ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 SRH vs LSG: ಮತ್ತೆ ಮುಗ್ಗರಿಸಿದ ಸನ್‌ರೈಸರ್ಸ್; ಲಖನೌಗೆ ಎರಡನೇ ಜಯ

Last Updated 4 ಏಪ್ರಿಲ್ 2022, 18:13 IST
ಅಕ್ಷರ ಗಾತ್ರ

ಮುಂಬೈ:ಆವೇಶ್ ಖಾನ್‌ ಅವರ ಅತ್ಯುತ್ತಮ ಬೌಲಿಂಗ್ ಬಲದಿಂದಲಖನೌ ಸೂಪರ್‌ ಜೈಂಟ್ಸ್‌ ತಂಡವು ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ 12 ರನ್‌ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆಲಖನೌ ತಂಡ ಐಪಿಎಲ್‌–2022 ಟೂರ್ನಿಯಲ್ಲಿ ಎರಡನೇ ಜಯದ ಸವಿಯುಂಡರೆ, ರೈಸರ್ಸ್‌ ಸತತ ಎರಡನೇ ಪಂದ್ಯದಲ್ಲಿಯೂ ಮುಗ್ಗರಿಸಿತು.

ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ನೀಡಿದ 170 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಅಭಿಷೇಕ್ ಶರ್ಮಾ (13), ನಾಯಕ ಕೇನ್ ವಿಲಿಯಮ್ಸನ್‌ (16) ತಂಡದ ಮೊತ್ತ 38 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಮೂರನೇ ವಿಕೆಟ್‌ಗೆ ಜೊತೆಯಾದ ರಾಹುಲ್ ತ್ರಿಪಾಠಿ (44) ಮತ್ತು ಏಡನ್ ಮರ್ಕರಂ (12) ಜೋಡಿ 44 ರನ್‌ ಸೇರಿಸಿ ಭರವಸೆ ಮೂಡಿಸಿತು. ಆದರೆ, 13 ರನ್ ಅಂತರದಲ್ಲಿ ಈ ಇಬ್ಬರೂ ಔಟಾದರು.

ಈ ಹಂತದಲ್ಲಿ ರೈಸರ್ಸ್ ಪಡೆ95 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಪಂದ್ಯ ಕಸಿದುಕೊಂಡಖಾನ್
ಗೆಲ್ಲಲು 41 ಎಸೆತಗಳಲ್ಲಿ 75 ರನ್‌ ಗಳಿಸಬೇಕಿದ್ದಾಗ ಜೊತೆಯಾದ ವೆಸ್ಟ್‌ಇಂಡೀಸ್ ಬ್ಯಾಟರ್‌ ನಿಕೋಲಸ್ ಪೂರನ್‌ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ ಜೋಡಿ ರೈಸರ್ಸ್‌ ತಂಡದ ಜಯದ ಆಸೆ ಚಿಗುರಿಸಿತು. ಇವರಿಬ್ಬರು 48 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.

ಆದರೆ, 18ನೇ ಓವರ್‌ನಲ್ಲಿ ದಾಳಿಗಿಳಿದ ಆವೇಶ್‌ ಖಾನ್ ಪಂದ್ಯಕ್ಕೆ ತಿರುವು ನೀಡಿದರು. ಸತತ ಎರಡು ಎಸೆತಗಳಲ್ಲಿ ನಿಕೋಲಸ್ ಪೂರನ್‌ (34) ಮತ್ತು ಅಬ್ದುಲ್ ಸಮದ್ (0) ವಿಕೆಟ್ ಕಬಳಿಸಿದ ಆವೇಶ್, ಪಂದ್ಯವನ್ನು ರೈಸರ್ಸ್‌ ಕೈಯಿಂದ ಕಸಿದುಕೊಂಡರು.

ಕೊನೇ ಓವರ್‌ನಲ್ಲಿ 16 ರನ್‌ ಬೇಕಿದ್ದಾಗ ಸುಂದರ್‌ (18) ಔಟಾದರು.

ಹೀಗಾಗಿ ರೈಸರ್ಸ್‌ ಗೆಲುವಿನ ಆಸೆ ಕಮರಿತು. ಅಂತಿಮವಾಗಿ ಕೇನ್‌ ಪಡೆ 9 ವಿಕೆಟ್‌ಗಳನ್ನು ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಲಖನೌ ಪರ ಆವೇಶ್ ಖಾನ್ 4 ಓವರ್‌ಗಳಲ್ಲಿ 24 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು.ಜೇಸನ್ ಹೋಲ್ಡರ್ ಮೂರು ಮತ್ತು ಕೃಣಾಲ್ ಪಾಂಡ್ಯಎರಡು ವಿಕೆಟ್ ಕಿತ್ತರು.

ಮೂರು ಪಂದ್ಯಗಳನ್ನು ಆಡಿರುವ ರಾಹುಲ್ ಪಡೆಗೆ ಇದು ಎರಡನೇ ಜಯ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ವಿರುದ್ಧ ಸೋತಿದ್ದ ಈ ತಂಡ, ನಂತರ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸಿತ್ತು.

ಸನ್‌ರೈಸರ್ಸ್‌ ಪಡೆ ತನ್ನ ಮೊದಲ ಪಂದ್ಯದಲ್ಲಿಯೂ ರಾಜಸ್ಥಾನ ರಾಯಲ್ಸ್‌ಗೆ ಮಣಿದಿತ್ತು.

ರಾಹುಲ್, ಹೂಡಾ ಆಸರೆ
ಇದಕ್ಕೂ ಮೊದಲುಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಖನೌ, ಆರಂಭಿಕ ಆಘಾತ ಅನುಭವಿಸಿತು.ನಾಯಕ ಕೆ.ಎಲ್‌.ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಕ್ವಿಂಟನ್‌ ಡಿ ಕಾಕ್ ಮತ್ತು ಎವಿನ್‌ ಲೂಯಿಸ್‌ ತಲಾ ಒಂದು ರನ್‌ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಫಾರ್ಮ್‌ ಕಂಡುಕೊಳ್ಳಲು ತಿಣುಕಾಡುತ್ತಿರುವ ಕನ್ನಡಿಗ ಮನೀಷ್ ಪಾಂಡೆ ಕೇವಲ 11 ರನ್ ಗಳಿಸಿ ಔಟಾದರು.

ಹೀಗಾಗಿ 3.4 ಓವರ್‌ಗಳಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಯಾದ ರಾಹುಲ್ ಮತ್ತು ಮಧ್ಯಮ ಕ್ರಮಾಂಕದ ದೀಪಕ್ ಹೂಡಾ ವಿಕೆಟ್‌ ಬೀಳದಂತೆ ನೋಡಿಕೊಂಡರು. ರನ್‌ ಗಳಿಕೆಗೂ ಒತ್ತು ನೀಡಿದ ಈ ಜೋಡಿ 10.2 ಓವರ್‌ಗಳಲ್ಲಿ87 ರನ್‌ ಕಲೆಹಾಕಿತು.

ಹೂಡಾ 33 ಎಸೆತಗಳಲ್ಲಿ 51 ರನ್‌ ಗಳಿಸಿದರೆ, ರಾಹುಲ್50 ಎಸೆತಗಳಲ್ಲಿ68 ರನ್ ಬಾರಿಸಿದರು. ಹೀಗಾಗಿ ಲಖನೌ ಪಡೆ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಹನ್ನೊಂದರ ಬಳಗ
ಲಖನೌ ಸೂಪರ್‌ಜೈಂಟ್ಸ್:
ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಎವಿನ್ ಲೂಯಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬದೋನಿ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್,ಆ್ಯಂಡ್ರ್ಯೂ ಟೈ, ರವಿ ಬಿಷ್ಣೋಯಿ, ಆವೇಶ್ ಖಾನ್

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್‌ಕೀಪರ್), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮರ್ಕರಂ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮೆರಿಯಾ ಶೇಫರ್ಡ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರನ್ ಮಲಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT