ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ದಾದಾ ಅಭಿಮಾನಿ, ಅವರ ಶೈಲಿಯನ್ನೇ ಅನುಕರಿಸಲು ಬಯಸುತ್ತೇನೆ: ವೆಂಕಟೇಶ ಅಯ್ಯರ್

Last Updated 24 ಸೆಪ್ಟೆಂಬರ್ 2021, 10:48 IST
ಅಕ್ಷರ ಗಾತ್ರ

ಅಬುಧಾಬಿ: ಐಪಿಎಲ್‌ನಲ್ಲಿ ಆಡಿರುವ ಕೇವಲ ಎರಡು ಪಂದ್ಯಗಳಲ್ಲೇ ಎಲ್ಲರ ಮನ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ ಅಯ್ಯರ್, ತಾವು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಶೈಲಿಯನ್ನೇ ಅನುಕರಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಯುಎಇನಲ್ಲಿ ಸಾಗುತ್ತಿರುವ ಐಪಿಎಲ್ ಎರಡನೇ ಹಂತದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ವೆಂಕಟೇಶ ಅಬ್ಬರಿಸಿದ್ದರು. ಇದು ಅವರ ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು.

ಬಳಿಕ ಬುಧವಾರ ಬಲಿಷ್ಠ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲೂ ಕೇವಲ 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿದರು.

ಅಷ್ಟೇ ಯಾಕೆ ಕೇವಲ 25 ಎಸೆತದಲ್ಲೇ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಮುಂಬೈ ಒಡ್ಡಿದ 156 ರನ್ ಗೆಲುವಿನ ಗುರಿಯನ್ನು 15.1 ಓವರ್‌ಗಳಲ್ಲೇ ಬೆನ್ನಟ್ಟುವಲ್ಲಿ ನೆರವಾದರು. ಅಲ್ಲದೆ ಸತತ ಎರಡು ಗೆಲುವಿನೊಂದಿಗೆ ಕೆಕೆಆರ್, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

'ಪ್ರಾಮಾಣಿಕವಾಗಿ ಹೇಳಬಯಸುತ್ತೇನೆಂದರೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ರಥಮ ನಾಯಕ ಸೌರವ್ ಗಂಗೂಲಿ ಆಗಿದ್ದರಿಂದ ನಾನು ಮೊದಲು ಕೆಕೆಆರ್ ಫ್ರಾಂಚೈಸಿ ಪರ ಆಡಲು ಬಯಸಿದ್ದೆ. ಫ್ರಾಂಚೈಸಿ ಪರ ಆಯ್ಕೆಯಾಗಿರುವುದು ಕನಸು ನನಸಾದ ಕ್ಷಣವಾಗಿತ್ತು' ಎಂದು ಹೇಳಿದ್ದಾರೆ.

'ನಾನು ದಾದಾ ಅವರ ದೊಡ್ಡ ಅಭಿಮಾನಿ. ಅವರು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ನನ್ನ ಬ್ಯಾಟಿಂಗ್‌ನಲ್ಲಿ ಅವರು ದೊಡ್ಡ ಪ್ರಭಾವವನ್ನು ಬೀರಿದ್ದಾರೆ' ಎಂದು ತಿಳಿಸಿದರು.

'ಚಿಕ್ಕವನಿದ್ದಾಗ ನಾನು ಬಲಗೈಯಲ್ಲಿ ಬ್ಯಾಟಿಂಗ್ ಮಾಡತ್ತಿದ್ದೆ. ಆದರೆ ದಾದಾ ಹೇಗೆ ಸಿಕ್ಸರ್ ಹೊಡೆಯುತ್ತಾರೋ ಅದನ್ನು ನಿಖರವಾಗಿ ಅನುಕರಿಸಲು ಬಯಸಿದ್ದೆ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ದಾದಾ ನನ್ನ ಜೀವನದಲ್ಲಿ ಅರಿವಿಲ್ಲದೆ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ನಿಜವಾಗಿಯೂ ನಾನು ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಲ್ಲದೆ ಅವಕಾಶ ಸಿಗಲಿದೆ ಎಂಬ ನಂಬಿಕೆಯಿತ್ತು' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT