ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MI vs RR | ಬೌಲ್ಟ್‌, ಚಾಹಲ್ ದಾಳಿ: ಪರಾಗ್ ಬ್ಯಾಟಿಂಗ್; ಮುಂಬೈಗೆ ಮೂರನೇ ಸೋಲು

Published 1 ಏಪ್ರಿಲ್ 2024, 17:39 IST
Last Updated 1 ಏಪ್ರಿಲ್ 2024, 17:39 IST
ಅಕ್ಷರ ಗಾತ್ರ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿಯೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಜಯ ಒಲಿಯಲಿಲ್ಲ. ಆದರೆ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ಗೆಲುವಿನ ‘ಹ್ಯಾಟ್ರಿಕ್’ ಸಾಧನೆ ಮಾಡಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ವೇಗದ ಬೌಲರ್ ಟ್ರೆಂಟ್‌ ಬೌಲ್ಟ್‌ (22ಕ್ಕೆ3), ಸ್ಪಿನ್ನರ್ ಯಜುವೇಂದ್ರ ಚಾಹಲ್ (11ಕ್ಕೆ3) ಅವರ ದಾಳಿ ಮತ್ತು ರಿಯಾನ್ ಪರಾಗ್ ಅವರ ಚೆಂದದ ಅರ್ಧಶತಕದ ಬಲದಿಂದ ರಾಯಲ್ಸ್ ತಂಡವು 6 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡಕ್ಕೆ ಬೌಲ್ಟ್‌ ಬಿಗು ದಾಳಿಯ ಮೂಲಕ ಆಘಾತ ನೀಡಿದರು. ನಂತರ ಚಾಹಲ್ ಕೂಡ ಪೆಟ್ಟು ಕೊಟ್ಟರು. ಇದರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 15.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 127 ರನ್ ಗಳಿಸಿತು.

ರಾಯಲ್ಸ್ ತಂಡವನ್ನು ನಿಯಂತ್ರಿಸಲು ಮುಂಬೈ ಬೌಲರ್‌ಗಳಾದ ಆಕಾಶ್ ಮದ್ವಾಲ್ (20ಕ್ಕೆ3) ಮಾಡಿದ ಪ್ರಯತ್ನವು ಸಾಕಾಗಲಿಲ್ಲ. ರಿಯಾನ್ ಪರಾಗ್ (54 ರನ್) ಅರ್ಧಶತಕ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು. ಅಸ್ಸಾಂ ಹುಡುಗ ರಿಯಾನ್ ಕಳೆದ ಪಂದ್ಯದಲ್ಲಿಯೂ ಅಮೋಘ ಅರ್ಧಶತಕ ಗಳಿಸಿದ್ದರು.

ಬೌಲ್ಟ್‌ ದಾಳಿ: ಮೊದಲ ಓವರ್‌ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಕಟ್‌ ಪಡೆದಾಗ ಗ್ಯಾಲರಿಯಲ್ಲಿ ಮಹಾಮೌನ ಆರಿಸಿತು. ಶರ್ಮಾ ಅವರ ಬ್ಯಾಟಿನ ಹೊರ ಅಂಚಿಗೆ ಬಡಿದ ಚೆಂಡನ್ನು ಕೀಪರ್ ಸಂಜು ಸ್ಯಾಮ್ಸನ್ ಡೈವ್ ಮಾಡಿ ಕೆಳಮಟ್ಟದಲ್ಲಿ ಕ್ಯಾಚ್ ಪಡೆದರು. ನಮನ್‌ ಧೀರ್‌ ಮಿಡ್‌ಆನ್‌ನತ್ತ ಆಡಲು ಯತ್ನಿಸಿ ಎಲ್‌ಬಿ ಬಲೆಗೆ ಬಿದ್ದರು. ಬ್ರಿವಾಲ್ಡ್ ಕೂಡ ಮೊದಲ ಎಸೆತದಲ್ಲೇ ಶಾರ್ಟ್‌ ಥರ್ಡ್‌ಮ್ಯಾನ್‌ನಲ್ಲಿ ಕ್ಯಾಚಿತ್ತರು.

ಎಡಗೈ ಆರಂಭ ಆಟಗಾರ ಇಶಾನ್ ಕಿಶನ್ (16) ಅವರ ವಿಕೆಟ್‌ ಅನ್ನು ನ್ಯಾಂಡ್ರೆ ಬರ್ಗರ್‌ ಕಬಳಿಸಿದಾಗ ಮೊತ್ತ 4 ವಿಕೆಟ್‌ಗೆ 20.

ತಿಲಕ್ ವರ್ಮಾ (32, 29ಎಸೆತ) ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ (34, 21ಎ, 4x6) ಆಘಾತದಿಂದ ಚೇತರಿಕೆ ನೀಡುವಂತೆ ಕಂಡಿತ್ತು. ಇವರಿಬ್ಬರು 36ಎಸೆತಗಳಲ್ಲಿ 56 ರನ್ ಸೇರಿಸಿದ್ದರು. ಪಾಂಡ್ಯ ಆಕ್ರಮಣಕಾರಿಯಾಗಿದ್ದು, ಬರ್ಗರ್‌ ಅವರು ಮಾಡಿದ ಇನಿಂಗ್ಸ್‌ನಆರನೇ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಹೊಡೆದಿದ್ದರು.

ಆದರೆ ಈ ಹಂತದಲ್ಲಿ ಚಾಹಲ್ ಆಘಾತ ನೀಡಿದರು. ತಮ್ಮ ಎರಡನೇ ಓವರ್‌ನಲ್ಲೇ ಪಾಂಡ್ಯ ಅವರ ವಿಕೆಟ್‌ ಪಡೆದರು. ಆಫ್‌ಸ್ಟಂಪ್ ಆಚೆಬಿದ್ದ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಪಾಂಡ್ಯ ಲಾಂಗ್‌ಆನ್‌ನಲ್ಲಿ ಬದಲಿ ಆಟಗಾರ ಪಾವೆಲ್‌ ಓಡಿ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಆ ಮೂಲಕ ಆಪತ್ಬಾಂಧವನಾಗಿ ಪ್ರೇಕ್ಷಕರ ಮನಗೆಲ್ಲುವ ಕನಸಿಗೆ ತೆರೆಬಿತ್ತು.

ಚಾಹಲ್ ಮುಂದಿನ ಎರಡು ಓವರ್‌ಗಳಲ್ಲಿ ಕ್ರಮವಾಗಿ ಚಾವ್ಲಾ ಮತ್ತು ತಿಲಕ್‌ ವರ್ಮಾ ಅವರ ವಿಕೆಟ್‌ಗಳನ್ನು ಪಡೆದು ಹೋರಾಟದ ಮೊತ್ತ ಗಳಿಸುವ ಆಸೆಗೆ ತೆರೆಯೆಳೆದರು. ವರ್ಮಾ ಶಾರ್ಟ್‌ಥರ್ಡ್‌ ಮ್ಯಾನ್‌ನಲ್ಲಿ ಕ್ಯಾಚಿತ್ತರು. ತಂಡ 20 ಓವರುಗಳನ್ನು ಪೂರೈಸಿದ್ದೇ ಸಾಧನೆಯಂತೆ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT