ಶುಕ್ರವಾರ, ಮಾರ್ಚ್ 24, 2023
22 °C

IPL 2021: ವಿರಾಟ್ ನಾಯಕತ್ವದಲ್ಲಿ ಈಡೇರದ ಆರ್‌ಸಿಬಿ ಟ್ರೋಫಿ ಗೆಲ್ಲುವ ಕನಸು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಸುನಿಲ್ ನಾರಾಯಣ್ ಆಲ್‌ರೌಂಡರ್ ಆಟದ (4 ವಿಕೆಟ್ ಹಾಗೂ 26 ರನ್) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್‌ನಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಆಸೆಯೂ ಈಡೇರಲಿಲ್ಲ. 

ಈ ಹಿಂದೆಯೇ ಪ್ರಸಕ್ತ ಸಾಲಿನ ಬಳಿಕ ಆರ್‌ಸಿಬಿ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಘೋಷಿಸಿದ್ದರು. ಇದರೊಂದಿಗೆ ಕೊಹ್ಲಿ ಮುನ್ನಡೆಸಿದ ಕೊನೆಯ ಪಂದ್ಯದಲ್ಲಿ ಸೋಲು ಎದುರಾಗುವುದರೊಂದಿಗೆ ಕಪ್ ಗೆಲ್ಲುವ ಕನಸು ಕಮರಿದೆ. 

ಅತ್ತ ಎರಡು ಬಾರಿಯ ಚಾಂಪಿಯನ್ ಕೆಕೆಆರ್, ಬುಧವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಅಲ್ಲಿ ಗೆದ್ದ ತಂಡವು ಶುಕ್ರವಾರದಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿವೆ. 

ಸುನಿಲ್ ನಾರಾಯಣ್ (21ಕ್ಕೆ 4 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿದ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 138 ರನ್‌ ಗಳಿಸಲಷ್ಟೇ ಸಮರ್ಥವಾಯಿತು. ವಿರಾಟ್ ಕೊಹ್ಲಿ (39), ಎಬಿ ಡಿವಿಲಿಯರ್ಸ್ (11), ಗ್ಲೆನ್ ಮ್ಯಾಕ್ಸ್‌ವೆಲ್ (15) ಹಾಗೂ ಶ್ರೀಕರ್ ಭರತ್ (9) ವಿಕೆಟ್‌ಗಳನ್ನು ಕಬಳಿಸಿದ ನಾರಾಯಣ್ ಆರ್‌ಸಿಬಿ ಓಟಕ್ಕೆ ಕಡಿವಾಣ ಹಾಕಿದರು. 

ಬಳಿಕ ಒಂದು ಹಂತದಲ್ಲಿ ಕೆಕೆಆರ್ 11 ಓವರ್‌ಗಳಲ್ಲಿ 79 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಾರಾಯಣ್, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೆಕೆಆರ್ ಗೆಲುವಿನ ರೂವಾರಿ ಎನಿಸಿದರು. ಡೇನಿಯಲ್ ಕ್ರಿಸ್ಟಿಯನ್ ಎಸೆದ ಇನ್ನಿಂಗ್ಸ್‌ನ 12 ಓವರ್‌ನಲ್ಲಿ ನಾರಾಯಣ್ ಮೂರು ಸಿಕ್ಸರ್ ಸೇರಿದಂತೆ ಒಟ್ಟು 22 ರನ್ ಸೊರೆಗೈದರು. ಇಲ್ಲಿಂದ ಬಳಿಕ ಪಂದ್ಯ ಆರ್‌ಸಿಬಿ ಹಿಡಿತದಿಂದ ಜಾರಿತು. 

ಅಂತಿಮವಾಗಿ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. 

ನಾರಾಯಣ್ ಸ್ಫೋಟಕ ಆಟಕ್ಕೆ ಆರ್‌ಸಿಬಿ ಕಪ್ ಕನಸು ಭಗ್ನ...
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಶುಭಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 41 ರನ್ ಪೇರಿಸಿದರು. 

ಉತ್ತಮವಾಗಿ ಆಡುತ್ತಿದ್ದ ಗಿಲ್ (29) ಅವರನ್ನು ಹರ್ಷಲ್ ಪಟೇಲ್ ಹೊರದಬ್ಬಿದರು. ಬೆನ್ನಲ್ಲೇ ರಾಹುಲ್ ತ್ರಿಪಾಠಿ (6) ಅವರನ್ನು ಯಜುವೇಂದ್ರ ಚಾಹಲ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ಅಯ್ಯರ್ ಹಾಗೂ ನಿತೀಶ್ ರಾಣಾ ತಂಡವನ್ನು ಮುನ್ನಡೆಸಿದರು. 

10 ಓವರ್ ಅಂತ್ಯಕ್ಕೆ ಕೆಕೆಆರ್ ಎರಡು ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತ್ತು. ಈ ಹಂತದಲ್ಲಿ ಕ್ರೀಸಿಗಿಳಿದ ನಾರಾಯಣ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಕೇವಲ 15 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. 

ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಗಳಿಸಿ ತಿರುಗೇಟು ನೀಡುವ ಪ್ರಯತ್ನ ಮಾಡಿದರೂ ಆಗಲೇ ಪಂದ್ಯ ಕೈಜಾರಿತ್ತು. ಅಂತಿಮವಾಗಿ 19.4 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.  

ಇನ್ನುಳಿದಂತೆ ನಿತೀಶ್ ರಾಣಾ (23) ದಿನೇಶ್ ಕಾರ್ತಿಕ್ (10), ಏಯಾನ್ ಮಾರ್ಗನ್ (5*) ಹಾಗೂ ಶಕಿಬ್ ಅಲ್ ಹಸನ್ (9*) ರನ್ ಗಳಿಸಿದರು. ಆರ್‌ಸಿಬಿ ಪರ ಸಿರಾಜ್, ಚಾಹಲ್ ಹಾಗೂ ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು. 

ಈ ಪೈಕಿ ಹರ್ಷಲ್, ಐಪಿಎಲ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಡ್ವೇನ್ ಬ್ರಾವೊ (32 ವಿಕೆಟ್) ದಾಖಲೆಯನ್ನು ಸರಿಗಟ್ಟಿದರು. 

ನಾರಾಯಣ್‌ ಸ್ಪಿನ್ ಮೋಡಿ, ಆರ್‌ಸಿಬಿ 138/7
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್  ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 49 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 21 ರನ್ ಗಳಿಸಿದ ಪಡಿಕ್ಕಲ್ ಅವರನ್ನು ಲಾಕಿ ಫರ್ಗ್ಯುಸನ್ ಕ್ಲೀನ್ ಬೌಲ್ಡ್ ಮಾಡಿದರು. 

ಇಲ್ಲಿಂದ ಬಳಿಕ ಅಕ್ಷರಶಃ ಸುನಿಲ್ ನಾರಾಯಣ್ ಸ್ಪಿನ್ ಮೋಡಿ ಮಾಡಿದರು. ಮೊದಲು ನಾರಾಯಣ್‌ ಬಲೆಗೆ ಕಳೆದ ಪಂದ್ಯ ಹೀರೊ ಶ್ರೀಕರ್ ಭರತ್ ಬಿದ್ದರು. 16 ಎಸೆತಗಳನ್ನು ಎದುರಿಸಿದ ಭರತ್ 9 ರನ್ ಗಳಿಸಿ ನಿರಾಸೆ ಅನುಭವಿಸಿದರು. 

ಭರತ್ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಮಾಡಿದ ಸುನಿಲ್ ನಾರಾಯಣ್, ಪಂದ್ಯದಲ್ಲಿ ಕೆಕೆಆರ್ ಹಿಡಿತ ಸಾಧಿಸಲು ನೆರವಾದರು. 33 ಎಸೆತಗಳನ್ನು ಎದುರಿಸಿದ ಕೊಹ್ಲಿ ಐದು ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿದರು. 

ಎಬಿ ಡಿವಿಲಿಯರ್ಸ್ (11) ಕೂಡಾ ನಾರಾಯಣ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಉತ್ತಮ ಲಯದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ (11) ವಿರುದ್ಧವೂ ನಾರಾಯಣ್ ಕೈಚಳಕ ತೋರಿದರು. ಪರಿಣಾಮ ಆರ್‌ಸಿಬಿ 112ಕ್ಕೆ ಐದು ವಿಕೆಟ್ ನಷ್ಟಕ್ಕೆ ಸಂಕಷ್ಟಕ್ಕೆ ಸಿಲುಕಿತು. 

ಈ ಮೂಲಕ ಒಂದೇ ಪಂದ್ಯದಲ್ಲಿ ಕೊಹ್ಲಿ-ವಿಲಿಯರ್ಸ್-ಮ್ಯಾಕ್ಸ್‌ವೆಲ್ ವಿಕೆಟ್ ಗಳಿಸಿದ ಖ್ಯಾತಿಗೆ ನಾರಾಯಣ್ ಪಾತ್ರವಾದರು. ಅಂತಿಮವಾಗಿ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಸಮರ್ಥವಾಯಿತು. ಇನ್ನುಳಿದಂತೆ ಶಹಬಾಜ್ ಅಹ್ಮದ್ (13), ಡೇನಿಯಲ್ ಕ್ರಿಸ್ಟಿಯನ್ (9) ಹಾಗೂ ಹರ್ಷಲ್ ಪಟೇಲ್ (8*) ರನ್ ಗಳಿಸಿದರು. 

ಕೆಕೆಆರ್ ಪರ 21 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದ ನಾರಾಯಣ್, ಮಿಂಚಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು