ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪ್ರತಿಧ್ವನಿ

ಕ್ರಿಕೆಟ್ ತಾರೆಯರ ಅಭ್ಯಾಸ ಕಣ್ತುಂಬಿಕೊಳ್ಳಲು ಕಿಕ್ಕಿರಿದ ಅಭಿಮಾನಿಗಳು; ಎಬಿಡಿ, ಗೇಲ್ ಆಕರ್ಷಣೆ
Last Updated 27 ಮಾರ್ಚ್ 2023, 4:15 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಹಬ್ಬದ ವಾತಾವರಣ ಮನೆಮಾಡಿತ್ತು. ಕ್ರಿಕೆಟ್ ತಾರೆಯರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಫಫ್ ಡುಪ್ಲೆಸಿ ಅವರೇ ಪ್ರಮುಖ ಆಕರ್ಷಣೆಯಾಗಿದ್ದರು.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಏ.2ರಂದು ಇಲ್ಲಿಯೇ ತನ್ನ ಮೊದಲ ಪಂದ್ಯ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ‘ಅನ್‌ಬಾಕ್ಸ್‌’ ಕಾರ್ಯಕ್ರಮ ಭಾನುವಾರ ನಡೆಯಿತು. ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಹಾಗೂ ಆರ್‌ಸಿಬಿಯನ್ನು ಈ ಹಿಂದೆ ಕೆಲವು ವರ್ಷಗಳವರೆಗೆ ಪ್ರತಿನಿಧಿಸಿದ್ದ ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಹಾಗೂ ವೆಸ್ಟ್ ಇಂಡೀಸ್‌ನ ಗೇಲ್ ಕೂಡ ಈ ಸಂದರ್ಭದಲ್ಲಿದ್ದರು.

ನಿಗದಿತ ಟಿಕೆಟ್‌ಗಳನ್ನು ಖರೀದಿಸಿದ್ದ ಪ್ರೇಕ್ಷಕರು ಮಧ್ಯಾಹ್ನದ ಮೂರು ಗಂಟೆಯ ಬಿಸಿಲನ್ನೂ ಲೆಕ್ಕಿಸದೇ ಕ್ರೀಡಾಂಗಣದಲ್ಲಿ ಹಾಜರಿದ್ದರು. ಆರ್‌ಸಿಬಿ ಜೆರ್ಸಿ ಧರಿಸಿ, ಮತ್ತು ಧ್ವಜ ನೆಟ್ಸ್‌ನಲ್ಲಿ ಸಂಜೆಯವರೆಗೂ ಆಟಗಾರರು ಅಭ್ಯಾಸ ನಡೆಸಿದರು.

ಕೋವಿಡ್ ಕಾರಣದಿಂದಾಗಿ 2020ರಿಂದ 2022ರವರೆಗಿನ ಮೂರು ಆವೃತ್ತಿಗಳ ಟೂರ್ನಿಗಳು ‘ಬಯೋಬಬಲ್‌ ವ್ಯವಸ್ಥೆ’ಯಲ್ಲಿ ನಡೆದಿದ್ದವು. ಮೊದಲೆರಡು ವರ್ಷದ ಟೂರ್ನಿಗಳು ದುಬೈನಲ್ಲಿ ನಡೆದಿದ್ದವು. ಹೋದ ವರ್ಷ ಮುಂಬೈನ ಕ್ರೀಡಾಂಗಣಗಳಲ್ಲಿ ಪಂದ್ಯಗಳೂ ನಡೆದಿದ್ದವು. ಈ ವರ್ಷ ಹೋಮ್ ಹಾಗೂ ಅವೇ ಪದ್ಧತಿಯನ್ನು ಮರಳಿ ಜಾರಿ ಮಾಡಲಾಗಿದೆ. ಇದರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮರಳಿದೆ.

‘ಆರ್‌ಸಿಬಿಯು ಐಪಿಎಲ್‌ನಲ್ಲಿಯೇ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದೆ. ಮೂರು ಕೋಟಿಗೂ ಹೆಚ್ಚು ಅಭಿಮಾನಿಗಳು ತಂಡವನ್ನು ಫಾಲೋ ಮಾಡುತ್ತಿದ್ದಾರೆ. 2022ರಲ್ಲಿ ತಂಡದ ಆಟವನ್ನು 262.2 ಮಿಲಿಯನ್ ವೀಕ್ಷಕರು ಟಿ.ವಿ.ಯಲ್ಲಿ ನೋಡಿದ್ದಾರೆ. ಇದು ಐಪಿಎಲ್‌ನಲ್ಲಿರುವ ಎಲ್ಲ ತಂಡಗಳಿಗಿಂತಲೂ ಹೆಚ್ಚು. ಮೂರು ವರ್ಷಗಳ ನಂತರ ಇಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಬೆಂಗಳೂರಿನ ಕ್ರಿಕೆಟ್‌ಪ್ರಿಯರಿಗೆ ಈಗ ರಸದೌತಣ ನೀಡಲು ನಮ್ಮ ತಂಡ ಸಿದ್ಧವಾಗಿದೆ’ ಎಂದು ಆರ್‌ಸಿಬಿಯ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ರಾಜೇಶ್ ಮೆನನ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ 15 ಆವೃತ್ತಿಗಳಲ್ಲಿಯೂ ಆಡಿರುವ ಆರ್‌ಸಿಬಿ ತಂಡವು ಇದುವರೆಗೆ ಒಂದು ಬಾರಿಯೂ ಟ್ರೋಫಿ ಜಯಿಸಿಲ್ಲ. ಆದರೂ ಕೂಡ ದಾಖಲೆ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದೆ.

ಆರ್‌ಸಿಬಿ ಅಭ್ಯಾಸ ಟಿಕೆಟ್‌ಗೂ ಭಾರಿ ಬೇಡಿಕೆ

ಬೇಸಿಗೆಯ ಬಿಸಿ ಏರಿದಂತೆ ‘ಕ್ರಿಕೆಟ್ ಟಿಕೆಟ್‌’ ಬೇಡಿಕೆಯ ಕಾವು ಕೂಡ ಹೆಚ್ಚುತ್ತಿದೆ. ಮೂರು ವರ್ಷಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್‌ ಪಡೆಯಲು ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ.

ಅಷ್ಟೇ ಅಲ್ಲ; ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೂರ್ವಾಭ್ಯಾಸಕ್ಕೂ ಟಿಕೆಟ್‌ ಖರೀದಿಸಿದ್ದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನರು ಕಿಕ್ಕಿರಿದು ಸೇರಿದ್ದರು. ಕಡಿಮೆ ಮೌಲ್ಯದ (₹ 650) ಟಿಕೆಟ್‌ಗಳಿಗೆ ಹೆಚ್ಚು ಬೇಡಿಕೆಯಿತ್ತು. ಅಭಿಮಾನಿಗಳು ಈ ಟಿಕೆಟ್‌ಗಳನ್ನು 900–950 ರೂಪಾಯಿ ತೆತ್ತು ಖರೀದಿಸಿದರು.

‘ನಮಗೆ ಪಂದ್ಯದ ಟಿಕೆಟ್‌ಗಳು ಸಿಕ್ಕಿಲ್ಲ. ಆನ್‌ಲೈನ್‌ನಲ್ಲಿ ದುಬಾರಿ ಟಿಕೆಟ್‌ಗಳು ಮಾತ್ರ ಉಳಿದುಕೊಂಡಿವೆ. ಇವತ್ತು ರಜೆ ದಿನವೂ ಆಗಿರುವುದರಿಂದ ಸ್ನೇಹಿತರೊಂದಿಗೆ ಆರ್‌ಸಿಬಿಯ ಎಲ್ಲ ಆಟಗಾರರನ್ನೂ ನೋಡಬಹುದು. ಅಲ್ಲದೇ ಆಟಗಾರರು ಗ್ಯಾಲರಿಗೇ ಬಂದು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಸಾಧ್ಯತೆಯೂ ಇದೆ. ಅದರಿಂದಾಗಿ ಬ್ಲ್ಯಾಕ್‌ ಟಿಕೆಟ್ ಕೊಂಡುಕೊಂಡಿದ್ದೇವೆ’ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಆರ್‌ಸಿಬಿ ಪೋಷಾಕು ತೊಟ್ಟು ನಿಂತಿದ್ದ ಸಂಕೇತ್ ಮತ್ತು ಸಂಗಡಿಗರು ಹೇಳಿದರು.

ಒಂದು ವಾರದ ಹಿಂದೆ ಆನ್‌ಲೈನ್‌ನಲ್ಲಿ ಆರಂಭವಾದ ಮಾರಾಟದಲ್ಲಿ ಏ.2ರ ಪಂದ್ಯದ ಬಹುತೇಕ ಟಿಕೆಟ್‌ಗಳು ಮಾರಾಟವಾಗಿವೆ. ₹ 24,200 (ಪಿ ಕಾರ್ಪೋರೇಟ್) ಟಿಕೆಟ್‌ಗಳು ಒಂದಿಷ್ಟು ಉಳಿದುಕೊಂಡಿವೆ. ಕೌಂಟರ್‌ (ಬಾಕ್ಸ್‌ ಆಫೀಸ್) ಟಿಕೆಟ್‌ಗಳೂ ಈಗಾಗಲೇ ಬಿಕರಿಯಾಗಿವೆ. ಬೆಂಗಳೂರಿನಲ್ಲಿ ನಡೆಯುವ ಇನ್ನುಳಿದ ಆರು ಪಂದ್ಯಗಳ ಟಿಕೆಟ್‌ಗಳೂ ಕೂಡ ಬಹುತೇಕ ಬುಕ್ ಆಗಿವೆ. ಈ ಪಂದ್ಯಗಳ ಬಾಕ್ಸ್‌ ಆಫೀಸ್ ಟಿಕೆಟ್‌ಗಳು ಇನ್ನಷ್ಟೇ ಮಾರಾಟವಾಗಬೇಕಿವೆ ಎಂದು ಆರ್‌ಸಿಬಿ ತಂಡದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT