂದ್ಯಗಳಲ್ಲಿ ಲಯಕ್ಕಾಗಿ ಪರದಾಡಿದ್ದ ವಾರ್ನರ್ ಕ್ರೀಸ್‌ನಲ್ಲಿ ಕಾಲೂರುವ ಪ್ರಯತ್ನದಲ್ಲಿದ್ದರು. ಅವರೊಂದಿಗೆ ಸೇರಿದ ಪಾಂಡೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 106 ರನ್‌ಗಳನ್ನು ಸೇರಿಸಿದರು. 

35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮನೀಷ್, ತಮ್ಮ ನಾಯಕನಿಗಿಂತಲೂ ವೇಗವಾಗಿ ಆಡಿದರು. ವಾರ್ನರ್ 50 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.ವಾರ್ನರ್ ಐಪಿಎಲ್‌ನಲ್ಲಿ ಇನ್ನೂರು ಸಿಕ್ಸರ್‌ಗಳನ್ನು ಹೊಡೆದವರ ಪಟ್ಟಿಗೆ ಸೇರಿಕೊಂಡರು.

18ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಲುಂಗಿ ಗಿಡಿ ಮುರಿದರು. ಮೊದಲ ಎಸೆತದಲ್ಲಿ ವಾರ್ನರ್ ಮತ್ತು ಐದನೇ ಎಸೆತದಲ್ಲಿ ಮನೀಷ್ ವಿಕೆಟ್‌ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಕೇನ್ ವಿಲಿಯಮ್ಸನ್ (ಔಟಾಗದೆ 26, 10ಎ) ಮತ್ತು ಅನುಭವಿ ಆಲ್‌ರೌಂಡರ್ ಕೇದಾರ್ ಜಾಧವ್ (ಔಟಾಗದೆ 12) ಚುರುಕಾಗಿ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಈ ಟೂರ್ನಿಯಲ್ಲಿ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಚೆನ್ನೈನ ದೀಪಕ್ ಚಾಹರ್ ಮತ್ತು ಹೋದ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಒಂದೂ ವಿಕೆಟ್ ಸಿಗಲಿಲ್ಲ. ಮಧ್ಯಮವೇಗಿ ಶಾರ್ದೂಲ್ ಠಾಕೂರ್ ವಿಕೆಟ್ ಗಳಿಸಲಿಲ್ಲ ಮತ್ತು ದುಬಾರಿಯೂ ಆದರು.

ಈ ಪಂದ್ಯದಲ್ಲಿ ಇಮ್ರಾನ್ ತಾಹೀರ್ ಅವರಿಗೆ ವಿಶ್ರಾಂತಿ ನೀಡಿದ ಚೆನ್ನೈ ಮೋಯಿನ್ ಅಲಿಗೆ ಅವಕಾಶ ನೀಡಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು