ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಧವನ್ 92; ಪಂಜಾಬ್ ಮೇಲೆ ಸವಾರಿ ಮಾಡಿದ ಡೆಲ್ಲಿ

Last Updated 18 ಏಪ್ರಿಲ್ 2021, 17:58 IST
ಅಕ್ಷರ ಗಾತ್ರ

ಮುಂಬೈ: 'ಗಬ್ಬರ್' ಖ್ಯಾತಿಯ ಶಿಖರ್ ಧವನ್ (92) ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ರಿಷಭ್ ಪಂತ್ ಬಳಗ ಗೆಲುವಿನ ಹಾದಿಗೆ ಮರಳಿದೆ. ಅತ್ತ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ (61) ಹಾಗೂ ಮಯಂಕ್ ಅಗರವಾಲ್ (69) ಹೋರಾಟವು ವ್ಯರ್ಥವೆನಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 195 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಧವನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.2 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲೇ 59 ರನ್‌ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪೃಥ್ವಿ ಕೇವಲ 17 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 32 ರನ್ ಚಚ್ಚಿದರು. ಇವರನ್ನು ಅರ್ಶ್‌ದೀಪ್ ಸಿಂಗ್ ಹೊರದಬ್ಬಿದರು.

ಪೃಥ್ವಿ ವಿಕೆಟ್ ಪತನದ ಬಳಿಕ ಗೇರ್ ಬದಲಿಸಿದ ಧವನ್, ಸ್ಫೋಟಕ ಇನ್ನಿಂಗ್ಸ್ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆದರೂ ಶಕತದಂಚಿನಲ್ಲಿ ಎಡವಿದರು. 49 ಎಸೆತಗಳನ್ನು ಎದುರಿಸಿದ ಧವನ್ 13 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 92 ರನ್ ಗಳಿಸಿದರು.

ಈ ನಡುವೆ ಸ್ಟೀವನ್ ಸ್ಮಿತ್ (9) ಹಾಗೂ ನಾಯಕ ರಿಷಭ್ ಪಂತ್ (15) ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕೊನೆಯ ಹಂತದಲ್ಲಿ ಕೇವಲ 13 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಚಚ್ಚಿದ ಮಾರ್ಕಸ್ ಸ್ಟೋಯಿನಿಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಲಲಿತ್ ಯಾದವ್ ಕೇವಲ 6 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 12 ರನ್ ಗಳಿಸಿ ಔಟಾಗದೆ ಉಳಿದರು.

ಪಂಜಾಬ್ ಪರ ಮೊಹಮ್ಮದ್ ಶಮಿ 53 ರನ್ ಬಿಟ್ಟುಕೊಟ್ಟು ಸಾಕಷ್ಟು ದುಬಾರಿಯೆನಿಸಿದರು.

ರಾಹುಲ್–ಮಯಂಕ್ ಶತಕದ ಜೊತೆಯಾಟದ ರಂಗು
ಈ ಮೊದಲು ಕನ್ನಡದ ಜೋಡಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಶತಕದ ಜೊತೆಯಾಟದ ರಂಗು ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣವನ್ನು ಆವರಿಸಿತು.

ಮೊದಲ ವಿಕೆಟ್‌ಗೆ ಇಬ್ಬರೂ ಸೇರಿಸಿದ 122 ರನ್‌ಗಳ ಬಲದಿಂದ ಪಂಜಾಬ್ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 195 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕಠಿಣ ಸವಾಲೊಡ್ಡಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೂರು ಜೀವದಾನ ಪಡೆದ ಕೆ.ಎಲ್. ರಾಹುಲ್ ಡೆಲ್ಲಿ ಪಾಲಿಗೆ ದುಬಾರಿಯಾದರು.

ಬಹಳ ದಿನಗಳ ನಂತರ ಲಯ ಕಂಡುಕೊಂಡ ಮಯಂಕ್ ಜೊತೆಗೆ ರಾಹುಲ್ ಜೊತೆಯಾಟ ಕುದುರಿಸಿದರು. ರಾಹುಲ್ 51 ಎಸೆತಗಳಲ್ಲಿ 61 ರನ್‌ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು. ಮಯಂಕ್ ಅವರ ಆಟವು ರಾಹುಲ್ ಬ್ಯಾಟಿಂಗ್‌ ಅನ್ನು ಮೀರಿಸಿತು.

ಚೆಂದದ ಹೊಡೆತಗಳೊಂದಿಗೆ ಮಯಂಕ್ ಗಮನ ಸೆಳೆದರು. ಅವರ ಆಕರ್ಷಕ ಶೈಲಿಯ ಬ್ಯಾಟಿಂಗ್ ಚಿತ್ತಾಪಹಾರಿಯಾಗಿತ್ತು. ಕೇವಲ 36 ಎಸೆತಗಳಲ್ಲಿ 69 ರನ್‌ಗಳಿಸಿದರು. ಅವರೂ ಏಳು ಬೌಂಡರಿ ಬಾರಿಸಿದರು. ನಾಲ್ಕು ಸಿಕ್ಸರ್‌ ಕೂಡ ಸಿಡಿಸಿದರು.

13ನೇ ಓವರ್‌ನಲ್ಲಿ ಮಯಂಕ್ ವಿಕೆಟ್ ಗಳಿಸಿದ ಲಕ್ಮನ್ ಮೆರಿವಾಲಾ ಜೊತೆಯಾಟವನ್ನು ಮುರಿದರು. ಕ್ರಿಸ್ ಗೇಲ್ ಕೇವಲ 11 ರನ್ ಗಳಿಸಿ ನಿರ್ಗಮಿಸಿದರು. ಆದರೆ ದೀಪಕ್ ಹೂಡಾ (ಔಟಾಗದೆ 22; 13ಎಸೆತ) ಮತ್ತು ಶಾರೂಕ್ ಖಾನ್ (ಔಟಾಗದೆ 15; 5ಎಸೆತ) ತಂಡದ ಮೊತ್ತ ಹೆಚ್ಚಲು ಕಾಣಿಕೆ ನೀಡಿದರು.

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ಫೀಲ್ಡಿಂಗ್ ಲೋಪಗಳ ಕಾರಣ ಬೌಲರ್‌ಗಳ ಶ್ರಮ ವ್ಯರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT