ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | RCB vs CSK: ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಸಂಘಟಿತ ಪ್ರದರ್ಶನ

Last Updated 10 ಅಕ್ಟೋಬರ್ 2020, 18:35 IST
ಅಕ್ಷರ ಗಾತ್ರ

ದುಬೈ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು‌ ನೀಡಿದ ಸವಾಲಿನ ಗುರಿ ಎದುರು ಸಾಮರ್ಥ್ಯಕ್ಕೆ ತಕ್ಕ ಆಟ ಆಡುವಲ್ಲಿ ವಿಫಲವಾದ ಚೆನ್ನೈ ಸೂಪರ್‌ ಕಿಂಗ್ಸ್‌ 37 ರನ್ ಅಂತರದ ಸೋಲೊಪ್ಪಿಕೊಂಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ನಾಯಕ ವಿರಾಟ್‌ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿತ್ತು.

ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಫಿಂಚ್‌ ಕೇವಲ (2) ರನ್‌ ಗಳಿಸಿ ಔಟಾದರು. ಎರಡನೇ ವಿಕೆಟ್‌ಗೆ ದೇವದತ್ತ ಪಡಿಕ್ಕಲ್‌ (33) ಜೊತೆಯಾದ ಕೊಹ್ಲಿ 53 ರನ್‌ಗಳ ಜೊತೆಯಾಟ ಆಡಿದರು. ಆದರೆ, 11ನೇ ಓವರ್‌ನಲ್ಲಿ ಪಡಿಕ್ಕಲ್‌ ಮತ್ತು ಎಬಿ ಡಿ ವಿಲಿಯರ್ಸ್‌ (0) ಔಟಾದರು. ಬಳಿಕ ಬಂದ ವಾಷಿಂಗ್ಟನ್‌ ಸುಂದರ್‌ (10) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಆರ್‌ಸಿಬಿ ಇನಿಂಗ್ಸ್‌ಗೆ ಕೊಹ್ಲಿ–ದುಬೆ ಬಲ
ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ದಿಟ್ಟ ಆಟವಾಡಿದ ಕೊಹ್ಲಿ, ಶಿವಂ ದುಬೆ ಜೊತೆ ಸೇರಿ ಇನಿಂಗ್ಸ್‌ಗೆ ಬಲ ತುಂಬಿದರು. ಈ ಜೋಡಿ 5ನೇ ವಿಕೆಟ್‌ ಜೊತೆಯಾಟದಲ್ಲಿ ಕೇವಲ 36 ಎಸೆತಗಳಲ್ಲಿ 76 ರನ್‌ ಕೂಡಿಸಿತು.

52ಎಸೆತಗಳನ್ನು ಎದುರಿಸಿದ ವಿರಾಟ್‌ 4 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 90 ರನ್ ಬಾರಿಸಿದರು. ದುಬೆ 22 ರನ್ ಗಳಿಸಿದರು.

ಒಂದು ಹಂತದಲ್ಲಿ ಆರ್‌ಸಿಬಿ 16 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು103 ರನ್‌ ಗಳಿಸಿತ್ತು. ಈ ಹಂತದಲ್ಲಿ ಕೊಹ್ಲಿ 35 ಎಸೆತಗಳಲ್ಲಿ 44 ರನ್‌ ಮತ್ತು ದುಬೆ 6 ಎಸೆತಗಳಲ್ಲಿ 6 ರನ್‌ ಗಳಿಸಿ ಆಡುತ್ತಿದ್ದರು. ಈ ವೇಳೆ ಬಿರುಸಿನ ಆಟ ಶುರುಮಾಡಿದ ಕೊಹ್ಲಿ ಮತ್ತು ದುಬೆ ರನ್‌ ಗತಿ ಏರಿಸಿದರು. ಕೊಹ್ಲಿ ತಾವೆದುರಿಸಿದ ಕೊನೆಯ 17 ಎಸೆತಗಳಲ್ಲಿ 46 ರನ್‌ ಗಳಿಸಿದರು. ದುಬೆ 8 ಎಸೆತಗಳಲ್ಲಿ 16 ರನ್‌ ಗಳಿಸಿದರು.ಹೀಗಾಗಿ ಕೊನೆಯ 4 ಓವರ್‌ಗಳಲ್ಲಿ 66 ರನ್‌ ಹರಿದು ಬಂದಿತು.

ಈ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿದ ಚೆನ್ನೈ ಬ್ಯಾಟ್ಸ್‌ಮನ್‌ಗಳು ಯೋಜನೆಯಂತೆ ಬ್ಯಾಟಿಂಗ್‌ ನಡೆಸಲು ಸಾಧ್ಯವಾಗಲಿಲ್ಲ. ಸಂಘಟಿತ ಬೌಲಿಂಗ್‌ ಪ್ರದರ್ಶನ ತೋರಿದ ಬೆಂಗಳೂರು ಆಟಗಾರರು ಚೆನ್ನೈನ ಆರಂಭಿಕರಿಬ್ಬರನ್ನು ತಂಡದ ಮೊತ್ತಕೇವಲ 25 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು.

ದಿಢೀರ್‌ ಕುಸಿತ
ಅಂಬಟಿ ರಾಯುಡು ಮತ್ತು ಜಗದೀಶನ್‌ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 64 ರನ್ ಸೇರಿಸಿ ಹೋರಾಟ ನಡೆಸಿದರಾದರೂ ಅಗತ್ಯ ಸರಾಸರಿಯಲ್ಲಿ ರನ್‌ ಗಳಿಸಲಿಲ್ಲ. ಹೀಗಾಗಿ, 33 ರನ್‌ ಗಳಿಸಿ ಆಡುತ್ತಿದ್ದ ಜಗದೀಶನ್ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ ಆದರು. 15ನೇ ಓವರ್‌ನಲ್ಲಿ ಜಗದೀಶನ್‌ ಔಟಾಗುದರೊಂದಿಗೆಚೆನ್ನೈ ತಂಡದ ಕುಸಿತ ಆರಂಭವಾಯಿತು.

16ನೇ ಓವರ್‌ನಲ್ಲಿ ಎಂಎಸ್‌ಧೊನಿ ವಿಕೆಟ್‌ ಒಪ್ಪಿಸಿದರು.17ನೇ ಓವರ್‌ನಲ್ಲಿ ಸ್ಯಾಮ್ ಕರನ್, 18ನೇ ಓವರ್‌ನಲ್ಲಿ‌ ಅಂಬಟಿ ರಾಯುಡು ಹಾಗೂ 19ನೇ ಓವರ್‌ನಲ್ಲಿರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಂತಿಮವಾಗಿ ಧೋನಿ ಪಡೆ ನಿಗದಿತ 20 ಓವರ್‌ಗಳಲ್ಲಿ 132 ರನ್‌ ಗಳಿಸಲಷ್ಟೇ ಶಕ್ತವಾಗಿ 37 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಆರ್‌ಸಿಬಿ ಪರ ಕ್ರಿಸ್‌ ಮೋರಿಸ್‌ 3, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಪಡೆದರೆ, ಯಜವೇಂದ್ರ ಚಾಹಲ್‌ ಹಾಗೂ ಇಸುರು ಉದಾನ ಒಂದೊಂದು ವಿಕೆಟ್‌ ಹಂಚಿಕೊಂಡರು.

ಈ ಜಯದೊಂದಿಗೆ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಆರ್‌ಸಿಬಿ 8 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಚೆನ್ನೈ ತಂಡ ತನ್ನ 7ನೇ ಪಂದ್ಯದಲ್ಲಿ 5ನೇ ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT