ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸುವಲ್ಲಿ ಎಡವಿದ ಸಂಜು; ರಾಜಸ್ಥಾನಕ್ಕೆ ಸೋಲು

Last Updated 12 ಏಪ್ರಿಲ್ 2021, 18:42 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೋಮವಾರ ನಡೆದ ರೋಚಕ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ನಾಲ್ಕು ರನ್ ಅಂತರದ ರೋಚಕ ಗೆಲುವು ಬಾರಿಸಿದೆ.

ಪಂಜಾಬ್ ಒಡ್ಡಿದ 222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ, ನಾಯಕ ಸಂಜು ಸ್ಯಾಮ್ಸನ್ (119) ಅಮೋಘ ಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಈ ಮೂಲಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟವು ವ್ಯರ್ಥವೆನಿಸಿತ್ತು. ಹಾಗಿದ್ದರೂ ನಾಯಕರಾಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಬಾರಿಸಿದ ಹಿರಿಮೆಗೆ ಪಾತ್ರವಾದರು.

ಅಂತಿಮ ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಆದರೆ ಸಂಜು ಔಟ್ ಆಗುವುದರೊಂದಿಗೆ ರಾಜಸ್ಥಾನ ಗೆಲುವಿನ ಕನಸು ಕಮರಿ ಹೋಯಿತು.

ಈ ಮೊದಲು ನಾಯಕ ಕೆಎಲ್ ರಾಹುಲ್ (91) ಹಾಗೂ ದೀಪಕ್ ಹೂಡಾ (64) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವು 221 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬೃಹತ್ ಗುರಿ ಹಿಂಬಾಲಿಸಿದ ರಾಜಸ್ಥಾನ ಆರಂಭ ಉತ್ತಮವಾಗಿರಲಿಲ್ಲ. ಬೆನ್ ಸ್ಟೋಕ್ಸ್ (0) ಅವರನ್ನು ಖಾತೆ ತೆರೆಯುವ ಮುನ್ನವೇ ಮೊಹಮ್ಮದ್ ಶಮಿ ಮರಳಿಸಿದರು. ಮನನ್ ಮೋಹ್ರಾ (12) ನಿರೀಕ್ಷೆ ತಲುಪಲಿಲ್ಲ. ಈ ಹಂತದಲ್ಲಿ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ (25), ಆರ್‌ಆರ್ ಪಾಳೇಯದಲ್ಲಿ ನಿರೀಕ್ಷೆ ಮೂಡಿಸಿದರು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಬಟ್ಲರ್ ಔಟ್ ಆಗುವುದರೊಂದಿಗೆ ರಾಜಸ್ಥಾನ ಮಗದೊಮ್ಮೆ ಹಿನ್ನೆಡೆಗೊಳಗಾಯಿತು. 13 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿಗಳಿಂದ 25 ರನ್ ಗಳಿಸಿದರು.

ಅತ್ತ ಎರಡು ಜೀವದಾನಗಳ ಪ್ರಯೋಜನ ಪಡೆದ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟವನ್ನು ಮುಂದುವರಿಸಿದರು. ಅಂತಿಮ 10 ಓವರ್‌ಗಳಲ್ಲಿ ರಾಜಸ್ಥಾನ ಗೆಲುವಿಗೆ 127 ರನ್‌‌ಗಳ ಅವಶ್ಯಕತೆಯಿತ್ತು.

ನಾಯಕನ ಆಟವಾಡಿದ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಿಯಾನ್ ಪರಾಗ್ ಜೊತೆಗೂಡಿದ ಸಂಜು ಸ್ಯಾಮನ್ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ಜೋಡಿ ಕೇವಲ 19 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ಪಂದ್ಯದಲ್ಲಿ ರಾಜಸ್ಥಾನ ತಂಡವು ತಿರುಗೇಟು ನೀಡಲು ನೆರವಾದರು. ಅಂತಿಮ ನಾಲ್ಕು ಓವರ್‌ಗಳಲ್ಲಿ ರಾಜಸ್ಥಾನ ಗೆಲುವಿಗೆ 48 ರನ್‌ಗಳ ಅವಶ್ಯಕತೆಯಿತ್ತು.

ಆದರೆ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಪರಾಗ್ ಹೊರದಬ್ಬಿದ ಮೊಹಮ್ಮದ್ ಶಮಿ ಪಂಜಾಬ್‌ಗೆ ಪಂದ್ಯದಲ್ಲಿ ಪುನರಾಗಮನ ಮಾಡಲು ನೆರವಾದರು. 11 ಎಸೆತಗಳನ್ನು ಎದುರಿಸಿದ ಪರಾಗ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು.

ಕೊನೆಯ ಎಸೆತದ ವರೆಗೂ ಹೋರಾಟ ನೀಡಿದ ಸಂಜು, ಪಂದ್ಯದ ನೈಜ ಹೀರೊ ಎನಿಸಿದರು. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸುವ ವಿಫಲವಾಗುವುದರೊಂದಿಗೆ ರಾಜಸ್ಥಾನ ಹೋರಾಟವು ಅಂತ್ಯಗೊಂಡಿತ್ತು. ಅಲ್ಲದೆ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಮೂಲಕ ನಾಲ್ಕು ರನ್ ಅಂತರದ ಸೋಲಿಗೆ ಶರಣಾಯಿತು.

63 ಎಸೆತಗಳನ್ನು ಎದುರಿಸಿದ ಸಂಜು 12 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 119 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಸಂಜು ಬ್ಯಾಟ್‌ನಿಂದ ಸಿಡಿದ ಮೂರನೇ ಶತಕವಾಗಿದೆ.

ರಾಹುಲ್ 91, ಹೂಡಾ 64, ಗೇಲ್ 40; ಪಂಜಾಬ್ 221/6
ವಾಂಖೆಡೆ ಕ್ರೀಡಾಂಗಣದಲ್ಲಿ ನಾಯಕ ಕೆ.ಎಲ್‌.ರಾಹುಲ್ ಮತ್ತು ದೀಪಕ್ ಹೂಡಾ ಅವರ ಅಬ್ಬರಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳು ಬಸವಳಿದರು. ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ (91; 50 ಎಸೆತ, 7 ಬೌಂಡರಿ, 5 ಸಿಕ್ಸರ್‌) ಮತ್ತು ನಾಲ್ಕನೇ ಕ್ರಮಾಂಕದ ದೀಪಕ್ (64;28 ಎ, 4 ಬೌಂ, 6 ಸಿ) ನಡುವಿನ ಶತಕದ ಜೊತೆಯಾಟದಿಂದ ಪಂಜಾಬ್ ಕಿಂಗ್ಸ್‌ 6ಕ್ಕೆ 221 ರನ್ ಗಳಿಸಿತು.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದೇ ಮೊದಲ ಬಾರಿ ಐಪಿಎಲ್‌ಗೆ ಆಯ್ಕೆಯಾಗಿರುವ ಸೌರಾಷ್ಟ್ರದ ಚೇತನ್ ಸಕರಿಯ ಮೊದಲ ಪಂದ್ಯದಲ್ಲೇ ಅಂತಿಮ 11ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ತಂಡದ ಆಡಳಿತ ತಮ್ಮ ಮೇಲೆ ಇರಿಸಿದ ವಿಶ್ವಾಸವನ್ನು ಉಳಿಸಿದ ಅವರು ಮೂರನೇ ಓವರ್‌ನಲ್ಲೇ ಆರಂಭಿಕ ಜೋಡಿಯ ಜೊತೆಯಾಟ ಮುರಿದರು. ಸ್ವಿಂಗ್ ಆಗಿ ಆಫ್‌ಸ್ಟಂಪಿನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಿದ ಮಯಂಕ್‌ ವಿಕೆಟ್ ಕೀಪರ್ ಸಂಜುಗೆ ಸುಲಭ ಕ್ಯಾಚ್ ನೀಡಿ ಮರಳಿದರು.

ನಂತರ ರಾಹುಲ್ ಮತ್ತು ಕ್ರಿಸ್ ಗೇಲ್ ಜೊತೆಯಾಟ ಕಳೆಕಟ್ಟಿತು. ಮೋಹಕ ಬ್ಯಾಟಿಂಗ್ ಮೂಲಕ ರಾಹುಲ್ ಬೌಂಡರಿಗಳನ್ನು ಗಳಿಸುತ್ತಿದ್ದರೆ ಲಯ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡ ಗೇಲ್‌ ಐದನೇ ಓವರ್‌ನಲ್ಲಿ ಮುಸ್ತಫಿಜುರ್ ರಹಮಾನ್ ಅವರನ್ನು ಬೌಂಡರಿಗೆ ಅಟ್ಟಿ ಆಕ್ರಮಣಕಾರಿ ಆಟಕ್ಕೆ ಕುದುರಿಕೊಂಡರು. ಕ್ರಿಸ್ ಮೊರಿಸ್‌, ಶ್ರೇಯಸ್ ಗೋಪಾಲ್ ಮತ್ತು ಬೆನ್ ಸ್ಟೋಕ್ಸ್ ಎಸೆತಗಳಲ್ಲಿ ಬೌಂಡರಿಗಳು ಹರಿದುಬಂದವು.

ಶ್ರೇಯಸ್ ಗೋಪಾಲ್ ಹಾಕಿದ ಇನಿಂಗ್ಸನ್‌ ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಗೆರೆ ಬಳಿ ಕೆ.ಎಲ್‌.ರಾಹುಲ್ ಅವರ ಸುಲಭ ಕ್ಯಾಚ್ ಕೈಚೆಲ್ಲಿದ ಬೆನ್ ಸ್ಟೋಕ್ಸ್‌ ಬೌಂಡರಿಯನ್ನೂ ಬಿಟ್ಟುಕೊಟ್ಟರು. ಇದರೊಂದಿಗೆ ತಂಡದ ಮೊತ್ತ 50 ದಾಟಿತು.

ಒಂಬತ್ತನೇ ಓವರ್‌ನಲ್ಲಿ ರಾಹುಲ್ ಮತ್ತು ಗೇಲ್ ನಡುವಿನ ಜೊತೆಯಾಟ ಅರ್ಧಶತಕ ದಾಟಿತು. ಆದರೆ ಮುಂದಿನ ಓವರ್‌ನಲ್ಲಿ ಯುವ ಆಟಗಾರ ರಿಯಾನ್ ಪರಾಗ್ ಕೈಗೆ ಚೆಂಡು ನೀಡಿದ ಸಂಜು ಸ್ಯಾಮ್ಸನ್ ಯಶಸ್ಸು ಕಂಡರು. ಲೆಗ್ ಬ್ರೇಕ್ ಬೌಲರ್ ರಿಯಾನ್ ಹಾಕಿದ ಆಫ್‌ ಬ್ರೇಕ್‌ ಎಸೆತದ ಗತಿ ನಿರ್ಣಯಿಸುವಲ್ಲಿ ಎಡವಿದ ಗೇಲ್‌ ಚೆಂಡನ್ನು ಬೌಂಡರಿಗೆ ಅಟ್ಟುವ ಪ್ರಯತ್ನದಲ್ಲಿ ಬೆನ್ ಸ್ಟೋಕ್ಸ್‌ಗೆ ಕ್ಯಾಚ್ ನೀಡಿದರು.

ರಾಹುಲ್–ಹೂಡಾ ಜೊತೆಯಾಟ

ನಾಯಕನ ಜೊತೆಗೂಡಿದ ದೀಪಕ್ ಹೂಡಾ ಭರ್ಜರಿ ಹೊಡೆತಗಳ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. 13ನೇ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿ ರಾಹುಲ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಓವರ್‌ನಲ್ಲಿ ದೀಪಕ್ ಹೂಡಾ ಕೂಡ ಎರಡು ಸಿಕ್ಸರ್‌ ಗಳಿಸಿದರು. ಶ್ರೇಯಸ್ ಹಾಕಿದ 14ನೇ ಓವರ್‌ನಲ್ಲಿ ದೀಪಕ್ ಮೂರು ಸಿಕ್ಸರ್ ಸಿಡಿಸಿದರು. 16ನೇ ಓವರ್‌ನ ಮೊದಲನೇ ಎಸೆತದಲ್ಲಿ ಕ್ರಿಸ್ ಮೊರಿಸ್ ಅವರನ್ನು ಸಿಕ್ಸರ್‌ಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿ ಅರ್ಧಶತಕ ಪೂರೈಸಿದರು. 50 ರನ್‌ ಗಳಿಸಲು ಅವರು ತೆಗೆದುಕೊಂಡದ್ದು 20 ಎಸೆತ ಮಾತ್ರ.

ಕ್ರಿಸ್ ಮೊರಿಸ್ ಅವರ ಎಸೆತದಲ್ಲಿ ಸಿಕ್ಸರ್‌ ಗಳಿಸುವ ಪ್ರಯತ್ನದಲ್ಲಿ ಹೂಡಾ ಕ್ಯಾಚ್ ನೀಡಿ ಮರಳಿದರು. ಎಡಕ್ಕೆ ಜಿಗಿದು ಸಕರಿಯ ಪಡೆದ ಮೋಹಕ ಕ್ಯಾಚ್‌ಗೆ ನಿಕೋಲಸ್ ಪೂರನ್ ಬಲಿಯಾದರು. ಕೊನೆಯ ಓವರ್‌ನಲ್ಲಿ ಬೌಂಡರಿ ಗೆರೆಯ ಬಳಿ ರಾಹುಲ್ ತೆವಾಥಿಯಾ ಮಾಡಿದ ಮ್ಯಾಜಿಕ್‌ಗೆ ಕೆ.ಎಲ್‌.ರಾಹುಲ್ ವಿಕೆಟ್ ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT