ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಯೋಬಬಲ್‌ನಿಂದ ಶ್ರೀಲಂಕಾದ ಇಬ್ಬರು ಆಟಗಾರರನ್ನು ಬಿಡುಗಡೆಗೊಳಿಸಲಾಗಿದೆ.
ಮುಂಬರುವ ಟ್ವೆಂಟಿ-20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಭಾಗವಹಿಸಲಿರುವುದರಿಂದ ವನಿಂದು ಹಸರಂಗ ಹಾಗೂ ದುಶ್ಮಂತ ಚಮೀರ ಅವರಿಗೆ ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ಐಪಿಎಲ್ ಪ್ಲೇ-ಆಫ್ ಹಂತದಲ್ಲಿ ಆರ್‌ಸಿಬಿ ಸೇವೆಗೆ ಅಲಭ್ಯರಾಗಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಎರಡನೇ ಹಂತದ ಟೂರ್ನಿಗಾಗಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಾಗೂ ಡೇನಿಯಲ್ ಸ್ಯಾಮ್ಸ್ ಸ್ಥಾನಕ್ಕೆಹಸರಂಗ ಹಾಗೂ ಚಮೀರ ಅವರನ್ನು ಹೆಸರಿಸಲಾಗಿತ್ತು.
ಹಸರಂಗ ಎರಡು ಪಂದ್ಯಗಳಲ್ಲಿ ಆಡಿದರೂ ಪ್ರಭಾವಿ ಎನಿಸಿಕೊಳ್ಳಲಿಲ್ಲ. ಅತ್ತ ಚಮೀರಗೆ ಅವಕಾಶ ಸಿಗಲಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಆರ್‌ಸಿಬಿ, ಹಸರಂಗ ಹಾಗೂ ಚಮೀರ ವೃತ್ತಿಪರತೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದೆ. ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಬಳಗವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.
ಟ್ವೆಂಟಿ-20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ 'ಎ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.