ಗುರುವಾರ , ಆಗಸ್ಟ್ 18, 2022
23 °C

IPL 2021: ಸತತ 5ನೇ ಗೆಲುವು; ಆರ್‌ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಚೆನ್ನೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: ಆರಂಭಿಕರಾದ ಋತುರಾಜ್ ಗಾಯಕವಾಡ್ (75) ಹಾಗೂ ಫಫ್ ಡುಪ್ಲೆಸಿ  (56) ಬಿರುಸಿನ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ಸತತ ಐದನೇ ಗೆಲುವು ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ಬಳಗವು, ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಆರ್‌ಸಿಬಿ ಅಷ್ಟೇ ಅಂಕಗಳನ್ನು ಹೊಂದಿದ್ದರೂ ರನ್‌ರೇಟ್ ಆಧಾರದಲ್ಲಿ ಚೆನ್ನೈ ಅಗ್ರಸ್ಥಾನ ಅಲಂಕರಿಸಿದೆ. 

ಇನ್ನೊಂದೆಡೆ ಮಗದೊಂದು ಸೋಲಿಗೆ ಗುರಿಯಾಗಿರುವ ಸನ್‌ರೈಸರ್ಸ್ ಹೈದರಾಬಾದ್ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ. 

ಸವಾಲಿನ ಗುರಿ ಬೆನ್ನತ್ತಿದ ಚೆನ್ನೈಗೆ ಓಪನರ್‌ಗಳಾದ ಫಫ್ ಡು ಪ್ಲೆಸಿ ಹಾಗೂ ಋತುರಾಜ್ ಗಾಯಕವಾಡ್ ಬಿರುಸಿನ ಆರಂಭವೊದಗಿಸಿದರು. ಒಬ್ಬರನ್ನೊಬ್ಬರು ನೆಚ್ಚಿಕೊಂಡು ಆಡುವ ಮೂಲಕ ಪವರ್ ಪ್ಲೇನಲ್ಲೇ ಅರ್ಧಶತಕದ ಜೊತೆಯಾಟ ನೀಡಿದರು. ಈ ಮೂಲಕ ಐಪಿಎಲ್‌ನಲ್ಲಿ ಸತತ ಮೂರನೇ ಪಂದ್ಯದಲ್ಲಿ ಫಿಫ್ಟಿ ಜೊತೆಯಾಟ ನೀಡಿದ ಚೆನ್ನೈನ ಮೊದಲ ಜೋಡಿ ಎಂಬ ಖ್ಯಾತಿಗೆ ಪಾತ್ರರಾದರು.   

ಫಫ್ 32 ಹಾಗೂ ಋತುರಾಜ್ 36 ಎಸೆತಗಳಲ್ಲಿ ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಅಲ್ಲದೆ ಶತಕದ ಜೊತೆಯಾಟದ ಭದ್ರ ಅಡಿಪಾಯ ಹಾಕಿಕೊಟ್ಟರು. ಅರ್ಧಶತಕದ ಬೆನ್ನಲ್ಲೇ ಗಾಯಕವಾಡ್ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ರಶೀದ್ ಖಾನ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗುವ ಮುನ್ನ ಫಫ್ ಜೊತೆ ಮೊದಲ ವಿಕೆಟ್‌ಗೆ 13 ಓವರ್‌ಗಳಲ್ಲಿ 129 ರನ್‌ಗಳ ಜೊತೆಯಾಟ ನೀಡಿದ್ದರು. 

ಇದಾದ ಬೆನ್ನಲ್ಲೇ ಮೊಯಿನ್ ಅಲಿ (15) ಹಾಗೂ ಸೆಟ್ ಬ್ಯಾಟ್ಸ್‌ಮನ್ ಫಫ್ ಡುಪ್ಲೆಸಿ (56) ಅವರನ್ನು ಒಂದೇ ಓವರ್‌ನಲ್ಲಿ ರಶೀದ್ ಖಾನ್, ಹೊರದಬ್ಬಿದರೂ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಲ್ಲದೆ ಕೊನೆಯಲ್ಲಿ ರವೀಂದ್ರ ಜಡೇಜ (6*) ಹಾಗೂ ಸುರೇಶ್ ರೈನಾ (12*) ತಂಡವನ್ನು ಗೆಲುವಿನ ದಡ ಸೇರಿಸಿದರು.  

ಈ ಮೂಲಕ ಇನ್ನು 9 ಎಸೆತಗಳು ಬಾಕಿ ಉಳಿದಿರುವಂತೆಯೇ 18.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. ಭುವನೇಶ್ವರ್ ಕುಮಾರ್ ಅನುಪಸ್ಥಿತಿಯು ಹೈದರಾಬಾದ್ ತಂಡಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು. 

ಮನೀಷ್–ವಾರ್ನರ್ ಅರ್ಧಶತಕದ ಮಿಂಚು
ಈ ಮೊದಲು ಕರ್ನಾಟಕದ ಮನೀಷ್ ಪಾಂಡೆ ಬುಧವಾರ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ‌ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಜೊತೆಗೆ ಮನೀಷ್ ಶತಕದ ಜೊತೆಯಾಟವಾಡಿದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 171 ರನ್‌ ಗಳಿಸಿತು.

ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈನ ಎಡಗೈ ಮಧ್ಯಮವೇಗಿ ಸ್ಯಾಮ್ ಕರನ್ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಜಾನಿ ಬೆಸ್ಟೊ ವಿಕೆಟ್ ಗಳಿಸಿದರು. ಕಳೆದ ಪಂದ್ಯಗಳಲ್ಲಿ ಲಯಕ್ಕಾಗಿ ಪರದಾಡಿದ್ದ ವಾರ್ನರ್ ಕ್ರೀಸ್‌ನಲ್ಲಿ ಕಾಲೂರುವ ಪ್ರಯತ್ನದಲ್ಲಿದ್ದರು. ಅವರೊಂದಿಗೆ ಸೇರಿದ ಪಾಂಡೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 106 ರನ್‌ಗಳನ್ನು ಸೇರಿಸಿದರು. 

35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮನೀಷ್, ತಮ್ಮ ನಾಯಕನಿಗಿಂತಲೂ ವೇಗವಾಗಿ ಆಡಿದರು. ವಾರ್ನರ್ 50 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.ವಾರ್ನರ್ ಐಪಿಎಲ್‌ನಲ್ಲಿ ಇನ್ನೂರು ಸಿಕ್ಸರ್‌ಗಳನ್ನು ಹೊಡೆದವರ ಪಟ್ಟಿಗೆ ಸೇರಿಕೊಂಡರು.

18ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಲುಂಗಿ ಗಿಡಿ ಮುರಿದರು. ಮೊದಲ ಎಸೆತದಲ್ಲಿ ವಾರ್ನರ್ ಮತ್ತು ಐದನೇ ಎಸೆತದಲ್ಲಿ ಮನೀಷ್ ವಿಕೆಟ್‌ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಕೇನ್ ವಿಲಿಯಮ್ಸನ್ (ಔಟಾಗದೆ 26, 10ಎ) ಮತ್ತು ಅನುಭವಿ ಆಲ್‌ರೌಂಡರ್ ಕೇದಾರ್ ಜಾಧವ್ (ಔಟಾಗದೆ 12) ಚುರುಕಾಗಿ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಈ ಟೂರ್ನಿಯಲ್ಲಿ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಚೆನ್ನೈನ ದೀಪಕ್ ಚಾಹರ್ ಮತ್ತು ಹೋದ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಒಂದೂ ವಿಕೆಟ್ ಸಿಗಲಿಲ್ಲ. ಮಧ್ಯಮವೇಗಿ ಶಾರ್ದೂಲ್ ಠಾಕೂರ್ ವಿಕೆಟ್ ಗಳಿಸಲಿಲ್ಲ ಮತ್ತು ದುಬಾರಿಯೂ ಆದರು.

ಈ ಪಂದ್ಯದಲ್ಲಿ ಇಮ್ರಾನ್ ತಾಹೀರ್ ಅವರಿಗೆ ವಿಶ್ರಾಂತಿ ನೀಡಿದ ಚೆನ್ನೈ ಮೋಯಿನ್ ಅಲಿಗೆ ಅವಕಾಶ ನೀಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು