ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ 2022: ಟೈಟನ್ಸ್‌ಗೆ ‘ರಾಯಲ್’ ಸವಾಲು

ಗುಜರಾತ್‌ಗೆ ಮೊದಲ ಸಲ, ರಾಜಸ್ಥಾನಕ್ಕೆ 14 ವರ್ಷಗಳ ನಂತರ ಪ್ರಶಸ್ತಿ
Last Updated 28 ಮೇ 2022, 14:18 IST
ಅಕ್ಷರ ಗಾತ್ರ

ಅಹಮದಾಬಾದ್: ಪದಾರ್ಪಣೆ ಆವೃತ್ತಿಯಲ್ಲೇ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿರುವ ಗುಜರಾತ್ ಟೈಟನ್ಸ್ ಮತ್ತು 14 ವರ್ಷಗಳ ನಂತರ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಮುಖಾಮುಖಿಯಾಗಲಿವೆ.

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ನಾಯಕನಾಗಿದ್ದ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿತ್ತು. ಈಗ ಶೇನ್ ವಾರ್ನ್ ಇಲ್ಲ. ಎರಡು ತಿಂಗಳ ಹಿಂದೆ ಸಾವಿಗೀಡಾದ ಅವರಿಗೆ ಪ್ರಶಸ್ತಿ ಗೆದ್ದು ಗೌರವ ಸಲ್ಲಿಸುವ ಇರಾದೆಯೂ ರಾಜಸ್ಥಾನ ತಂಡಕ್ಕಿದೆ.

ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿರುವ ಜೋಸ್ ಬಟ್ಲರ್, ರಾಜಸ್ಥಾನ ತಂಡದ ಕೈ ಹಿಡಿದಿದ್ದಾರೆ. ತಲಾ 4 ಶತಕ ಮತ್ತು ಅರ್ಧಶತಕ ಸಿಡಿಸಿರುವ ಅವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸುಲಭ ಜಯಕ್ಕೆ ಕಾರಣರಾಗಿದ್ದರು. ಆರ್‌ಸಿಬಿ ಬೌಲರ್‌ಗಳು ಅವರ ಮುಂದೆ ಕಂಗಾಲಾಗಿದ್ದರು.

ಆರ್‌ಸಿಬಿ ವಿರುದ್ಧ ಅಜೇಯ 106 ರನ್ ಗಳಿಸಿದ ಅವರು ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಸಮಗಟ್ಟಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರನೂ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಎದುರು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ 7 ವಿಕೆಟ್‌ಗಳಿಂದ ಸೋತಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಬಯಕೆಯೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡಕ್ಕಿದೆ. ಗುಜರಾತ್‌ ತಂಡಕ್ಕೆ ತವರಿನ ಅಂಗಣದಲ್ಲಿ ಸ್ಥಳೀಯ ಬೆಂಬಲಿಗರ ಪ್ರೋತ್ಸಾಹ ಇದೆ.

ಮಿಲ್ಲರ್‌, ರಾಹುಲ್‌, ರಶೀದ್‌...

‘ಕಿಲ್ಲರ್‌’ ಎಂದೇ ಅಡ್ಡಹೆಸರು ಹೊಂದಿರುವ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರೊಂದಿಗೆ ಭಾರತದ ರಾಹುಲ್ ತೇವಾಟಿಯಾ ಗುಜರಾತ್ ತಂಡದ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದು ಅಫ್ಗಾನಿಸ್ಥಾನದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್‌ನಲ್ಲೂ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಪ್ರತಿಭೆ. ವೇಗದ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಬಲವೂ ತಂಡಕ್ಕಿದೆ.

ಸಂಜು ಸ್ಯಾಮ್ಸನ್‌, ದೇವದತ್ತ ಪಡಿಕ್ಕಲ್‌, ಶಿಮ್ರೊನ್ ಹೆಟ್ಮೆಯರ್ ಮುಂತಾದವರು ರಾಜಸ್ಥಾನ ತಂಡದ ಬ್ಯಾಟಿಂಗ್ ಬಳಗದ ಭರವಸೆಯಾಗಿದ್ದು ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್‌, ಯಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಯಾವುದೇ ಬ್ಯಾಟರ್‌ಗಳನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಂಡಗಳು: ಗುಜರಾತ್ ಟೈಟನ್ಸ್‌: ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್‌, ಡೇವಿಡ್ ಮಿಲ್ಲರ್‌, ಗುರುಕೀರತ್ ಸಿಂಗ್, ಬಿ.ಸಾಯಿ ಸುದರ್ಶನ್‌, ಶುಭಮನ್ ಗಿಲ್‌, ರಾಹುಲ್ ತೇವಾಟಿಯಾ, ವಿಜಯಶಂಕರ್‌, ಮ್ಯಾಥ್ಯೂ ವೇಡ್‌, ರಹಮಾನುಲ್ಲಾ ಗುರ್ಬಜ್‌, ವೃದ್ಧಿಮಾನ್ ಸಹಾ, ಅಲ್ಜರಿ ಜೋಸೆಫ್‌, ದರ್ಶನ್ ನಲ್ಕಂಡೆ, ಲಾಕಿ ಫರ್ಗ್ಯೂಸನ್, ಮೊಹಮ್ಮದ್ ಶಮಿ, ನೂರ್ ಅಹಮ್ಮದ್, ಪ್ರದೀಪ್ ಸಾಂಗ್ವಾನ್‌, ರಶೀದ್ ಖಾನ್‌, ಸಾಯಿ ಕಿಶೋರ್‌, ವರುಣ್ ಆ್ಯರನ್‌, ಯಶ್ ದಯಾಲ್.

ರಾಜಸ್ಥಾನ ರಾಯಲ್ಸ್‌: ಸಂಜು ಸ್ಯಾಮ್ಸನ್‌ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್‌, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್‌, ಶಿಮ್ರೊನ್ ಹೆಟ್ಮೆಯರ್, ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಾಹಲ್‌, ರಿಯಾನ್ ಪರಾಗ್‌, ಕೆ.ಸಿ.ಕಾರ್ಯಪ್ಪ, ನವದೀಪ್ ಸೈನಿ, ಒಬೆದ್ ಮೆಕಾಯ್‌, ಅನುನಯ್ ಸಿಂಗ್‌, ಕುಲದೀಪ್ ಸೇನ್‌, ಕರುಣ್ ನಾಯರ್, ಧ್ರುವ ಜುರೇಲ್‌, ತೇಜಸ್ ಬರೋಕ, ಕುಲದೀಪ್‌ ಯಾದವ್‌, ಶುಭಂ ಗರ್ವಾಲ್‌, ಜೇಮ್ಸ್ ನೀಶಮ್, ನೇಥನ್ ಕಾಲ್ಟರ್‌ನೈಲ್, ರಸೀ ವ್ಯಾನ್ ಡೆರ್ ಡುಸೆನ್‌, ಡ್ಯಾರಿಲ್ ಮಿಚೆಲ್‌, ಕಾರ್ಬಿನ್ ಬಾಶ್‌.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಂಡದ ಮೇಲೆ ಶೇನ್ ವಾರ್ನ್ ಅವರ ಪ್ರಭಾವ ಅಪ್ರತಿಮ. ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿರುವ ಅವರು ನಂತರವೂ ಪ್ರೇರಕ ಶಕ್ತಿಯಾಗಿದ್ದರು.

- ಜೋಸ್ ಬಟ್ಲರ್, ರಾಜಸ್ಥಾನ ರಾಯಲ್ಸ್ ಬ್ಯಾಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT