ಭಾನುವಾರ, ಜೂನ್ 26, 2022
26 °C

IPL 2022 RCB vs LSG: ಪಾಟಿದಾರ್ ಶತಕ; ಆರ್‌ಸಿಬಿಗೆ ರೋಚಕ ಜಯ, ಲಖನೌ ಔಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ರಜತ್ ಪಾಟಿದಾರ್ ಅಮೋಘ ಶತಕದ (112*) ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪ್ಲೇ-ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ 14 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಟ್ರೋಫಿ ಕನಸು ಭಗ್ನಗೊಂಡಿದೆ. 

ಅತ್ತ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿರುವ ಫಫ್ ಡುಪ್ಲೆಸಿ ನೇತೃತ್ವದ ಆರ್‌ಸಿಬಿ, ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ. 

ಅಲ್ಲಿ ಗೆದ್ದ ತಂಡವು ಭಾನುವಾರ ಅಹಮದಾಬಾದ್‌ನಲ್ಲೇ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟ್ರೋಫಿಗಾಗಿ ಸೆಣಸಲಿವೆ. 

ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಮಳೆಯಿಂದಾಗಿ ವಿಳಂಬಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡವು ಪಾಟಿದಾರ್ ಹಾಗೂ ದಿನೇಕ್ ಕಾರ್ತಿಕ್ ಅಮೋಘ ಜೊತೆಯಾಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 

ಬಳಿಕ ಕರ್ನಾಟಕದ ಕೆ.ಎಲ್. ರಾಹುಲ್ (79) ದಿಟ್ಟ ಹೋರಾಟದ ಹೊರತಾಗಿಯೂ ಲಖನೌ ಆರು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಬೃಹತ್ ಮೊತ್ತ ಬೆನ್ನಟ್ಟಿದ ಲಖನೌಗೆ ಮೊದಲ ಓವರ್‌ನಲ್ಲೇ ಮೊಹಮ್ಮದ್ ಸಿರಾಜ್ ಪೆಟ್ಟು ಕೊಟ್ಟರು. ಕ್ವಿಂಟನ್ ಡಿ ಕಾಕ್ 6 ರನ್ ಗಳಿಸಿ ಔಟ್ ಆದರು. ಮನನ್ ವೊಹ್ರಾಗೆ (19) ಜೋಶ್ ಹ್ಯಾಜಲ್‌ವುಡ್ ಪೆವಿಲಿಯನ್ ಹಾದಿ ತೋರಿಸಿದರು. 

ಈ ಹಂತದಲ್ಲಿ ಜೊತೆ ಸೇರಿದ ನಾಯಕ ಕೆ.ಎಲ್. ರಾಹುಲ್ ಹಾಗೂ ದೀಪಕ್ ಹೂಡ ತಂಡವನ್ನು ಮುನ್ನಡೆಸಿದರು. 10 ಓವರ್ ಅಂತ್ಯಕ್ಕೆ ಲಖನೌ ಎರಡು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಕೊನೆಯ 60 ಎಸೆತಗಳಲ್ಲಿ ಗೆಲುವಿಗೆ 119 ರನ್‌ಗಳ ಅಗತ್ಯವಿತ್ತು. 

ಅತ್ತ ನಾಯಕನ ಆಟವಾಡಿದ ರಾಹುಲ್ 43 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ದೀಪಕ್ ಜೊತೆಗೆ ಮೂರನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 

26 ಎಸೆತಗಳನ್ನು ಎದುರಿಸಿದ ಹೂಡ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 45 ರನ್ ಗಳಿಸಿದರು. ಹೂಡ ವಿಕೆಟ್ ಗಳಿಸಿದ ವನಿಂದ ಹಸರಂಗ ಎದುರಾಳಿಗಳಿಗೆ ತಿರುಗೇಟು ನೀಡಿದರು. 

ಕೊನೆಯ 30 ಎಸೆತಗಳಲ್ಲಿ ಲಖನೌ ಗೆಲುವಿಗೆ 65 ರನ್ ಬೇಕಾಗಿತ್ತು. ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದ ರಾಹುಲ್ ಆರ್‌ಸಿಬಿ ಪಾಳಯದಲ್ಲಿ ನಡುಕ ಸೃಷ್ಟಿಸಿದರು. 

ಆದರೆ 19ನೇ ಓವರ್‌ನಲ್ಲಿ ರಾಹುಲ್ ಅವರನ್ನು ಜೋಶ್ ಹ್ಯಾಜಲ್‌ವುಡ್ ಔಟ್ ಮಾಡುವುದರೊಂದಿಗೆ ಲಖನೌ ಗೆಲುವಿನ ಕನಸು ಕಮರಿತು. 58 ಎಸೆತಗಳನ್ನು ಎದುರಿಸಿದ ರಾಹುಲ್ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 79 ರನ್ ಗಳಿಸಿದರು. 

ಅಂತಿಮವಾಗಿ ಲಖನೌ ಆರು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ 9, ಎವಿನ್ ಲೂಯಿಸ್ 2*, ದುಶ್ಮಂತ ಚಮೀರ 11* ರನ್ ಗಳಿಸಿದರು. 

ಆರ್‌ಸಿಬಿ ಪರ ಹ್ಯಾಜಲ್‌ವುಡ್ ಮೂರು ವಿಕೆಟ್ ಗಳಿಸಿದರು. ಹರ್ಷಲ್ ಪಟೇಲ್ ಒಂದು ವಿಕೆಟ್ ಕಬಳಿಸಿದ್ದರಲ್ಲದೆ 25 ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿ ಎನಿಸಿಕೊಂಡರು. 
 

ಪಾಟಿದಾರ್ ಸ್ಫೋಟಕ ಶತಕ...

 

ಈ ಮೊದಲು ರಜತ್ ಪಾಟಿದಾರ್ (112*) ಸ್ಫೋಟಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 

ದಿನೇಶ್ ಕಾರ್ತಿಕ್ 37* ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಮಳೆಯಿಂದಾಗಿ 40 ನಿಮಿಷ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲಿ ನಾಯಕ ಫಫ್ ಡುಪ್ಲೆಸಿ (0) ವಿಕೆಟ್ ನಷ್ಟವಾಯಿತು. ಮೊಹಸಿನ್ ಖಾನ್ ದಾಳಿಯಲ್ಲಿ ಖಾತೆ ತೆರೆಯಲಾಗದೇ ಡುಪ್ಲೆಸಿ ಪೆವಿಲಿಯನ್‌ಗೆ ಮರಳಿದರು. 

ಬಳಿಕ ಜೊತೆ ಸೇರಿದ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ತಂಡವನ್ನು ಮುನ್ನಡೆಸಿದರು. ವಿರಾಟ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಪಾಟಿದಾರ್ ಆಕ್ರಮಣಕಾರಿ ಆಟವಾಡಿದರು. 

ಕೃಣಾಲ್ ಪಾಂಡ್ಯ ಅವರ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 20 ರನ್ ಸಿಡಿಸಿದರು. ಈ ಮೂಲಕ ಪವರ್ ಪ್ಲೇನಲ್ಲಿ ಆರ್‌ಸಿಬಿ ಒಂದು ವಿಕೆಟ್ ನಷ್ಟಕ್ಕೆ 52 ರನ್ ಪೇರಿಸಿತು. 

ಪಾಟಿದಾರ್ ಹಾಗೂ ಕೊಹ್ಲಿ ದ್ವಿತೀಯ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 24 ಎಸೆತಗಳನ್ನು ಎದುರಿಸಿದ ಕೊಹ್ಲಿ ಎರಡು ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು. 

ಅತ್ತ ಬಿರುಸಿನ ಆಟವಾಡಿದ ಪಾಟಿದಾರ್ 28 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಗಳಿಸಿ ಔಟ್ ಆದರು. 

ಮಹಿಪಾಲ್ ಲೊಮ್ರೊರ್ (14) ಸಹ ಬೇಗನೇ ನಿರ್ಗಮಿಸಿದರು. ನಿರ್ಣಾಯಕ ಹಂತದಲ್ಲಿ ದಿನೇಕ್ ಕಾರ್ತಿಕ್ ಹಾಗೂ ಪಾಟಿದಾರ್ ಜೀವದಾನ ಪಡೆದಿರುವುದು ಆರ್‌ಸಿಬಿ ಪಾಲಿಗೆ ವರದಾನವಾಗಿ ಪರಿಣಮಿಸಿತು. 

ಇದರ ಸ್ಪಷ್ಟ ಲಾಭ ಪಡೆದ ಪಾಟಿದಾರ್, ರವಿ ಬಿಷ್ಣೋಯಿ ಅವರ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದಂತೆ 27 ರನ್ ಗಳಿಸಿದರು. ಅವರಿಗೆ ಕಾರ್ತಿಕ್ ತಕ್ಕ ಸಾಥ್ ನೀಡಿದರು. 

ಅಮೋಘ ಆಟವಾಡಿದ ಪಾಟಿದಾರ್ 49 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಶತಕ ಸಾಧನೆ ಮಾಡಿದರು. 

ಪಾಟಿದಾರ್ ಹಾಗೂ ಕಾರ್ತಿಕ್ ಮುರಿಯದ ಐದನೇ ವಿಕೆಟ್‌ಗೆ 41 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟ ಕಟ್ಟಿದರು. ಈ ಮೂಲಕ ಆರ್‌ಸಿಬಿ 207 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 

54 ಎಸೆತಗಳನ್ನು ಎದುರಿಸಿದ ಪಾಟಿದಾರ್ 112 ರನ್ ಗಳಿಸಿ ಔಟಾಗದೆ ಉಳಿದರು. ಅವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು. 

ದಿನೇಕ್ ಕಾರ್ತಿಕ್ 23 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು. ಲಖನೌ ಪರ ಮೊಹಸಿನ್ ಕಾನ್ ಹೊರತುಪಡಿಸಿ ಇತರೆಲ್ಲ ಬೌಲರ್‌ಗಳು ದುಬಾರಿಯೆನಿಸಿದರು. 
 

ಟಾಸ್ ಗೆದ್ದ ಲಖನೌ ಫೀಲ್ಡಿಂಗ್...

ಈ ಮೊದಲು ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಮಳೆಯಿಂದಾಗಿ ಟಾಸ್ 55 ನಿಮಿಷಗಳಷ್ಟು ವಿಳಂಬವಾಗಿತ್ತು. ಹಾಗೆಯೇ ಪಂದ್ಯ 40 ನಿಮಿಷ ತಡವಾಗಿ ಆರಂಭವಾಗಿತ್ತು. ಆದರೆ ನಿಗದಿತ ಓವರ್‌ಗಳ ಸಂಖ್ಯೆಯಲ್ಲಿ ಯಾವುದೇ ಕಡಿತ ಉಂಟಾಗಲಿಲ್ಲ. 

ಟಾಸ್ ಗೆದ್ದ ಲಖನೌ

ಪಂದ್ಯ ರದ್ದಾದರೆ ?
 

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. 

 

ಅಲ್ಲದೆ ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದ ತಂಡವು ಭಾನುವಾರ ಪ್ರಶಸ್ತಿಗಾಗಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿದೆ. 

ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ್ದ ಗುಜರಾತ್ ಟೈಟನ್ಸ್, ಫೈನಲ್‌ಗೆ ಪ್ರವೇಶಿಸಿತ್ತು. 

ಆರ್‌ಸಿಬಿಗೆ ಕಠಿಣ ಸವಾಲು...
ಲೀಗ್ ಸುತ್ತಿನ ಕೊನೆಯ ಹಂತದ  ನಾಟಕೀಯ ಲೆಕ್ಕಾಚಾರಗಳಲ್ಲಿ ಪ್ಲೇ ಆಫ್‌ ಪ್ರವೇಶ ಗಿಟ್ಟಿಸಿಕೊಂಡಿರುವ ಆರ್‌ಸಿಬಿ ಮುಂದೆ ಈಗ ಕಠಿಣ ಸವಾಲು ಇದೆ. 

ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ಎದುರು ಸೋತ ಕಾರಣಕ್ಕೆ ಆರ್‌ಸಿಬಿಯ ಹಾದಿ ಸುಗಮವಾಗಿತ್ತು. ಅದರಿಂದಾಗಿ ಸತತ ಮೂರನೇ ಆವೃತ್ತಿಯಲ್ಲಿಯೂ ಪ್ಲೇ  ಆಫ್‌ ಪ್ರವೇಶಿಸಿತು.   

ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. 

ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‌ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು. 

ಅತ್ತ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌, ಪ್ಲೇ-ಆಫ್‌ಗೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. 

ಕ್ವಿಂಟನ್ ಡಿಕಾಕ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆವೇಶ್ ಖಾನ್, ಮೊಹಸೀನ್ ಖಾನ್ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಎದುರಿಸುವ ಸವಾಲು ಬೆಂಗಳೂರು ಬ್ಯಾಟಿಂಗ್ ಪಡೆಯ ಮುಂದಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು