ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಹೈದರಾಬಾದ್ ಎದುರು ಪಂದ್ಯ ಗೆದ್ದುಕೊಟ್ಟ ಕೋಲ್ಕತ್ತ ವೇಗಿ ರಾಣಾಗೆ ದಂಡ

Published 24 ಮಾರ್ಚ್ 2024, 5:07 IST
Last Updated 24 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಕೋಲ್ಕತ್ತ: ಐಪಿಎಲ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮಧ್ಯಮ ವೇಗದ ಬೌಲರ್‌ ಹರ್ಷಿತ್‌ ರಾಣಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ವಿರುದ್ಧ ಶನಿವಾರ ನಡೆದ ಪಂದ್ಯ ಶುಲ್ಕದ ಶೇ 60ರಷ್ಟು ದಂಡ ಹಾಕಲಾಗಿದೆ.

'ರಾಣಾ ಅವರು, ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್‌ 2.5 ಅಡಿಯಲ್ಲಿ ಎರಡು ಬಾರಿ ಲೆವಲ್‌ 1 ಅಪರಾಧ ಮಾಡಿದ್ದಾರೆ' ಎಂದು ಐಪಿಎಲ್‌ ಹೇಳಿಕೆ ಬಿಡುಗಡೆ ಮಾಡಿದೆ.

'ಎರಡು ಬಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ ಶೇ 10 ಹಾಗೂ ಶೆ 50 ರಷ್ಟು ದಂಡ ವಿಧಿಸಲಾಗಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಆದರೆ, ರಾಣಾ ಅವರು ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ವಿವರಿಸಿಲ್ಲ.

ಆರ್ಟಿಕಲ್‌ 2.5, ವಿಕೆಟ್ ಪಡೆದ ವೇಳೆ ಸಂಭ್ರಮಿಸುವಾಗ ಬ್ಯಾಟರ್‌ ಅನ್ನು ಕೆರಳಿಸುವಂತೆ ಅತಿಯಾಗಿ ವರ್ತಿಸುವುದು, ಪ್ರಚೋದನಕಾರಿ ಭಾಷೆ ಅಥವಾ ಸನ್ನೆ ಬಳಸುವುದಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಮಯಂಕ್‌ ಅಗರವಾಲ್‌ ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದಕ್ಕಾಗಿ ರಾಣಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ.

ಎಸ್‌ಆರ್‌ಎಚ್‌ ಬ್ಯಾಟಿಂಗ್‌ ವೇಳೆ ಆರನೇ ಓವರ್‌ ಬೌಲ್‌ ಮಾಡಿದ ರಾಣಾ, ಮಯಂಕ್‌ ಅವರನ್ನು ಔಟ್‌ ಮಾಡಿದ್ದರು. ಬಳಿಕ ಅವರತ್ತ 'ಫ್ಲೈಯಿಂಗ್‌ ಕಿಸ್‌' ನೀಡಿ ಸಂಭ್ರಮಿಸಿದ್ದರು.

ಪಂದ್ಯ ಗೆದ್ದುಕೊಟ್ಟ ರಾಣಾ
ಕೆಕೆಆರ್‌ ಪರ ಆ್ಯಂಡ್ರೆ ರಸೆಲ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮತ್ತು ಎಸ್‌ಆರ್‌ಎಚ್‌ ಗೆಲುವಿಗಾಗಿ ಹೆನ್ರಿಕ್ ಕ್ಲಾಸೆನ್ ನಡೆಸಿದ ವಿರೋಚಿತ ಹೋರಾಟಕ್ಕೆ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಶನಿವಾರ ಸಾಕ್ಷಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, 14 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 119 ರನ್ ಗಳಿಸಿತ್ತು. ಈ ವೇಳೆ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಸೆಲ್‌, ಸ್ಫೋಟಕ ಅರ್ಧಶತಕ ಸಿಡಿಸಿದರು. ಕೇವಲ 25 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 64 ರನ್ ಗಳಿಸಿ ಅಜೇಯರಾಗಿ ಉಳಿದರು.

ಹೀಗಾಗಿ ಆತಿಥೇಯ ತಂಡ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 208 ರನ್ ಕಲೆಹಾಕಿತು.

ಈ ಮೊತ್ತ ಬೆನ್ನತ್ತಿದ ರೈಸರ್ಸ್‌, 16 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗೆ 133 ರನ್ ಗಳಿಸಿತ್ತು. ಉಳಿದ 4 ಓವರ್‌ಗಳಲ್ಲಿ 76 ರನ್‌ ಬೇಕಿತ್ತು. 16 ಎಸೆತಗಳಲ್ಲಿ  21 ರನ್‌ ಗಳಿಸಿ ಆಡುತ್ತಿದ್ದ ಹೆನ್ರಿಕ್ ಕ್ಲಾಸೆನ್ ಮತ್ತು ಅಬ್ದುಲ್‌ ಸಮದ್ (4) ಕ್ರೀಸ್‌ನಲ್ಲಿದ್ದರು.

ಆ್ಯಂಡ್ರೆ ರಸೆಲ್‌ 17ನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿದ ಸಮದ್‌, 5ನೇ ಎಸೆತದಲ್ಲಿ ಔಟಾದರು. ಬಳಿಕ ಬಂದ ಶಹಬಾಜ್‌ ಅಹ್ಮದ್ ಕೊನೇ ಎಸೆತವನ್ನು ಬೌಂಡರಿಗಟ್ಟಿದರು. ಹೀಗಾಗಿ ಈ ಓವರ್‌ನಲ್ಲಿ 16 ರನ್ ಬಂದಿತು.

ಕ್ಲಾಸೆನ್‌ ಮತ್ತು ಅಹ್ಮದ್‌ ಜೋಡಿ, ವರುಣ್‌ ಚಕ್ರವರ್ತಿ ಹಾಕಿದ 18ನೇ ಓವರ್‌ನಲ್ಲಿ 21 ರನ್‌ ಮತ್ತು 'ಐಪಿಎಲ್‌ನ ದುಬಾರಿ ಆಟಗಾರ' ಮಿಚೇಲ್ ಸ್ಟಾರ್ಕ್‌ ಎಸೆದ 19ನೇ ಓವರ್‌ನಲ್ಲಿ 26 ರನ್‌ ಚಚ್ಚಿದರು. ಹೀಗಾಗಿ ಕೊನೇ ಓವರ್‌ನಲ್ಲಿ ಎಸ್‌ಆರ್‌ಎಚ್‌ ಜಯಕ್ಕೆ 13 ರನ್ ಬೇಕಿತ್ತು.

ಅಂತಿಮ ಓವರ್‌ ಎಸೆದ ಹರ್ಷಿತ್‌ ರಾಣಾ, ಮೊದಲ ಎಸೆತದಲ್ಲೇ ಸಿಕ್ಸರ್‌ ಬಿಟ್ಟುಕೊಟ್ಟರು. ಆದರೆ, ನಂತರದ ಎಸೆತದಲ್ಲಿ 1 ರನ್ ಮಾತ್ರ ನೀಡಿ, ಮರು ಎಸೆತದಲ್ಲಿ ಅಹ್ಮದ್‌ ವಿಕೆಟ್‌ ಪಡೆದರು. ಅದೇ ರೀತಿ 4ನೇ ಎಸೆತದಲ್ಲಿ ಒಂದು ರನ್‌ ನೀಡಿ, ಪುನಃ ಕ್ಲಾಸೆನ್‌ ವಿಕೆಟ್‌ ಕಿತ್ತರು. ಅಲ್ಲಿಗೆ ಕೆಕೆಆರ್‌ ಜಯ ಬಹುತೇಕ ಖಾತ್ರಿಯಾಯಿತು.

ಕೊನೇ ಎಸೆತದಲ್ಲಿ ಎಸ್‌ಆರ್‌ಎಚ್‌ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ವಂಚಿಸಿ ಡಾಟ್‌ ಬಾಲ್ ಎಸೆದು, ಪಂದ್ಯ ಗೆದ್ದುಕೊಟ್ಟರು.

ಕೇವಲ 29 ಎಸೆತಗಳಲ್ಲಿ 63 ರನ್‌ ಬಾರಿಸಿದ ಕ್ಲಾಸೆನ್, ಪಂದ್ಯ ಸೋತರೂ ಅಭಿಮಾನಿಗಳ ಮನ ಗೆದ್ದರು. ಅವರ ಬ್ಯಾಟ್‌ನಿಂದ ಒಟ್ಟು 8 ಸಿಕ್ಸರ್‌ ಸಿಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT