ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಶಿಖರವನ್ನೇರಿದ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆತ

Last Updated 2 ಮೇ 2021, 17:41 IST
ಅಕ್ಷರ ಗಾತ್ರ

ಅಹಮದಾಬಾದ್: ಗಬ್ಬರ್ ಖ್ಯಾತಿಯ ಶಿಖರ್ ಧವನ್ ಆಕ್ರಮಣಕಾರಿ ಅರ್ಧಶತಕದ (69*) ಬೆಂಬಲದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಆಡಿರುವ ಎಂಟು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿರುವ ರಿಷಭ್ ಪಂತ್ ಬಳಗವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಪಂಜಾಬ್ ಎಂಟು ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲೇ ಮುಂದುವರಿದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಉಸ್ತುವಾರಿ ಕ್ಯಾಪ್ಟನ್ ಮಯಂಕ್ ಅಗರವಾಲ್ ಅಜೇಯ 99 ರನ್ ಬೆಂಬಲದೊಂದಿಗೆ 166 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿಗೆ ಅನುಭವಿ ಶಿಖರ್ ಧವನ್ ಹಾಗೂ ಯುವ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮಗದೊಮ್ಮೆ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲೇ 63 ರನ್ ಪೇರಿಸಿದರು.

ಈ ಹಂತದಲ್ಲಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಶಾ ಅವರನ್ನು ಹರ್‌ಪ್ರೀತ್ ಬ್ರಾರ್ ಕ್ಲೀನ್ ಬೌಲ್ಡ್ ಮಾಡಿದರು. ಕಳೆದ ಪಂದ್ಯದಲ್ಲಿ ಕೊಹ್ಲಿ, ಮ್ಯಾಕ್ಸ್‌ವೆಲ್, ಎಬಿ ಡಿ ವಿಕೆಟ್ ಪಡೆದಿದ್ದ ಹರ್‌ಪ್ರೀತ್ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಇದಕ್ಕೆ ಧವನ್ ಹಾಗೂ ಸ್ಟೀವನ್ ಸ್ಮಿತ್ (24) ಅವಕಾಶ ನೀಡಲಿಲ್ಲ. ಸ್ಮಿತ್ ಜೊತೆಗೂ 48 ರನ್ ಜೊತೆಯಾಟದಲ್ಲಿ ಭಾಗಿಯಾದ ಧವನ್ ಡೆಲ್ಲಿಯನ್ನು ಗೆಲುವಿನತ್ತ ಮುನ್ನಡೆಸಿದರು.

ಕೇವಲ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಧವನ್ ಬಳಿಕ ನಾಯಕ ರಿಷಭ್ ಪಂತ್ (14) ಹಾಗೂ ಶಿಮ್ರಾನ್ ಹೆಟ್ಮೆಯರ್ (16*) ಜೊತೆಗೂಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಈ ಮೂಲಕ 17.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

47 ಎಸೆತಗಳನ್ನು ಎದುರಿಸಿದ ಧವನ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 69 ರನ್ ಗಳಿಸಿ ಅಜೇಯರಾಗುಳಿದರು.

ಮಯಂಕ್ ಅಗರವಾಲ್ ಬ್ಯಾಟಿಂಗ್ ಸೊಬಗು...
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಗೆಳೆಯ ಕೆ.ಎಲ್. ರಾಹುಲ್ ಅವರಿಂದ ನಾಯಕತ್ವದ ಹೊಣೆಯನ್ನು ಹೊತ್ತುಕೊಂಡ ಮಯಂಕ್ ಅಗರವಾಲ್ ಬ್ಯಾಟಿಂಗ್‌ನಲ್ಲಿಯೂ ಮಿಂಚಿದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಕೇವಲ ಒಂದು ರನ್ ಅಂತರದಿಂದ ಶತಕ ತಪ್ಪಿಸಿಕೊಂಡ ಮಯಂಕ್ (ಔಟಾಗದೆ 99; 58ಎಸೆತ, 8ಬೌಂಡರಿ, 4ಸಿಕ್ಸರ್) ಏಕಾಂಗಿ ಹೋರಾಟ ಮಾಡಿದರು. ಅದರಿಂದಾಗಿ ಪಂಜಾಬ್ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 166 ರನ್ ಗಳಿಸಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಪ್ರಭಸಿಮ್ರನ್ ಸಿಂಗ್ (12 ರನ್) ನಾಲ್ಕನೇ ಓವರ್‌ನಲ್ಲಿ ಔಟಾದರು. ಕ್ರಿಸ್‌ ಗೇಲ್ ಒಂದು ಬೌಂಡರಿ ಮತ್ತು ಸಿಕ್ಸರ್ ಹೊಡೆದು ಭರವಸೆ ಮೂಡಿಸಿದ್ದರು. ಆದರೆ, ಕಗಿಸೊ ರಬಾಡ ಎಸೆತದಲ್ಲಿ ಔಟಾದರು. ಡೇವಿಡ್ ಮಲಾನ್ (26ರನ್) ಕುದುರಿಕೊಳ್ಳುವ ಹೊತ್ತಿನಲ್ಲಿ ಅಕ್ಷರ್ ಪಟೇಲ್ ಕೈಚಳಕ ತೋರಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು.

ಒಂದು ಕಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ಮಯಂಕ್ ಮಾತ್ರ ಸಮಚಿತ್ತದಿಂದ ಬ್ಯಾಟಿಂಗ್ ಮಾಡಿದರು. ಮೂರು ಮತ್ತು 16ನೇ ಓವರ್‌ನಲ್ಲಿ ಸಿಕ್ಕ ಜೀವದಾನಗಳನ್ನು ಇನಿಂಗ್ಸ್‌ ಕಟ್ಟಲು ಬಳಸಿಕೊಂಡರು. ತಂಡವು ಹೋರಾಟದ ಮೊತ್ತ ಗಳಿಸಲು ಕಾರಣರಾದರು.

37 ಎಸೆತಗಳಲ್ಲಿ 50 ರನ್‌ ಗಳಿಸಿದ ಮಯಂಕ್ ನಂತರ ಆಟದ ವೇಗ ಹೆಚ್ಚಿಸಿದರು. ನಂತರದ 21 ಎಸೆತಗಳಲ್ಲಿ 49 ರನ್‌ ಸೇರಿಸಿದರು. ಆದರೆ, ಔಟಾಗದೇ ಉಳಿದರೂ ಶತಕ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ರನ್‌ಗಳು ಬರಲಿಲ್ಲ.

ಡೆಲ್ಲಿ ತಂಡದ ವೇಗಿ ರಬಾಡ ಒಟ್ಟು ಮೂರು ವಿಕೆಟ್‌ಗಳನ್ನು ಗಳಿಸಿದರು. ಆವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT