ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ಕೇವಲ ಆರಂಭವಷ್ಟೇ, ಟೀಮ್ ಇಂಡಿಯಾ ಪರ ಆಡುವುದು ನನ್ನ ಗುರಿ: ಮಯಂಕ್ ಯಾದವ್

Published 3 ಏಪ್ರಿಲ್ 2024, 10:35 IST
Last Updated 3 ಏಪ್ರಿಲ್ 2024, 10:35 IST
ಅಕ್ಷರ ಗಾತ್ರ

ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ವೇಗದ ಬೌಲಿಂಗ್ ಮಾಡಿರುವ ನವತಾರೆ ಮಯಂಕ್ ಯಾದವ್, 'ಇದು ಕೇವಲ ಆರಂಭವಷ್ಟೇ, ಭಾರತ ತಂಡವನ್ನು ಪ್ರತಿನಿಧಿಸುವುದೇ ತಮ್ಮ ಗುರಿ' ಎಂದು ಕನಸನ್ನು ಬಿಚ್ಚಿಟ್ಟಿದ್ದಾರೆ.

'ವೇಗದಲ್ಲಿ ಬೌಲಿಂಗ್ ಮಾಡಲು ಅನೇಕ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದೇನೆ. ಇದರಲ್ಲಿ ಡಯಟ್, ನಿದ್ದೆ, ತರಬೇತಿ, ಐಸ್ ಬಾತ್ ಪ್ರಮುಖವಾಗಿವೆ' ಎಂದು ಅವರು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 21 ವರ್ಷದ ಮಯಂಕ್ ಯಾದವ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಯಂಕ್, ಗಂಟೆಗೆ 156.7 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದರು. ಆ ಮೂಲಕ ಪ್ರಸಕ್ತ ಸಾಲಿನ ಅತಿ ವೇಗದ ಜೊತೆಗೆ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದಲ್ಲಿ ಬೌಲಿಂಗ್ ಮಾಡಿದ ಟಾಪ್ 5ರ ಪಟ್ಟಿಗೂ ಲಗ್ಗೆ ಇಟ್ಟಿದ್ದಾರೆ.

ಮಯಂಕ್ ಯಾದವ್

ಮಯಂಕ್ ಯಾದವ್

(ಪಿಟಿಐ ಚಿತ್ರ)

2011ರಲ್ಲಿ ನ್ಯೂಜಿಲೆಂಡ್‌ನ ಶಾನ್ ಟೈಟ್ ಗಂಟೆಗೆ 157.7 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿರುವುದು ಇದುವರೆಗಿನ ದಾಖಲೆಯಾಗಿದೆ. 2022ರಲ್ಲಿ ನ್ಯೂಜಿಲೆಂಡ್‌ನವರೇ ಆದ ಲಾಕಿ ಫರ್ಗ್ಯೂಸನ್ ಗಂಟೆಗೆ 157.3 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇನ್ನು ಭಾರತೀಯರ ಪೈಕಿ, 2022ರಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 157 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಅಷ್ಟೇ ಅಲ್ಲದೆ ಮಯಂಕ್ ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮೊದಲೆರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇಶಾಂತ್ ನೀಡಿದ ಸಲಹೆ...

ಈ ವೇಳೆಯಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ನೀಡಿದ ಸಲಹೆಯನ್ನು ಮಯಂಕ್ ಯಾದವ್ ನೆನಪಿಸಿಕೊಂಡಿದ್ದಾರೆ. 'ಹೊಸ ಕೌಶಲ್ಯವನ್ನು ಕಲಿಯುವಾಗ ಯಾವುದೇ ಕಾರಣಕ್ಕೂ ವೇಗದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು' ಎಂದು ಸಲಹೆ ಮಾಡಿರುವುದಾಗಿ ಮಯಂಕ್ ತಿಳಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಇಶಾಂತ್ ಹಾಗೂ ಮಯಂಕ್ ದೆಹಲಿ ತಂಡವನ್ನು ಪ್ರತಿನಿಧಿಸುತ್ತಾರೆ. ಮಗದೋರ್ವ ವೇಗಿ ನವದೀಪ್ ಸೈನಿ ಕೂಡ ಇದೇ ಸಲಹೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

'ನಾನು ಪಂದ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸುತ್ತೇನೆ. ವೇಗದಲ್ಲಿ ಬೌಲಿಂಗ್ ಮಾಡುವುದು ನನ್ನ ಇರಾದೆಯಾಗಿದೆ. ಆ ಮೂಲಕ ಸಾಧ್ಯವಾದಷ್ಟು ವಿಕೆಟ್ ಪಡೆದು ತಂಡದ ಗೆಲುವಿಗಾಗಿ ನನ್ನ ಪಾತ್ರವನ್ನು ನಿಭಾಯಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT