ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

Published 14 ಏಪ್ರಿಲ್ 2024, 23:30 IST
Last Updated 14 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೂರ್ತಿಯುತ ಗೆಲುವೊಂದರ ಹುಡುಕಾಟದಲ್ಲಿದೆ. ಪರಿವರ್ತನೆಗೆ ನೆರವಾಗುವ ಇಂಥ ಗೆಲುವಿನ  ನಿರೀಕ್ಷೆಯಲ್ಲಿ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗ, ಹಿಂದಿಗಿಂತ ಪ್ರಬಲವಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಮುಂಬೈ ಇಂಡಿಯನ್ಸ್‌ ವಿರುದ್ಧ ಕಳೆದ ಪಂದ್ಯದಲ್ಲಿ ಅನುಭವಿಸಿದ ಮುಖಭಂಗ ತಂಡವನ್ನು ಪಾಯಿಂಟ್‌  ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿಸಿದೆ. ಆಡಿದ ಆರರಲ್ಲಿ ಐದು ಸೋಲು ಕಂಡಿರುವ ಆರ್‌ಸಿಬಿಗೆ ಈ ಹಂತದಲ್ಲಿ ಇನ್ನೊಂದು ಹಿನ್ನಡೆ ಪ್ಲೇ ಆಫ್‌ ಹಾದಿಯನ್ನು ಕಠಿಣಗೊಳಿಸಲಿದೆ.

ವಿರಾಟ್‌ ಕೊಹ್ಲಿ (6 ಪಂದ್ಯಗಳಿಂದ 319) ಒಬ್ಬರನ್ನು ಉಳಿದು ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿಲ್ಲ. ಕೆಳಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್‌ ಒಂದೆರಡು ಉತ್ತಮ ಇನಿಂಗ್ಸ್‌ ಆಡಿದ್ದಾರೆ. ಉಳಿದರಿಂದ ಹೇಳಿಕೊಳ್ಳುವ ಆಟ ಬಂದಿಲ್ಲ.

ಬೌಲಿಂಗ್‌ ವಿಭಾಗ ಆರಂಭದಿಂದಲೇ ಸತ್ವಹೀನವಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಬದಲಾವಣೆಗಳನ್ನು ಮಾಡಿದರೂ ಫಲಿತಾಂಶ ಬದಲಾಗಿಲ್ಲ. ಮೊಹಮ್ಮದ್‌ ಸಿರಾಜ್ ಹಿಂದಿನಂತೆ ಒಳ್ಳೆಯ ಲಯದಲ್ಲಿಲ್ಲ. ಅಲ್ಝಾರಿ ಜೋಸೆಫ್‌, ರೀಸ್ ಟೋಪ್ಲಿ, ವೈಶಾಖ ವಿಜಯಕುಮಾರ್‌, ವಿಲ್‌ ಜಾಕ್ಸ್‌, ಸೌರವ್‌ ಚೌಹಾನ್‌ ಹೀಗೆ ಅನೇಕರು ಅವಕಾಶ ಪಡೆದಿದ್ದಾರೆ. ಸ್ಪಿನ್‌ ಬೌಲಿಂಗ್‌ ದುರ್ಬಲವಾಗಿದೆ. ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲೂ ಹೆಚ್ಚೇನೂ  ಕೊಡುಗೆ ನೀಡಿಲ್ಲ. ಬ್ಯಾಟಿಂಗ್‌ನಲ್ಲಂತೂ ತೀವ್ರ ನಿರಾಸೆ ಕಂಡಿದ್ದು, ಆರು ಪಂದ್ಯಗಳಲ್ಲಿ ಗಳಿಸಿದ್ದು 32 ರನ್‌ಗಳಷ್ಟೇ (34 ಎಸೆತ).

ಇದರ ಹೊರತಾಗಿಯೂ ಮುಂಬೈ ವಿರುದ್ಧ ಪಂದ್ಯದಲ್ಲಿ ಸಕಾರಾತ್ಮಕ ಅಂಶವೊಂದಿತ್ತು. ವಿರಾಟ್‌ ಕೊಹ್ಲಿ ಬೇಗ ನಿರ್ಗಮಿಸಿದರೂ, ಡುಪ್ಲೆಸಿ, ರಜತ್‌ ಪಾಟೀದಾರ್ ಮತ್ತು ದಿನೇಶ್ ಕಾರ್ತಿಕ್ ಅರ್ಧ ಶತಕಗಳನ್ನು ಹೊಡೆದು ತಂಡದ ಮೊತ್ತ 196ಕ್ಕೆ ತಲುಪಿಸಿದ್ದರು. ಆದರೆ ಬೌಲರ್‌ಗಳು ಎಂದಿನಂತೆ ನಿರಾಸೆ ಮೂಡಿಸಿದರು. ಮುಂಬೈ ಆಟಗಾರರು, ವಿಶೇಷವಾಗಿ ಇಶಾನ್‌ ಮತ್ತು ಸೂರ್ಯಕುಮಾರ್ ಅವರ ಮೇಲೆ ದಂಡೆತ್ತಿಹೋಗಿ 27 ಎಸೆತಗಳಿರುವಂತೆ ತಂಡವನ್ನು ಗುರಿಮುಟ್ಟಿಸಲು ನೆರವಾದರು.

ಮುಂಬೈಯಲ್ಲಿ ಪಂದ್ಯದ ನಂತರ ಪ್ರೆಸೆಂಟೇಷನ್‌ ವೇಳೆ ಡುಪ್ಲಸಿ ಅವರು ‘ಬೌಲಿಂಗ್‌ ನಮ್ಮ ದುರ್ಬಲ ವಿಭಾಗ’ ಎಂದು ಮೊದಲ ಬಾರಿ ಬಹಿರಂಗವಾಗಿ ಒಪ್ಪಿಕೊಂಡರು.

ಆರ್‌ಸಿಬಿಯ ಈ ದೌರ್ಬಲ್ಯ, ಸನ್‌ರೈಸರ್ಸ್‌ಗೆ ವರದಾನವಾಗುವ ಸಾಧ್ಯತೆಯಿದೆ. ಪ್ಯಾಟ್ ಕಮಿನ್ಸ್‌ ಬಳಗದ ಬ್ಯಾಟಿಂಗ್ ವಿಭಾಗ ಪ್ರಬಲವಾಗಿದೆ. ಹೆನ್ರಿಚ್‌ ಕ್ಲಾಸೆನ್‌ (186) ಮತ್ತು ಅಭಿಷೇಕ್‌ ಶರ್ಮಾ (208) ಒಳ್ಳೆಯ ಲಯದಲ್ಲಿದ್ದಾರೆ. ಟ್ರಾವಿಸ್‌ ಹೆಡ್‌, ಏಡನ್ ಮರ್ಕರಂ ಕೂಡ ಬಿರುಸಿನ ಆಟವಾಡಬಲ್ಲವರು. ಪವರ್‌ಪ್ಲೇ ಅವಧಿಯಲ್ಲಿ ಸ್ಫೋಟಕ ಆರಂಭ ನೀಡಬಲ್ಲ ಆಟಗಾರರು ಇವರು.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಹೈದರಾಬಾದ್ ಮೂರು ಗೆದ್ದು, ಎರಡು ಸೋತಿದೆ. ಆದರೆ ಆರ್‌ಸಿಬಿಯಂತೆ ಈ ತಂಡದ ದೌರ್ಬಲ್ಯ ಬೌಲಿಂಗ್ ವಿಭಾಗ. ಅದರ ಪ್ರಮುಖ ಸ್ಪಿನ್ನರ್‌ಗಳಾದ ಶಾಬಾಜ್ ಅಹ್ಮದ್‌, ಮಯಂಕ್ ಮಾರ್ಕಂಡೆ ಓವರ್‌ಗೆ 11ಕ್ಕೂ ಅಧಿಕ ರನ್‌ಗಳನ್ನು ನೀಡುತ್ತಿದ್ದಾರೆ.

ನಾಯಕ ಪ್ಯಾಟ್‌ ಕಮಿನ್ಸ್‌ ತಂಡದ ಪರ ಅತ್ಯಧಿಕ– ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ದುಬಾರಿಯೂ ಆಗಿಲ್ಲ. ಎಡಗೈ ವೇಗಿ ಟಿ.ನಟರಾಜನ್‌ (5 ವಿಕೆಟ್‌, ಇಕಾನಮಿ 8.6) ಕೂಡ ಸ್ವಲ್ಪ ಬಲ ನೀಡಿದ್ದಾರೆ. ಆರ್‌ಸಿಬಿ, ಎದುರಾಳಿಗಳ ಸೀಮಿತ ಬೌಲಿಂಗ್‌ ದಾಳಿಯ ಮುಂದೆ ಎಷ್ಟು ರನ್‌ ಗಳಿಸಲಿದೆ ಎಂಬುದೂ ಮುಖ್ಯವಾಗಲಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT