ಗುರುವಾರ , ಜೂನ್ 24, 2021
27 °C

ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ: ಯುವಿಗೆ ಸಿಗಲಿದೆಯೇ ‘ಬೆಲೆ’

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಭಾರತದ ಅನುಭವಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ಗೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಹರಾಜಿನಲ್ಲಿ ಮೂಲ‘ಬೆಲೆ’ ಸಿಗಲಿದೆಯೇ? –ಹೀಗೊಂದು ಪ್ರಶ್ನೆ ಕ್ರಿಕೆಟ್‌ ಪ್ರಿಯರನ್ನು ಕಾಡುತ್ತಿದೆ.

12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ಜೈಪುರದಲ್ಲಿ ನಡೆಯಲಿದ್ದು ಒಟ್ಟು 346 ಮಂದಿ ಕಣದಲ್ಲಿದ್ದಾರೆ.

ಈ ಹಿಂದೆ ನಡೆದಿದ್ದ ಹರಾಜಿನಲ್ಲಿ ₹ 16 ಕೋಟಿಗೆ ಆರ್‌ಸಿಬಿ ಪಾಲಾಗಿದ್ದ ಯುವರಾಜ್‌ ಅವರನ್ನು ಹೋದ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಮೂಲ ಬೆಲೆ (₹ 2 ಕೋಟಿ) ನೀಡಿ ತನ್ನತ್ತ ಸೆಳೆದುಕೊಂಡಿತ್ತು.

11ನೇ ಆವೃತ್ತಿಯಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದ ಆಲ್‌ರೌಂಡರ್‌ ಯುವಿ, ಕೇವಲ 65ರನ್‌ಗಳನ್ನು ಗಳಿಸಿದ್ದರು. ಹೀಗಾಗಿ ಕಿಂಗ್ಸ್‌ ಇಲೆವನ್‌ ಈ ಬಾರಿ ಅವರನ್ನು ತಂಡದಿಂದ ಕೈಬಿಟ್ಟಿದೆ. 37 ವರ್ಷದ ಆಟಗಾರ ಯುವಿಗೆ ಈ ಸಲ ₹ 1 ಕೋಟಿ ಮೂಲ ಬೆಲೆ ನಿಗದಿ ಮಾಡಲಾಗಿದೆ. ಇಷ್ಟು ಮೊತ್ತ ನೀಡಿ ಅವರನ್ನು ಕೊಂಡುಕೊಳ್ಳಲು ಫ್ರಾಂಚೈಸ್‌ಗಳು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ. ವೃದ್ಧಿಮಾನ್‌ ಸಹಾ, ಮೊಹಮ್ಮದ್‌ ಶಮಿ ಮತ್ತು ಅಕ್ಷರ್‌ ಪಟೇಲ್‌ ಅವರೂ ಇಷ್ಟೇ ಮೂಲಬೆಲೆ ಹೊಂದಿದ್ದಾರೆ.

ಬ್ರೆಂಡನ್‌ ಮೆಕ್ಲಮ್‌, ಕ್ರಿಸ್‌ ವೋಕ್ಸ್‌, ಲಸಿತ್‌ ಮಾಲಿಂಗ, ಶಾನ್‌ ಮಾರ್ಷ್‌, ಸ್ಯಾಮ್‌ ಕರನ್‌, ಕಾಲಿನ್‌ ಇಂಗ್ರಾಮ್‌, ಕೋರಿ ಆ್ಯಂಡರ್ಸನ್‌, ಏಂಜೆಲೊ ಮ್ಯಾಥ್ಯೂಸ್‌ ಮತ್ತು ಡಿ ಆರ್ಸಿ ಶಾರ್ಟ್‌ ಅವರು ₹ 2 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದು ಇವರನ್ನು ಸೆಳೆದುಕೊಳ್ಳಲು ಫ್ರಾಂಚೈಸ್‌ಗಳು ಪೈಪೋಟಿಗಿಳಿಯುವ ಸಾಧ್ಯತೆ ಇದೆ.

ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮತ್ತು ಇಶಾಂತ್‌ ಶರ್ಮಾ ಅವರು ಫ್ರಾಂಚೈಸ್‌ಗಳ ಗಮನ ಸೆಳೆಯುತ್ತಾರೆಯೇ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ.

ಫ್ರಾಂಚೈಸ್‌ಗಳ ಬಳಿ ಇರುವ ಮೊತ್ತ
ತಂಡ: ಮೊತ್ತ (₹ ಕೋಟಿಗಳಲ್ಲಿ)
ಕಿಂಗ್ಸ್‌ ಇಲೆವನ್‌ ಪಂಜಾಬ್‌; 36.20
ಡೆಲ್ಲಿ ಕ್ಯಾಪಿಟಲ್ಸ್‌; 25.50
ರಾಜಸ್ಥಾನ ರಾಯಲ್ಸ್‌; 20.95
ಆರ್‌ಸಿಬಿ; 18.15
ಕೋಲ್ಕತ್ತ ನೈಟ್‌ರೈಡರ್ಸ್‌; 15.20
ಮುಂಬೈ ಇಂಡಿಯನ್ಸ್‌; 11.15
ಸನ್‌ರೈಸರ್ಸ್‌ ಹೈದರಾಬಾದ್‌; 9.70
ಚೆನ್ನೈ ಸೂಪರ್‌ ಕಿಂಗ್ಸ್‌; 8.40

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು