ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಅಂಗಳದಲ್ಲಿ ಕರ್ನಾಟಕದವರ ಆಟ: ಭರವಸೆ ಮೂಡಿಸಿದ ವೈಶಾಖ, ಅಭಿನವ್

Published 30 ಮೇ 2023, 22:55 IST
Last Updated 30 ಮೇ 2023, 22:55 IST
ಅಕ್ಷರ ಗಾತ್ರ

ಬೆಂಗಳೂರು: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಹನ್ನೆರಡು ಆಟಗಾರರು ಇದ್ದರು. ಆದರೆ ಅದರಲ್ಲಿ ಕೆಲವರು ಮಾತ್ರ ಗಮನ ಸೆಳೆದರು. ಇನ್ನುಳಿದವರು ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಫಲರಾಗಲಿಲ್ಲ.

ಒಟ್ಟಿನಲ್ಲಿ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಫಫ್ ಡುಪ್ಲೆಸಿ, ಮೊಹಮ್ಮದ್ ಶಮಿ ಮತ್ತು ತುಷಾರ್ ದೇಶಪಾಂಡೆ ಅವರಂತೆ ದೊಡ್ಡಮಟ್ಟದ ಸಾಧನೆಗಳೊಂದಿಗೆ ಗಮನ ಸೆಳೆಯುವಲ್ಲಿ ಕರ್ನಾಟಕದ ಆಟಗಾರರು ಯಶಸ್ವಿಯಾಗಿಲ್ಲ. ಇದ್ದುದರಲ್ಲಿ ವೈಶಾಖ ವಿಜಯಕುಮಾರ್ ಭರವಸೆ ಮೂಡಿಸಿದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದ ವೇಗಿ ವೈಶಾಖ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಈ ಹಣಾಹಣಿಯಲ್ಲಿ ಮೂರು ವಿಕೆಟ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಪಯಣ ಆರಂಭಿಸಿದರು. ಬಲಗೈ ವೇಗಿ ವೈಶಾಖ ಏಳು ಪಂದ್ಯಗಳಲ್ಲಿ ಆಡಿ ಒಟ್ಟು ಒಂಬತ್ತು ವಿಕೆಟ್ ಗಳಿಸಿದರು.

ಮೊಹಮ್ಮದ್ ಸಿರಾಜ್, ವೇಯ್ನ್ ಪಾರ್ನೆಲ್, ಜೋಶ್ ಹ್ಯಾಜಲ್‌ವುಡ್ ಹಾಗೂ ಹರ್ಷಲ್ ಪಟೇಲ್ ಅವರೊಂದಿಗೆ ಹೊಣೆ ಹಂಚಿಕೊಂಡಿದ್ದು ವಿಶೇಷ ಅನುಭವ ನೀಡಿತು. ಇದರಿಂದಾಗಿ ತಮಗೆ ಹೊಸ ಕೌಶಲ ಕಲಿಯುವ ಅವಕಾಶ ಲಭಿಸಿತು ಎಂದು ವೈಶಾಖ ಹೇಳಿದ್ದರು. ಆದರೆ ಟೂರ್ನಿಯುದ್ದಕ್ಕೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಅನುಭವಿಸಿದ ಆರ್‌ಸಿಬಿಯು ರಾಯಚೂರಿನ ಆಲ್‌ರೌಂಡರ್ ಮನೋಜ್ ಬಾಂಢಗೆ ಅವರಿಗೆ ಒಂದು ಅವಕಾಶ ಕೊಡುವ ಮನಸ್ಸು ಮಾಡಲಿಲ್ಲ. 24 ವರ್ಷದ ಮನೋಜ್ ದೇಶಿ ಋತುವಿನಲ್ಲಿ ಗಮನ ಸೆಳೆಯುವ ಅಟವಾಡಿದ್ದರು. ಇದರಿಂದಾಗಿ ‘ಸ್ಥಳೀಯ ಪ್ರತಿಭೆಗಳಿಗೆ ಆರ್‌ಸಿಬಿಯು ಅವಕಾಶ ನೀಡುವುದಿಲ್ಲ’ ಎಂದು ಕೆಲವು ಹಿರಿಯ ಕ್ರಿಕೆಟಿಗರ ಟೀಕೆಗಳಿಗೂ ಬೆಂಗಳೂರು ತಂಡ ಗುರಿಯಾಯಿತು.

ಗುಜರಾತ್ ಟೈಟನ್ಸ್ ತಂಡದಲ್ಲಿರುವ ಅಭಿನವ್ ಮನೋಹರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ ದೇವದತ್ತ ಪಡಿಕ್ಕಲ್ ತಲಾ ಒಂದು ಪಂದ್ಯಶ್ರೇಷ್ಠ ಗೌರವ ಗಳಿಸಿದ್ದು ಕೊಂಚ ಚೇತೋಹಾರಿ. ಆದರೆ ಲಖನೌ ತಂಡದ ನಾಯಕತ್ವ ವಹಿಸಿದ್ದ ಕೆ.ಎಲ್. ರಾಹುಲ್ ಅವರು ಗಾಯಗೊಂಡು ಅರ್ಧದಲ್ಲಿಯೇ ಐಪಿಎಲ್‌ ಟೂರ್ನಿಯಿಂದ ಹೊರಬೀಳಬೇಕಾಯಿತು. ರಾಹುಲ್ ಒಂಬತ್ತು ಪಂದ್ಯಗಳಲ್ಲಿ ಆಡಿ 274 ರನ್‌ ಸೇರಿಸಿದರು. ಆದರೆ ಈ ಬಾರಿ ಅವರ ಬ್ಯಾಟಿಂಗ್‌ನಲ್ಲಿ ಮೊದಲಿನ ಆತ್ಮವಿಶ್ವಾಸ ಕಾಣಲಿಲ್ಲ. ಬದಲಿಗೆ ಟಿ20 ಮಾದರಿಗೆ ಸೂಕ್ತವಲ್ಲದ ರೀತಿಯಲ್ಲಿ ಬ್ಯಾಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನೂ ಎದುರಿಸಿದರು.  ರಾಹುಲ್  ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಕರುಣ್ ನಾಯರ್ ಬೆಂಚ್‌ನಲ್ಲಿ ಕಾಲ ಕಳೆಯಬೇಕಾಯಿತು.

ಈ ಸಲ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ₹ 8.25 ಕೋಟಿ ಮೌಲ್ಯ ಗಳಿಸಿ ಸೇರ್ಪಡೆಯಾಗಿದ್ದ ಮಯಂಕ್ ಅಗರವಾಲ್ ಆಟದಲ್ಲಿ ಸ್ಥಿರತೆ ಇರಲಿಲ್ಲ. ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದರು. ಸನ್‌ರೈಸರ್ಸ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಅವರು ಎಡವಿದರು.  ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಮೊಟ್ಟಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಯ ಮನೀಷ್ ಪಾಂಡೆ ಕೂಡ ಈ ಸಲ ಮಂಕಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಪ್ರವೀಣ ದುಬೆ ಏಕೈಕ ಪಂದ್ಯ ಆಡಿದರು.

ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಏಳು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರಾದರೂ ‘ಮ್ಯಾಚ್‌ ವಿನ್ನಿಂಗ್‘ ಆಟ ಮೂಡಿಬರಲಿಲ್ಲ ಎನ್ನುವುದೂ ನಿಜ. ಕಳೆದ ರಣಜಿ ಋತುವಿನಲ್ಲಿ ಮಿಂಚಿದ್ದ ವೇಗಿ ವಿದ್ವತ್ ಕಾವೇರಪ್ಪ ಐಪಿಎಲ್‌ನಲ್ಲಿ  ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಪದಾರ್ಪಣೆ ಅವಕಾಶ ಸಿಗಲಿಲ್ಲ. ಹತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ 34 ವಿಕೆಟ್ ಗಳಿಸಿದ್ದಾರೆ. ಸ್ವಿಂಗ್ ಮತ್ತು ವೇಗವನ್ನು ಹದವಾಗಿ ಬೆರೆಸಿ ಎಸೆತಗಳನ್ನು ಪ್ರಯೋಗಿಸುವಲ್ಲಿ ಸಮರ್ಥರಾಗಿದ್ದಾರೆ.

‘ಈ ಸಲ ಕರ್ನಾಟಕದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ವೈಶಾಖ ವಿಜಯಕುಮಾರ್ ಪದಾರ್ಪಣೆ ಟೂರ್ನಿ ಇದು. ಉತ್ತಮವಾಗಿ ಆರಂಭ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಬೇಕು. ಆದರೆ ಅನುಭವಿ ಆಟಗಾರರು ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲಿಲ್ಲ. ಮಯಂಕ್, ಮನೀಷ್ ಮತ್ತು ದೇವದತ್ತ ತಲಾ ಒಂದು ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಿದರು. ಆದರೆ ನಿರಂತರತೆ ಕಾಪಾಡಿಕೊಳ್ಳಲಿಲ್ಲ‘ ಎಂದು ಕ್ರಿಕೆಟ್ ಕೋಚ್ ಆರ್‌ಎಕ್ಸ್  ಮುರಳಿ ‘ಪ್ರಜಾವಾಣಿ‘ಗೆ ಹೇಳಿದರು.

ಮಯಂಕ್ ಅಗರವಾಲ್
ಮಯಂಕ್ ಅಗರವಾಲ್
ಮನೀಷ್ ಪಾಂಡೆ
ಮನೀಷ್ ಪಾಂಡೆ
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್
ವೈಶಾಖ ವಿಜಯಕುಮಾರ್
ವೈಶಾಖ ವಿಜಯಕುಮಾರ್
ಅಭಿನವ್ ಮನೋಹರ್
ಅಭಿನವ್ ಮನೋಹರ್
ಕೃಷ್ಣಪ್ಪ ಗೌತಮ್
ಕೃಷ್ಣಪ್ಪ ಗೌತಮ್
ಮನೋಜ್ ಬಾಂಡಗೆ
ಮನೋಜ್ ಬಾಂಡಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT