ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs KKR: 'ಕಪ್" ಕನಸಿಗೆ ಜೀವ ತುಂಬುವತ್ತ ವಿರಾಟ್ ಕೊಹ್ಲಿ ಚಿತ್ತ

ರಾಯಲ್ ಚಾಲೆಂಜರ್ಸ್ ಬೆಂಗಳೂರು –ಕೋಲ್ಕತ್ತ ನೈಟ್ ರೈಡರ್ಸ್‌ ಎಲಿಮಿನೇಟರ್ ಇಂದು
Last Updated 10 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ದುಬೈ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಕಪ್ ಗೆಲ್ಲುವ ಕನಸು ನನಸಾಗಬೇಕಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಜಯಿಸಲೇಬೇಕು.

ಮುಂದಿನ ವರ್ಷದಿಂದ ಭಾರತ ಟಿ20 ತಂಡ ಮತ್ತು ಆರ್‌ಸಿಬಿಯ ನಾಯಕತ್ವವನ್ನು ಬಿಟ್ಟುಕೊಡುವುದಾಗಿ ವಿರಾಟ್ ಈಗಾಗಲೇ ಪ್ರಕಟಿಸಿದ್ದಾರೆ. ಅವರು ನಾಯಕತ್ವ ವಹಿಸಿಕೊಂಡ ನಂತರ ಮತ್ತು ಅದಕ್ಕೂ ಮುನ್ನ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿಲ್ಲ. ಆದ್ದರಿಂದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜಯಿಸಿದರೆ ಮಾತ್ರ ಎರಡನೇ ಕ್ವಾಲಿಫೈಯರ್‌ಗೆ ಅವಕಾಶ ಸಿಗಲಿದೆ. ಅಲ್ಲಿಯೂ ಗೆದ್ದರೆ ಫೈನಲ್‌ನಲ್ಲಿ ಸೆಣಸಬಹುದು.

2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದ್ದ ಆರ್‌ಸಿಬಿಗೆ ಕಪ್ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೋದ ಬಾರಿ ಪ್ಲೇ ಆಫ್‌ನಲ್ಲಿ ಮುಗ್ಗರಿಸಿತ್ತು. 2008ರಿಂದಲೂ ಇರುವ ತಂಡ ಇನ್ನೂ ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡ ಈ ಬಾರಿ ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿದೆ. ಮೂರನೇ ಸ್ಥಾನ ಪಡೆದು ಎಲಿಮಿನೇಟರ್‌ಗೆ ಬಂದಿದೆ.

ಆರಂಭಿಕ ಜೋಡಿ ವಿರಾಟ್, ದೇವದತ್ತ ಪಡಿಕ್ಕಲ್, ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ವಿರಾಟ್, ದೇವದತ್ತ ಕೆಲವು ಪಂದ್ಯಗಳಲ್ಲಿ ನಿರಾಶೆ ಅನುಭವಿಸಿದ್ದರೂ ಮ್ಯಾಕ್ಸ್‌ವೆಲ್ ಮಾತ್ರ ರನ್‌ಗಳ ಹೊಳೆ ಹರಿಸುತ್ತಲೇ ಇದ್ದಾರೆ. ಕೊನೆಯ ಲೀಗ್ ಪಂದ್ಯದಲ್ಲಿ ಭರತ್ ಕೂಡ ಅಬ್ಬರದ ಅರ್ಧಶತಕ ಬಾರಿಸಿ ಭರವಸೆಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಇರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಆದರೆ ತಂಡದ ಇಲ್ಲಿಯವರೆಗಿನ ಯಶಸ್ಸಿನಲ್ಲಿ ಬೌಲರ್‌ಗಳಿಗೆ ಸಿಂಹಪಾಲು ಸಲ್ಲಬೇಕು. ಅದರಲ್ಲೂ ಮಧ್ಯಮವೇಗಿ ಹರ್ಷಲ್ ಪಟೇಲ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರದ್ದೇ ಪಾರುಪತ್ಯ. ಅವರಿಬ್ಬರಿಗೂ ತಕ್ಕ ಜೊತೆ ನೀಡುತ್ತಿರುವ ಮೊಹಮ್ಮದ್ ಸಿರಾಜ್ ಕೂಡ ಮಿಂಚುತ್ತಿದ್ದಾರೆ.

ಆದರೆ, ಕೋಲ್ಕತ್ತ ತಂಡವನ್ನು ಸುಲಭವಾಗಿ ಪರಿಗಣಿಸಿದರೆ ವಿರಾಟ್‌ ಬಳಗಕ್ಕೆ ಆಘಾತವಾಗಬಹುದು. ಲೀಗ್ ಹಂತದ ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿಯೇ ಅಂತಹದೊಂದು ಹೀನಾಯ ಸೋಲನ್ನು ಆರ್‌ಸಿಬಿಯು ಕೋಲ್ಕತ್ತ ಎದುರು ಅನುಭವಿಸಿತ್ತು. ವರುಣ ಚಕ್ರವರ್ತಿ ಸ್ಪಿನ್ ದಾಳಿಗೆ ದೂಳೀಪಟವಾಗಿತ್ತು. ನಂತರದ ಪಂದ್ಯಗಳಲ್ಲಿ ಏಳು–ಬೀಳು ಕಂಡರೂ ನಾಲ್ಕನೇ ಸ್ಥಾನದಲ್ಲಿ ಗಟ್ಟಿಯಾಗಿ ಹೆಜ್ಜೆಯೂರುವಲ್ಲಿ ತಂಡವು ಯಶಸ್ವಿಯಾಗಿದೆ. ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ನವಪ್ರತಿಭೆ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಆದರೆ ನಾಯಕ ಏಯಾನ್ ಮಾರ್ಗನ್ ಮತ್ತು ಅನುಭವಿ ದಿನೇಶ್ ಕಾರ್ತಿಕ್ ತಮ್ಮ ನೈಜ ಫಾರ್ಮ್‌ಗೆ ಮರಳಿಲ್ಲ. ಸುನೀಲ್ ನಾರಾಯನ್, ಶಿವಂ ದುಬೆ ತಮ್ಮ ಆಲ್‌ರೌಂಡ್ ಆಟಕ್ಕೆ ಕುದುರಿಕೊಂಡರೆ ಆರ್‌ಸಿಬಿಗೆ ಕಷ್ಟವಾಗಬಹುದು. ಆ್ಯಂಡ್ರೆ ರಸೆಲ್ ಮತ್ತು ಬೌಲರ್ ಪ್ರಸಿದ್ಧಕೃಷ್ಣ ಅವರು ಗಾಯದಿಂದ ಚೇತರಿಸಿಕೊಂಡಿದ್ದು ಕಣಕ್ಕಿಳಿಯುವ ಸಾಧ್ಯತೆ ಇದೆ.

ಪ್ರಶಸ್ತಿ ಜಯದ ಕನಸು ಜೀವಂತವಾಗಿರಬೇಕಾದರೆ ಉಭಯ ತಂಡಗಳಿಗೂ ಇದು ಜಯಿಸಲೇಬೇಕಾದ ಪಂದ್ಯ. ಆದ್ದರಿಂದ ರೋಚಕ ರಸದೌತಣ ನೀಡುವ ಎಲ್ಲ ಸಾಧ್ಯತೆಗಳೂ ಇವೆ.

ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಶಾಬಾಜ್ ಅಹಮದ್, ಡ್ಯಾನ್ ಕ್ರಿಸ್ಟಿಯನ್, ಸಚಿನ್ ಬೇಬಿ, ಟಿಮ್ ಡೇವಿಡ್.

ಕೋಲ್ಕತ್ತ ನೈಟ್‌ರೈಡರ್ಸ್‌: ಏಯಾನ್ ಮಾರ್ಗನ್ (ನಾಯಕಿ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಹರಭಜನ್ ಸಿಂ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ಶಿವಂ ದುಬೆ, ವರುಣ ಚಕ್ರವರ್ತಿ, ಆ್ಯಂಡ್ರೆ ರಸೆಲ್, ನಿತೀಶ್ ರಾಣಾ, ಗುರುಕೀರತ್ ಸಿಂಗ್ ಮಾನ್. ಸುನೀಲ್ ನಾರಾಯಣ.

ಪಂದ್ಯ ಆರಂಭ: ರಾತ್ರಿ 7.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

––

ಬಲಾಬಲ

ಪಂದ್ಯಗಳು: 28

ಆರ್‌ಸಿಬಿ ಜಯ; 13

ಕೋಲ್ಕತ್ತ ಜಯ; 15

––

ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್

ಗ್ಲೆನ್ ಮ್ಯಾಕ್ಸ್‌ವೆಲ್ (ಆರ್‌ಸಿಬಿ) 498

ವಿರಾಟ್ ಕೊಹ್ಲಿ (ಆರ್‌ಸಿಬಿ) 366

ರಾಹುಲ್ ತ್ರಿಪಾಠಿ (ಕೆಕೆಆರ್) 377

ಶುಭಮನ್ ಗಿಲ್ (ಕೆಕೆಆರ್) 352

––

ಹೆಚ್ಚು ವಿಕೆಟ್ ಗಳಿಸಿದವರು

ಹರ್ಷಲ್ ಪಟೇಲ್ (ಆರ್‌ಸಿಬಿ); 30

ಯಜುವೇಂದ್ರ ಚಾಹಲ್ (ಆರ್‌ಸಿಬಿ)‍; 16

ವರುಣ ಚಕ್ರವರ್ತಿ (ಕೆಕೆಆರ್); 16

ಆ್ಯಂಡ್ರೆ ರಸೆಲ್ (ಕೆಕೆಆರ್); 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT