ಮಂಗಳವಾರ, ಅಕ್ಟೋಬರ್ 27, 2020
20 °C

IPL-2020 | KXIP vs SRH: ರೈಸರ್ಸ್‌ಗೆ ಮೂರನೇ ಜಯ; ಕಿಂಗ್ಸ್‌ಗೆ 5ನೇ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ 202ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಕೇವಲ 132 ರನ್‌ಗಳಿಗೆ ಆಲೌಟ್‌ ಆಯಿತು. ಇದರೊಂದಿಗೆ ಕಿಂಗ್ಸ್‌ ಈ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ 5ನೇ ಸೋಲು ಅನುಭವಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್,‌ ನಾಯಕ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್ಸ್ಟ್ರೋವ್‌ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತ್ತು.

ವಾರ್ನರ್‌ ಹಾಗೂ ಬೈರ್ಸ್ಟ್ರೋವ್‌ ಜೋಡಿ ಕೇವಲ 91 ಎಸೆತಗಳಲ್ಲಿ ಬರೋಬ್ಬರಿ 160 ರನ್‌ ಕಲೆಹಾಕಿತ್ತು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಜಾನಿ ಕೇವಲ 55 ಎಸೆತಗಳಲ್ಲಿ 97 ರನ್‌ ಗಳಿಸಿದರೆ, ಕಿಂಗ್ಸ್‌ ವಿರುದ್ಧ ಆಡಿದ್ದ ಕಳೆದ 8 ಇನಿಂಗ್ಸ್‌ಗಳಲ್ಲಿಯೂ 50 ಪ್ಲಸ್‌ ರನ್‌ ಗಳಿಸಿದ್ದ ವಾರ್ನರ್‌, ಈ ಬಾರಿಯೂ ಅರ್ಧಶತಕ ಸಿಡಿಸಿದರು.

ಒಂದು ಹಂತದಲ್ಲಿ 15 ಓವರ್‌ಗಳು ಮುಕ್ತಾಯವಾದಾಗ ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 160 ರನ್‌ ಗಳಿಸಿತ್ತು. ಹೀಗಾಗಿ ಈ ತಂಡದ ಮೊತ್ತ 220ರ ಗಡಿದಾಟುವ ಸಾಧ್ಯತೆ ಇತ್ತು. ಆದರೆ, ವಾರ್ನರ್‌ ಮತ್ತು ಜಾನಿ ಕ್ರಮವಾಗಿ 15.1 ಮತ್ತು 15.4ನೇ ಎಸೆತಗಳಲ್ಲಿ ಔಟಾದರು. ನಂತರ ಅಬ್ದುಲ್‌ ಸಮದ್‌ (8), ಮನೀಷ್‌ ಪಾಂಡೆ (1), ಪ್ರಿಯಂ ಗರ್ಗ್‌ (0) ಮತ್ತು ಅಭಿಷೇಕ್‌ ಶರ್ಮಾ (12) ವೈಫಲ್ಯ ಅನುಭವಿಸಿದರು. ಹೀಗಾಗಿ ರನ್‌ ಗಳಿಕೆ ವೇಗಕ್ಕೆ ಕಡಿವಾಣ ಬಿದ್ದಿತು.

IPL-2020 LIVE: ರೈಸರ್ಸ್‌ಗೆ ‌69 ರನ್ ಜಯ

ಕೊನೆಯಲ್ಲಿ ಬಿರುಸಾಗಿ ಬ್ಯಾಟ್‌ ಬೀಸಿದ ಅನುಭವಿ ಕೇನ್‌ ವಿಲಿಯಮ್ಸನ್‌ 10 ಎಸೆತಗಳಲ್ಲಿ 20 ರನ್‌ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಈ ಗುರಿ ಬೆನ್ನತ್ತಿದ ಕಿಂಗ್ಸ್ ತಂಡಕ್ಕೆ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು ಮುಳುವಾಯಿತು. ತಂಡದ ಮೊತ್ತ 11 ರನ್‌ ಆಗಿದ್ದಾಗ ಮಯಂಕ್‌ ಅಗರವಾಲ್ (9)‌ ರನೌಟ್‌ ಆದರು. ಪ್ರಬ್ಸಿಮ್ರನ್‌ ಸಿಂಗ್ (11) ಮತ್ತು ನಾಯಕ ಕೆಎಲ್‌ ರಾಹುಲ್‌ (11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಪೂರನ್‌ ವೇಗದ ಅರ್ಧಶತಕ
ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ದಿಟ್ಟ ಹೋರಾಟ ನೀಡಿದ ನಿಕೋಲಸ್‌ ಪೂರನ್‌ ಈ ಆವೃತ್ತಿಯ ವೇಗದ ಅರ್ಧಶತಕ ದಾಖಲಿಸಿದರು.

ಕೇವಲ 17ನೇ ಎಸೆತದಲ್ಲಿ 50 ರನ್‌ ಗಳಿಸಿಕೊಂಡ ಅವರು 37 ಎಸೆತಗಳನ್ನು ಎದುರಿಸಿ 7 ಸಿಕ್ಸರ್‌ ಮತ್ತು 5 ಬೌಂಡರಿ ಸಹಿತ 77 ರನ್‌ ಚಚ್ಚಿದರು. ಹೀಗಾಗಿ ಕಿಂಗ್ಸ್‌ ಪಾಳಯದಲ್ಲಿ ಜಯದ ಆಸೆ ಮೂಡಿತ್ತು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಬೆಂಬಲ ಸಿಗದ ಕಾರಣ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಪೂರನ್‌ಗೆ ಸಾಧ್ಯವಾಗಲಿಲ್ಲ.

ಗ್ಲೇನ್‌ ಮ್ಯಾಕ್ಸ್‌ವೆಲ್‌ (7), ಮನ್‌ದೀಪ್‌ ಸಿಂಗ್‌ (6), ಮುಜೀಬ್‌ ಉರ್‌ ರಹಮಾನ್‌ (1) ರನ್ ಗಳಿಸಿ ಔಟಾದರೆ, ಶೇಲ್ಡನ್‌ ಕಾರ್ಟ್ರೆಲ್‌, ಮೊಹಮ್ಮದ್‌ ಶಮಿ ಮತ್ತು ಅರ್ಶದೀಪ್ ಸಿಂಗ್‌ ಶೂನ್ಯಕ್ಕೆ ಮರಳಿದರು. ರವಿ ಬಿಷ್ಣೋಯಿ (6) ಔಟಾಗದೆ ಉಳಿದರು. ಅಂತಿಮವಾಗಿ ಕಿಂಗ್ಸ್‌ 16.5ನೇ ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 132 ರನ್‌ ಗಳಿಸಿ ಆಲೌಟಾಯಿತು.

ಇದರೊಂದಿಗೆ 69 ರನ್ ಅಂತರದ ಗೆಲುವು ಸಾಧಿಸಿದ ಸನ್‌ರೈಸರ್ಸ್,‌ ಮೂರು ಜಯದೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮೊದಲೆರಡು ಸ್ಥಾನಗಳಲ್ಲಿವೆ. ಕೋಲ್ಕತ್ತ ನೈಟ್‌ರೈಡರ್ಸ್‌ ನಾಲ್ಕರಲ್ಲಿದೆ.

36 ಓವರ್‌ ಬಳಿಕ ವಿಕೆಟ್
ರೈಸರ್ಸ್ ಇನಿಂಗ್ಸ್‌ ವೇಳೆ 15.1ನೇ ಓವರ್‌ನಲ್ಲಿ ವಾರ್ನರ್‌ ಅವರನ್ನು ಔಟ್‌ ಮಾಡುವುದರೊಂದಿಗೆ ಕಿಂಗ್ಸ್‌ ತಂಡ ಬರೋಬ್ಬರಿ 36 ಓವರ್‌ಗಳ ಬಳಿಕ ಮೊದಲ ವಿಕೆಟ್‌ ಪಡೆದು ಸಮಾಧಾನ ಪಟ್ಟುಕೊಂಡಿತು.

ಕಿಂಗ್ಸ್‌ ಬೌಲರ್‌ಗಳು ಅಕ್ಟೋಬರ್‌ 1 ರಂದು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 16.1 ನೇ ಓವರ್‌ನಲ್ಲಿ ಪಡೆದದ್ದೇ ಕೊನೆಯ ವಿಕೆಟ್‌. ಅಲ್ಲಿಂದಾಚೆಗೆ ಬರೋಬ್ಬರಿ 36.4 ಓವರ್‌ ಎಸೆದಿದ್ದರೂ ವಿಕೆಟ್‌ ಸಿಕ್ಕಿರಲಿಲ್ಲ. ಅಕ್ಟೋಬರ್‌ 4 ರಂದು ಕಿಂಗ್ಸ್‌ ಪಡೆ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕಿಂಗ್ಸ್‌ 179 ರನ್‌ ಗುರಿ ನೀಡಿತ್ತು. ಈ ಗುರಿಯನ್ನು ಚೆನ್ನೈ ತಂಡ 17.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಮುಟ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು