ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024: ವೇಗದ ಬೌಲಿಂಗ್‌ನಿಂದ ದಾಖಲೆ ನಿರ್ಮಿಸಿದ ಮಯಂಕ್ ಯಾದವ್

ಪ್ರಸಕ್ತ ಸಾಲಿನ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡದಲ್ಲಿ (LSG) ಆಡುತ್ತಿರುವ ಮಯಂಕ್ ಯಾದವ್
Published 3 ಏಪ್ರಿಲ್ 2024, 6:00 IST
Last Updated 3 ಏಪ್ರಿಲ್ 2024, 6:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡದಲ್ಲಿ (LSG) ಆಡುತ್ತಿರುವ ಮಯಂಕ್ ಯಾದವ್ ಅವರು ಅತ್ಯಂತ ವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ.

ತಮ್ಮ ತಂಡಕ್ಕೆ ಬೌಲಿಂಗ್‌ನಿಂದ ಅವರು ಈಗಾಗಲೇ ಎರಡು ಗೆಲುವನ್ನು ತಂದು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಮಯಂಕ್ ಯಾದವ್, ಗಂಟೆಗೆ ಬರೋಬ್ಬರಿ 156.7 ಕಿ.ಮೀ. ವೇಗದಲ್ಲಿ ಬಾಲ್ ಎಸೆದು ಈ ಸಾರಿಯ ಐಪಿಎಲ್‌ನ ವೇಗದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

2011ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ಆಸ್ಟ್ರೇಲಿಯಾದ ಬೌಲರ್ ಶೌನ್ ಟೈಟ್ (Shaun Tait) ಗಂಟೆಗೆ 157.71 ಕಿ.ಮೀ. ವೇಗದಲ್ಲಿ ಬಾಲ್ ಎಸೆದಿರುವುದು ಇದುವರೆಗಿನ ದಾಖಲೆ.

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ವೇಗದ ಬೌಲಿಂಗ್‌ನಿಂದ ಮಯಂಕ್ ಯಾದವ್ ದೂಳೆಬ್ಬಿಸಿದ್ದರು. 153 ಕಿ.ಮೀ.ಗೂ ಮೀರಿ ವೇಗದ ಎಸೆತಗಳನ್ನು ಪ್ರಯೋಗಿಸಿದ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರಾನ್ ಗ್ರೀನ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಈ ಪಂದ್ಯದಲ್ಲಿ ಲಯಕ್ಕೆ ಮರಳಿದ್ದ ರಜತ್ ಪಾಟೀದಾರ್‌ಗೂ ಮಯಂಕ್ ಅವರೇ ಪೆವಿಲಿಯನ್ ದಾರಿ ತೋರಿಸಿದರು. ನಾಲ್ಕು ಓವರ್‌ಗಳಲ್ಲಿ 14 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದರು.

ಶನಿವಾರ ಪಂಜಾಬ್ ಕಿಂಗ್ಸ್ ಎದುರು LSG ಜಯಿಸಲು ಇದೇ ಮಯಂಕ್ ಕಾರಣರಾಗಿದ್ದರು. ಅಂದು ಗಂಟೆಗೆ 155 ಕಿ.ಮೀ. ವೇಗದ ಎಸೆತ ಪ್ರಯೋಗಿಸಿದ್ದರು. ಪಂಜಾಬ್ ತಂಡದ ಅನುಭವಿ ಬ್ಯಾಟರ್ ಜಾನಿ ಬೆಸ್ಟೊ ಸೇರಿದಂತೆ ಮೂರು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು.

ದೆಹಲಿ ಮೂಲದ 22 ವರ್ಷದ ಮಯಂಕ್ ಯಾದವ್ 2022ರಿಂದ LSG ಪರ ಆಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ 2023ರ ಐಪಿಎಲ್‌ನಲ್ಲಿ ಅವರು ಆಡಿರಲಿಲ್ಲ. ಟೀಮ್ ಇಂಡಿಯಾದಲ್ಲಿ ಆದಷ್ಟು ಬೇಗ ಆಡಬೇಕು ಎಂಬ ಗುರಿಯನ್ನು ಅವರು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT