ಸೋಮವಾರ, ಅಕ್ಟೋಬರ್ 25, 2021
26 °C

IPL 2021 | MI vs PBKS: ಜಯದ ಹಾದಿಗೆ ಮರಳಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಬುಧಾಬಿ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಇಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಜಯದ ನಗೆ ಬೀರಿತು. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ಐದನೇ ಗೆಲುವು ಸಾಧಿಸಿದ ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ.

ಕಿಂಗ್ಸ್‌ ನೀಡಿದ ಸಾಧಾರಣ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 16 ರನ್ ಆಗುವಷ್ಟರಲ್ಲಿ ನಾಯಕ ರೋಹಿತ್‌ ಶರ್ಮಾ (8) ಮತ್ತು ಭರವಸೆಯ ಆಟಗಾರ ಸೂರ್ಯಕುಮಾರ್‌ ಯಾದವ್‌ (0)‌ ಪೆವಿಲಿಯನ್‌ ಸೇರಿಕೊಂಡರು. ಯುವ ಸ್ಪಿನ್ನರ್‌ ರವಿ ಬಿಷ್ಣೋಯಿ ಹಾಕಿದ ಒಂದೇ ಓವರ್‌ನಲ್ಲಿ ಇವರಿಬ್ಬರೂ ವಿಕೆಟ್‌ ಒಪ್ಪಿಸಿದ್ದು, ತಂಡದ ಆತಂಕವನ್ನು ಹೆಚ್ಚಿಸಿತ್ತು.

ಈ ವೇಳೆ ಆರಂಭಿಕ ಕ್ವಿಂಟನ್‌ ಡಿ ಕಾಕ್‌ಗೆ ಜೊತೆಯಾದ ಸೌರಭ್‌ ತಿವಾರಿ ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಡಿ ಕಾಕ್‌ ಜೊತೆ ಮೂರನೇ ವಿಕೆಟ್‌ಗೆ 45 ರನ್‌ ಮತ್ತು ಹಾರ್ದಿಕ್‌ ಪಾಂಡ್ಯ ಜೊತೆ 4ನೇ ವಿಕೆಟ್‌ ಜೊತೆಯಾಟದಲ್ಲಿ‌ 31 ರನ್‌ ಸೇರಿಸಿ ವಿಕೆಟ್‌ ಪತನಕ್ಕೆ ತಡೆಯಾದರು.

37 ಎಸೆತಗಳನ್ನು ಎದುರಿಸಿದ್ದ ತಿವಾರಿ 45 ರನ್‌ ಗಳಿಸಿ ಔಟಾಗುವ ಮುನ್ನ ಮುಂಬೈ ತಂಡ ಗೆಲುವಿನತ್ತ ಮುಖಮಾಡಿತ್ತು. ಕೊನೆಯಲ್ಲಿ ಬಿರುಸಾಗಿ ಬ್ಯಾಟ್‌ ಬೀಸಿದ ಹಾರ್ದಿಕ್‌ ಪಾಂಡ್ಯ ಮತ್ತು ಕೀರನ್‌ ಪೊಲಾರ್ಡ್‌ ತಂಡವನ್ನು ಜಯದ ದಡ ಸೇರಿಸಿದರು.

ಕಿಂಗ್ಸ್‌ ಪರ ಬಿಷ್ಣೋಯಿ ಎರಡು ಮತ್ತು ನಾಥನ್‌ ಎಲ್ಲಿಸ್‌, ಮೊಹಮ್ಮದ್‌ ಶಮಿ ತಲಾ ಒಂದು ವಿಕೆಟ್‌ ಪಡೆದರು.

ಕಿಂಗ್ಸ್‌ಗೆ ಮಾರ್ಕ್ರಂ, ಹೂಡ ಆಸರೆ
ಇದಕ್ಕೂ ಮುನ್ನ ಟಾಸ್‌ ಗೆದ್ದ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ದಾಳಿ ಸಂಘಟಿಸಿದ ಮುಂಬೈ ಬೌಲರ್‌ಗಳು, ಕಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರು.

ತಂಡದ ಮೊತ್ತ 48 ರನ್‌ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರನ್ನು ಪೆವಿಲಿಯನ್‌ಗೆ ಅಟ್ಟಿ ಮೇಲುಗೈ ತಂದುಕೊಟ್ಟರು. ಆದರೆ ಈ ಹಂತದಲ್ಲಿ ಜೊತೆಯಾದ ಏಡನ್‌ ಮಾರ್ಕ್ರಂ (38) ಮತ್ತು ದೀಪಕ್‌ ಹೂಡ (25) ಐದನೇ ವಿಕೆಟ್‌ ಜೊತೆಯಾಟದಲ್ಲಿ 61 ರನ್‌ ಕೂಡಿಸಿ ಕುಸಿತ ತಪ್ಪಿಸಿದರು.

ಈ ಜೋಡಿಯನ್ನು 16ನೇ ಓವರ್‌ನಲ್ಲಿ ರಾಹುಲ್‌ ಚಾಹರ್‌ ಬೇರ್ಪಡಿಸಿದರು. 26 ಎಸೆತಗಳಲ್ಲಿ 28 ರನ್‌ ಬಾರಿಸಿದ್ದ ದೀಪಕ್‌ ಅವರೂ 19ನೇ ಓವರ್‌ನಲ್ಲಿ ಔಟಾದರು. ಕೊನೆಯಲ್ಲಿ ಹರ್ಪ್ರೀತ್‌ ಬ್ರಾರ್‌ ಮತ್ತು ನಾಥನ್‌ ಎಲ್ಲಿಸ್‌ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.

ಮುಂಬೈ ಪರ ಜಸ್‌ಪ್ರಿತ್‌ ಬೂಮ್ರಾ ಹಾಗೂ ಕೀರನ್‌ ಪೊಲಾರ್ಡ್‌ ತಲಾ ಎರಡು ವಿಕೆಟ್‌ ಕಬಳಿಸಿದರೆ, ಕೃಣಾಲ್‌ ಪಾಂಡ್ಯ ಮತ್ತು ರಾಹುಲ್‌ ಚಾಹರ್ ಒಂದೊಂದು ವಿಕೆಟ್‌ ಪಡೆದರು.‌

ಇವನ್ನೂ ಓದಿತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು