ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಔಟ್; ಬೆಂಗಳೂರು ಇನ್: ಆರ್‌ಸಿಬಿ ‘ಆಸೆ’ ಈಡೇರಿಸಿದ ಮುಂಬೈ ಇಂಡಿಯನ್ಸ್

ಅಕ್ಷರ ಗಾತ್ರ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಅದರ ಅಭಿಮಾನಿಗಳ ಆಸೆ ಕೊನೆಗೂ ಈಡೇರಿತು. ಶನಿವಾರ ರಾತ್ರಿ ಮುಂಬೈ ಇಂಡಿಯನ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ಸೋಲುವುದರೊಂದಿಗೆ ಫಫ್ ಡುಪ್ಲೆಸಿ ಬಳಗವು ಪ್ಲೇ ಆಫ್‌ ಪ್ರವೇಶ ಖಚಿತವಾಯಿತು.

ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ತನ್ನ ಎಲ್ಲ 14 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿಯು 16 ಅಂಕ ಗಳಿಸಿತ್ತು. 14 ಪಾಯಿಂಟ್‌ಗಳೊಂದಿಗೆ ಡೆಲ್ಲಿ ತಂಡವು ಶನಿವಾರ ಮುಂಬೈ ಎದುರು ಜಯಿಸಿದ್ದರೆ, ಪಾಸಿಟಿವ್ ರನ್‌ರೇಟ್ ಕಾರಣ ಪ್ಲೇಆಫ್ ಪ್ರವೇಶಿಸುವ ಅವಕಾಶ ಇತ್ತು. ಅದರಿಂದಾಗಿ ಆರ್‌ಸಿಬಿ ಅವಕಾಶ ಕೈತಪ್ಪುತ್ತಿತ್ತು. ಅದರಿಂದಾಗಿಯೇ ಡೆಲ್ಲಿ–ಮುಂಬೈ ಪಂದ್ಯವು ಮಹತ್ವ ಪಡೆದಿತ್ತು. ಆರ್‌ಸಿಬಿ ತಂಡದ ಆಟಗಾರರು, ಫ್ರ್ಯಾಂಚೈಸಿ ಸಿಬ್ಬಂದಿ ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡು ದಿನಗಳಿಂದ ಮುಂಬೈ ಇಂಡಿಯನ್ಸ್‌ ಗೆಲುವಿಗಾಗಿ ಶುಭ ಹಾರೈಸಿದ್ದರು.

ಈ ಸಲದ ಟೂರ್ನಿಯಲ್ಲಿ 10 ಪಂದ್ಯಗಳನ್ನು ಸೋತು ಈಗಾಗಲೇ ಹೊರಬಿದ್ದಿರುವ ರೋಹಿತ್ ಶರ್ಮಾ ಬಳಗವು ಡೆಲ್ಲಿ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು, ಆರ್‌ಸಿಬಿಗೆ ಅನುಕೂಲವಾಯಿತು.ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಸ್‌ಪ್ರೀತ್ ಬೂಮ್ರಾ (25ಕ್ಕೆ3) ಉತ್ತಮ ಬೌಲಿಂಗ್ ಮುಂದೆ ಡೆಲ್ಲಿ ತಂಡಕ್ಕೆ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಪೊವೆಲ್ (43; 34ಎ) ಮತ್ತು ನಾಯಕ ರಿಷಭ್ ಪಂತ್ (39; 33ಎ) ಐದನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 75 ರನ್‌ಗಳ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಲ್ಲಿ 159 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಮುಂಬೈ ತಂಡವು ಇಶಾನ್ ಕಿಶನ್ (48; 35ಎ) ಮತ್ತು ಟಿಮ್ ಡೇವಿಡ್ (34; 11ಎ) ಬ್ಯಾಟಿಂಗ್ ಬಲದಿಂದ 19.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 160 ರನ್ ಗಳಿಸಿ ಜಯಿಸಿತು. ಡೆಲ್ಲಿ ತಂಡದ ಫೀಲ್ಡಿಂಗ್ ಲೋಪಗಳು ಮುಳುವಾದವು. ಅದರಲ್ಲೂ ನಾಯಕ, ವಿಕೆಟ್‌ಕೀಪರ್ ರಿಷಭ್ ಪಂತ್ 12ನೇ ಓವರ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್‌ ಅನ್ನು ಕೈಚೆಲ್ಲಿದರು. ಎಂಟನೇ ಓವರ್‌ನಲ್ಲಿಯೂ ಶಾರ್ದೂಲ್ ಠಾಕೂರ್ ಅವರಿಂದ ಬ್ರೆವಿಸ್ ಜೀವದಾನ ಪಡೆದಿದ್ದರು. ಬ್ರೆವಿಸ್ 33 ಎಸೆತಗಳಲ್ಲಿ 37 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಇನ್ನೊಂದೆಡೆ ಇಶಾನ್ ಕೂಡ ಮಿಂಚಿದರು. ಮಧ್ಯಮಕ್ರಮಾಂಕದಲ್ಲಿ ತಿಲಕ್ ವರ್ಮಾ (21 ರನ್) ಮತ್ತು ಟಿಮ್ ಡೇವಿಡ್ (34; 11ಎಸೆತ) ಚೆಂದದ ಆಟವಾಡಿ ಮುಂಬೈ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸಿದರು.

‘ಬಣ್ಣ’ ಬದಲಿಸಿದ ಆರ್‌ಸಿಬಿ

ಈ ಪಂದ್ಯದಲ್ಲಿ ಡೆಲ್ಲಿ ತಂಡವು ಸೋತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್‌ ಪ್ರವೇಶದ ಅವಕಾಶ ಸಿಗಲಿದೆ. ಆದ್ದ ರಿಂದಾಗಿ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಜಯಿಸಲಿ ಎಂದು ಆರ್‌ಸಿಬಿಯ ಆಟಗಾರರು, ಫ್ರ್ಯಾಂಚೈಸಿ ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆರ್‌ಸಿಬಿ ಫ್ರ್ಯಾಂಚೈಸಿಯು ತನ್ನ ಟ್ವಿಟರ್‌ ಖಾತೆಯಲ್ಲಿ ಲಾಂಛನದ ಬಣ್ಣವನ್ನೇ ಬದಲಿಸಿದೆ. ಕೆಂಪು ಬಣ್ಣದ ಬದಲಿಗೆ ಮುಂಬೈ ತಂಡದ ನೀಲಿಯನ್ನು ಹಾಕಿದೆ. ಆರ್‌ಸಿಬಿ ಬೆಂಬಲಿಗರೆಲ್ಲರೂ ಮುಂಬೈ ವಿಜಯಕ್ಕೆ ಹಾರೈಸುತ್ತಿದ್ದಾರೆ ಎಂದು ಹೇಳಿದೆ.‘ಕೊನೆ ಪಂದ್ಯದಲ್ಲಿ ರೋಹಿತ್ ಆಟ ಗರಿಗೆದರಲಿದೆ. ಮುಂಬೈ ವಿಜಯಿಯಾಗಲಿ’ ಎಂದು ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಹಾರೈಸಿದ್ದಾರೆ.ಆರ್‌ಸಿಬಿ ಆಟಗಾರರು, ಸಿಬ್ಬಂದಿ ಮತ್ತು ಅಧಿಕಾರಿಗಳು ಹೋಟೆಲ್‌ನಲ್ಲಿ ದೊಡ್ಡಪರದೆಯ ಮೇಲೆ ಡೆಪಂದ್ಯವನ್ನು ವೀಕ್ಷಿಸಿದರು. ಡೆಲ್ಲಿಯ ವಿಕೆಟ್‌ಗಳು ಪಟಪಟನೆ ಪತನವಾದ ಸಂದರ್ಭದಲ್ಲಿ ಬೆಂಗಳೂರು ಆಟಗಾರರು ಸಂತಸ ವ್ಯಕ್ತಪಡಿಸಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರ ಗಮನ ಸೆಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT