ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಮುಗ್ಗರಿಸಿದ ಮುಂಬೈ, ಚೆನ್ನೈ ಜಯಭೇರಿ

Last Updated 19 ಸೆಪ್ಟೆಂಬರ್ 2021, 18:21 IST
ಅಕ್ಷರ ಗಾತ್ರ

ದುಬೈ: ಋತುರಾಜ್ ಗಾಯಕವಾಡ್ (88*) ಅಮೋಘ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 20 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.

157 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಗಾಯಕವಾಡ್ ಪಂದ್ಯದ ಹೀರೊ ಎನಿಸಿದರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಿದರು. ಆದರೆ ಅದೃಷ್ಟ ಅವರ ಪರವಾಗಿರಲಿಲ್ಲ.

ಗುರಿ ಬೆನ್ನಟ್ಟಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. 37 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕ್ವಿಂಟನ್ ಡಿ ಕಾಕ್ (17) ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅನ್ಮೋಲ್‌ಪ್ರೀತ್ ಸಿಂಗ್ (16) ಉತ್ತಮ ಆರಂಭ ಪಡೆದರೂ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನು ದೀಪಕ್ ಚಾಹರ್ ಹೊರದಬ್ಬಿದರು.

ಬಳಿಕ ಶಾರ್ದೂಲ್ ಠಾಕೂರ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್ (3) ನಿರಾಸೆ ಮೂಡಿಸಿದರು. ಇದಾದ ಬೆನ್ನಲ್ಲೇ ಇಶಾನ್ ಕಿಶನ್‌ರನ್ನು (11) ಡ್ವೇನ್ ಬ್ರಾವೋ ಹೊರದಬ್ಬಿದರು. 10 ಓವರ್‌ಗಳ ಅಂತ್ಯಕ್ಕೆ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. ಅಂದರೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 95 ರನ್‌ಗಳ ಅವಶ್ಯಕತೆಯಿತ್ತು.

ಅಂತಿಮ ಹಂತದಲ್ಲಿ ಸೌರಭ್ತಿವಾರಿ ಅರ್ಧಶತಕದ ದಿಟ್ಟ ಹೋರಾಟ ತೋರಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಚೆನ್ನೈ ಬೌಲರ್‌ಗಳು ನಿಖರ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು.

ಪರಿಣಾಮ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. 40 ಎಸೆತಗಳನ್ನು ಎದುರಿಸಿದ ತಿವಾರಿ ಐದು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ಕೀರನ್ ಪೊಲಾರ್ಡ್ (15), ಕೃಣಾಲ್ ಪಾಂಡ್ಯ (4),ಆ್ಯಡಂ ಮಿಲ್ನೆ (15), ರಾಹುಲ್ ಚಾಹರ್ (0) ಹಾಗೂ ಜಸ್‌ಪ್ರೀತ್ ಬೂಮ್ರಾ (1*) ರನ್ ಗಳಿಸಿದರು.

ಚೆನ್ನೈ ಪರ ಡ್ವೇನ್ ಬ್ರಾವೋ ಮೂರು, ದೀಪಕ್ ಚಾಹರ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟನ್ನು ಹಂಚಿದರು.

ಗಾಯಕವಾಡ್ 88*; ಚೆನ್ನೈ 156/6
ಈ ಮೊದಲು ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಆಕರ್ಷಕ ಅರ್ಧಶತಕದ (88*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಒಂದು ಹಂತದಲ್ಲಿ 24ಕ್ಕೆ ನಾಲ್ಕು ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಗಾಯಕವಾಡ್ ನೆರವಾದರು. ರವೀಂದ್ರ ಜಡೇಜ (26) ಹಾಗೂ ಡ್ವೇನ್ ಬ್ರಾವೋ (23) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಫಾಫ್ ಡು ಪ್ಲೆಸಿ (0) ಹಾಗೂ ಮೊಯಿನ್ ಅಲಿ (0) ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.

ಈ ನಡುವೆ ಗಾಯಗೊಂಡ ಅಂಬಟಿ ರಾಯುಡು (0) ನಿವೃತ್ತಿ ಹೊಂದಿದರು. ಅನುಭವಿ ಆಟಗಾರ ಸುರೇಶ್ ರೈನಾ (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (3) ಅವರಿಂದಲೂ ಹೆಚ್ಚೇನು ಮಾಡಲಾಗಲಿಲ್ಲ. ಈ ವೇಳೆ ತಲಾ ಎರಡು ವಿಕೆಟ್‌ಗಳನ್ನು ಪಡೆದ ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಮಿಲ್ನೆ ಮಿಂಚಿದರು.

ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ 24 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ರವೀಂದ್ರ ಜಡೇಜ ಜೊತೆಗೂಡಿದ ಆರಂಭಿಕ ಋತುರಾಜ್ ಗಾಯಕವಾಡ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಾಯಕವಾಡ್ ಗಮನ ಸೆಳೆದರು. 15 ಓವರ್ ಅಂತ್ಯಕ್ಕೆ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿತ್ತು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್, ಐಪಿಎಲ್‌ನಲ್ಲಿ 6ನೇ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಫಿಫ್ಟಿ ಬೆನ್ನಲ್ಲೇ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಸಿಕ್ಸರ್ ಬಾರಿಸಿ ಮಿಂಚಿದರು.

ಇನ್ನೊಂದೆಡೆ ಗಾಯಕವಾಡ್‌ಗೆ ಉತ್ತಮ ಸಾಥ್ ನೀಡುತ್ತಿದ್ದ ಜಡೇಜರನ್ನು ಬೂಮ್ರಾ ಹೊರದಬ್ಬಿದರು. ಇಧರೊಂದಿಗೆ ಐದನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟವು ಮುರಿದು ಬಿತ್ತು. 33 ಎಸೆತಗಳನ್ನು ಎದುರಿಸಿದ ಜಡೇಜ ಒಂದು ಬೌಂಡರಿ ನೆರವಿನಿಂದ 26 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಡ್ವೇನ್ ಬ್ರಾವೋ ಕೇವಲ ಏಳು ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಗಮನ ಸೆಳೆದರು. ಅಲ್ಲದೆ ಋತುರಾಜ್ ಜೊತೆ ಸೇರಿಕೊಂಡು ಬೌಲ್ಟ್ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 24 ರನ್‌ಗಳನ್ನು ಸೊರೆಗೈದರು.

ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತ್ತು. ಅಮೋಘ ಆಟದ ಪ್ರದರ್ಶನ ನೀಡಿದ ಗಾಯಕವಾಡ್ 88 ರನ್ ಗಳಿಸಿ ಅಜೇಯರಾಗುಳಿದರು. 58 ಎಸೆತಗಳನ್ನು ಎದುರಿಸಿದ ಗಾಯಕವಾಡ್ ಒಂಬತ್ತು ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್‌ಗಳನ್ನು ಬಾರಿಸಿದ್ದರು. ಮುಂಬೈ ಪರ ಬೌಲ್ಟ್, ಬೂಮ್ರಾ ಹಾಗೂ ಮಿಲ್ನೆ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT