ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಕೆಕೆಆರ್‌‌ಗೆ 86 ರನ್ ಗೆಲುವು; ರಾಜಸ್ಥಾನ್, ಪಂಜಾಬ್ ನಿರ್ಗಮನ

Last Updated 7 ಅಕ್ಟೋಬರ್ 2021, 18:05 IST
ಅಕ್ಷರ ಗಾತ್ರ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 86 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಜೊತೆಗೆ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಿಂದಲೇ ಹೊರಬಿದ್ದಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಶುಭಮನ್ ಗಿಲ್ ಅರ್ಧಶತಕದ (56) ನೆರವಿನಿಂದ 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಶಿವಂ ಮಾವಿ (21ಕ್ಕೆ 4 ವಿಕೆಟ್) ಹಾಗೂ ಲಾಕಿ ಫರ್ಗ್ಯುಸನ್ (18ಕ್ಕೆ 3 ವಿಕೆಟ್) ದಾಳಿಗೆ ತತ್ತರಿಸಿದ ರಾಜಸ್ಥಾನ್ 16.1 ಓವರ್‌ಗಳಲ್ಲಿ ಕೇವಲ 85 ರನ್ನಿಗೆ ಸರ್ವಪತನಗೊಂಡಿತ್ತು.

ಇದರೊಂದಿಗೆ ಆಡಿರುವ 14 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ ಅಷ್ಟೇ ಅಂಕಗಳನ್ನು ಸಂಪಾದಿಸಿರುವ ಕೆಕೆಆರ್, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ 10 ಅಂಕ ಗಳಿಸಿರುವ ರಾಜಸ್ಥಾನ್ ಏಳನೇ ಸ್ಥಾನದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದೆ.

ಮುಂಬೈಗೆ ಅಸಾಧ್ಯ ಸವಾಲು?
ಅತ್ತ ಮುಂಬೈ ಪ್ಲೇ-ಆಫ್ ಪ್ರವೇಶಿಸಲು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ170ಕ್ಕೂ ಹೆಚ್ಚು ರನ್‌ಗಳ ಅಂತರದ ಗೆಲುವು ದಾಖಲಿಸಬೇಕಿದೆ. ಇದು ಬಹುತೇಕ ಅಸಾಧ್ಯ ಸವಾಲು ಆಗಿದ್ದರಿಂದಕೋಲ್ಕತ್ತ ಪ್ಲೇ-ಆಫ್ ಪ್ರವೇಶ ಬಹುತೇಕ ಖಚಿತವೆನಿಸಿದೆ.

ರಾಜಸ್ಥಾನ್‌ಗೆ ಹೀನಾಯ ಸೋಲು...
ಸವಾಲಿನ ಮೊತ್ತ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ತಂಡವು 13 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಯಶಸ್ವಿ ಜೈಸ್ವಾಲ್ (0), ನಾಯಕ ಸಂಜು ಸ್ಯಾಮ್ಸನ್ (1), ಲಿಯಾಮ್ ಲಿವಿಂಗ್‌ಸ್ಟೋನ್ (6) ಹಾಗೂ ಅನುಜ್ ರಾವತ್ (0) ಪೆವಿಲಿಯನ್‌ಗೆ ಮರಳಿದರು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ರಾಹುಲ್ ತೆವಾಟಿಯಾ (44) ಹೊರತುಪಡಿಸಿ ಇತರೆಲ್ಲ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಪರಿಣಾಮ 16.1 ಓವರ್‌ಗಳಲ್ಲಿ 85 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

36 ಎಸೆತಗಳನ್ನು ಎದುರಿಸಿದ ರಾಹುಲ್ ತೆವಾಟಿಯಾ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು. ಇನ್ನುಳಿದಂತೆ ಗ್ಲೆನ್ ಪಿಲಿಪ್ (8), ಕ್ರಿಸ್ ಮೊರಿಸ್ (0), ಜೈದೇವ್ ಉನಾದ್ಕಟ್ (6), ಚೇತನ್ ಸಕಾರಿಯಾ (1) ನಿರಾಸೆ ಮೂಡಿಸಿದರು.

ಕೆಕೆಆರ್ ಪರ ಶಿವಂ ಮಾವಿ ನಾಲ್ಕು ಹಾಗೂ ಲಾಕಿ ಫರ್ಗ್ಯುಸನ್ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಗಿಲ್ ಫಿಫ್ಟಿ, ಕೆಕೆಆರ್ ಸವಾಲಿನ ಮೊತ್ತ...
ಈ ಮೊದಲು ಕೋಲ್ಕತ್ತ ತಂಡಕ್ಕೆ ಓಪನರ್‌ಗಳಾದ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಆರಂಭವೊದಗಿಸಿದರು. ರಾಜಸ್ಥಾನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 79 ರನ್ ಪೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು.

ಈ ಸಂದರ್ಭದಲ್ಲಿ ಉತ್ತಮವಾಗಿ ಆಡುತ್ತಿದ್ದ ಅಯ್ಯರ್ (38) ವಿಕೆಟ್ ನಷ್ಟವಾಯಿತು. ಇದಾದ ಬೆನ್ನಲ್ಲೇ ನಿತೀಶ್ ರಾಣಾ (12) ಪೆವಿಲಿಯನ್‌ಗೆ ಮರಳಿದರು.

ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಗಿಲ್ ಅರ್ಧಶತಕದ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ಔಟ್ ಆಗಿ ನಿರಾಸೆ ಮೂಡಿಸಿದರು. 44 ಎಸೆತಗಳನ್ನು ಎದುರಿಸಿದ ಗಿಲ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ರಾಹುಲ್ ತ್ರಿಪಾಠಿ (21), ದಿನೇಶ್ ಕಾರ್ತಿಕ್ (14*) ಹಾಗೂ ನಾಯಕ ಏಯಾನ್ ಮಾರ್ಗನ್ (13*) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಕೆಕೆಆರ್ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್‌ಗಳ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT