ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಆಟಗಾರರೇ ಸ್ಪರ್ಧಿಗಳು, ಅಭಿಮಾನಿಗಳು!

ಮೆಕ್ಸಿಕನ್‌ ಅಲೆಯಿಲ್ಲದ ಐಪಿಎಲ್‌...
Last Updated 25 ಸೆಪ್ಟೆಂಬರ್ 2020, 6:17 IST
ಅಕ್ಷರ ಗಾತ್ರ
ADVERTISEMENT
""

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಮೋಹಕ ಕ್ರೀಡಾಂಗಣಗಳಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣವೂ ಒಂದು. ಈ ಅಂಗಳ ಎಷ್ಟು ಚೆಂದವೆಂದರೆ ರಾತ್ರಿ ವೇಳೆ ಪಂದ್ಯಗಳು ನಡೆದರೆ ಆಟಗಾರರ ಮತ್ತು ಸುತ್ತಮುತ್ತಲಿನ ವಸ್ತುಗಳ ನೆರಳು ಕೂಡ ನೆಲದ ಮೇಲೆ ಕಾಣಿಸುವುದಿಲ್ಲ. ಇದಕ್ಕಾಗಿಯೇ ‘ರಿಂಗ್‌ ಆಫ್‌ ಫೈರ್‌’ ಹೆಸರಿನ 350 ವಿಶೇಷ ಫ್ಲಡ್‌ಲೈಟ್‌ಗಳನ್ನು ಬೆಳಗಿಸಲಾಗುತ್ತದೆ.

ಪ್ರೇಕ್ಷಕ ಸ್ನೇಹಿ ಇಂಥ ಸುಂದರ ಕ್ರೀಡಾಂಗಣದಲ್ಲಿ ಗುರುವಾರ (ಸೆ. 24) ಐಪಿಎಲ್‌ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು ಪೈಪೋಟಿ ನಡೆಸಿದವು. ಪಂಜಾಬ್‌ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆ.ಎಲ್‌. ರಾಹುಲ್‌ ಅಮೋಘವಾಗಿ ಶತಕ ದಾಖಲಿಸಿ ಸಂಭ್ರಮಿಸಿದರು. ಅವರೊಂದಿಗೆ ಖುಷಿ ಪಡಲು ಮತ್ತು ‘ಮೆಕ್ಸಿಕನ್‌ ಅಲೆ’ ಎಬ್ಬಿಸಲು ಗ್ಯಾಲರಿಗಳಲ್ಲಿ ಪ್ರೇಕ್ಷಕರೇ ಇರಲಿಲ್ಲ! ಡೌಗ್‌ ಔಟ್‌ನಲ್ಲಿದ್ದ ತಂಡದ ಆಟಗಾರರೇ ಚಪ್ಪಾಳೆ ಹೊಡೆದು, ಖುಷಿ ಪಟ್ಟರು.

ಕೋವಿಡ್‌ ಹರಡುವಿಕೆ ತಡೆಗಟ್ಟುವ ಭಾಗವಾಗಿ ಈ ಬಾರಿಯ ಐಪಿಎಲ್‌ ಟೂರ್ನಿಯನ್ನು ಯುಎಇನಲ್ಲಿ ನಡೆಸಲಾಗುತ್ತಿದೆ. ಪಂದ್ಯಗಳ ಉನ್ಮಾದ ಹೆಚ್ಚಿಸುವ ಚಿಯರ್‌ ಗರ್ಲ್‌ಗಳಿಗೆ ಹಾಗೂ ಕ್ರಿಕೆಟ್‌ ಪ್ರೇಮಿಗಳಿಗೆ ಮೈದಾನದೊಳಗೆ ಪ್ರವೇಶ ನೀಡಿಲ್ಲ. ಐಪಿಎಲ್‌ ಎಂದರೆ ಅಲ್ಲಿ ಪ್ರೇಕ್ಷಕರ ಸಂಭ್ರಮ, ಕುಣಿತವಿರುತ್ತದೆ. ತಮ್ಮ ನೆಚ್ಚಿನ ತಂಡದ ಆಟಗಾರರ ಅಥವಾ ಪೋಷಾಕಿನ ಬಣ್ಣ ಬಳಿದುಕೊಂಡು ಖುಷಿ ಪಡುವುದು, ಪಂದ್ಯದ ಮೂರು ತಾಸು ಜಗತ್ತನ್ನೇ ಮರೆತು ಕುಣಿದು, ಕುಪ್ಪಳಿಸುವುದು ಚುಟುಕು ಕ್ರಿಕೆಟ್‌ನ ರೋಚಕತೆ ಹೆಚ್ಚಿಸುತ್ತಿತ್ತು. ಕೋವಿಡ್ ಕಾರಣಕ್ಕೆ ಈ ಸಲ ಯಾವ ಸಡಗರವೂ ಅಲ್ಲಿಲ್ಲ.

ಪ್ರೇಕ್ಷಕರ ಬೆಂಬಲವಿಲ್ಲದ, ಅಭಿಮಾನಿಗಳ ಚಪ್ಪಾಳೆಯಿಲ್ಲದ ಐಪಿಎಲ್‌ ಪಂದ್ಯಗಳು ನೀರಸ ಎನಿಸುತ್ತಿವೆಯಾದರೂ, ಟಿವಿಯಲ್ಲಿ ನೋಡುಗರಿಗೆ ಮಾತ್ರ ಖುಷಿ ಕೊಡುತ್ತಿವೆ. ಈ ಪಂದ್ಯಗಳನ್ನು ನೋಡುತ್ತಿದ್ದರೆ ಭಾರತದ ಪ್ರತಿಷ್ಠಿತ ದೇಶಿ ಟೂರ್ನಿಗಳಾದ ರಣಜಿ, ದೇವಧರ್‌, ಇರಾನಿ, ವಿಜಯ ಹಜಾರೆ ಟೂರ್ನಿಗಳು ನೆನಪಿಗೆ ಬರುತ್ತಿವೆ.

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಮತ್ತು ಐಪಿಎಲ್‌ ಅವಕಾಶದ ಹೆಬ್ಬಾಗಿಲು ತಟ್ಟಲು ದೇಶಿ ಟೂರ್ನಿಗಳು ಬಹುಮುಖ್ಯವಾಗಿವೆ. ರಣಜಿ ಟೂರ್ನಿಗೆ ತಂಡದಲ್ಲಿ ಸ್ಥಾನ ಗಳಿಸಲು ತೀವ್ರ ಪೈಪೋಟಿಯೂ ಇದೆ. ಆದರೆ, ಈ ಪಂದ್ಯಗಳನ್ನು ನೋಡಲು ಬರುವವರು ಯಾರು?

ರಣಜಿ ನೆನಪುಗಳು: ರಣಜಿ ಟೂರ್ನಿಯನ್ನು ಜನಸ್ನೇಹಿ ಮಾಡಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ದಶಕದಿಂದಲೂ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ದೇಶಿ ಟೂರ್ನಿಗಳ ಪಂದ್ಯಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕೆಂದು ಉಚಿತವಾಗಿ ಪ್ರವೇಶವೂ ನೀಡುತ್ತಿದೆ. ಅಭಿಮಾನಿಗಳು ಮಾತ್ರ ಮೈದಾನದತ್ತ ಸುಳಿಯುವುದೇ ಇಲ್ಲ. ದೇಶದಾದ್ಯಂತ ಇದೇ ಪರಿಸ್ಥಿತಿ.

ಭಾರತದ ಕ್ರಿಕೆಟ್‌ ರಾಜಧಾನಿ ಮುಂಬೈ, ದೆಹಲಿ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್‌, ಪುಣೆ ಹೀಗೆ ದೊಡ್ಡ ನಗರಗಳಲ್ಲಿ ರಣಜಿ ಪಂದ್ಯಗಳನ್ನು ನಡೆಸಿದರೆ ಬೆರಳಣಿಕೆ ಸಂಖ್ಯೆಯಷ್ಟೇ ಜನ ಇರುತ್ತಾರೆ. ಪಂದ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದರೆ ಅದು ಕ್ರಿಕೆಟಿಗರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅವರಲ್ಲಿ ಆಡುವ ಉತ್ಸಾಹವೂ ಹೆಚ್ಚುತ್ತದೆ.

ಹೇಗಾದರೂ ಮಾಡಿ ರಣಜಿಯಂಥ ಟೂರ್ನಿಗೆ ಕ್ರಿಕೆಟ್‌ ಪ್ರೇಮಿಗಳನ್ನು ಸೆಳೆಯಲು ಬಿಸಿಸಿಐ ಕಳೆದ ಐದಾರು ವರ್ಷಗಳಲ್ಲಿ ಹೊಸ ಪ್ರಯೋಗ ಮಾಡಿದೆ. ಪಂಜಾಬ್‌ನ ಪಟಿಯಾಲ, ವಿಜಯನಗರಂ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಆಲೂರು ಹೀಗೆ ದ್ವಿತೀಯ ದರ್ಜೆಯ ಕ್ರೀಡಾಂಗಣಗಳತ್ತ ಮುಖಮಾಡಿತ್ತು. ಸಣ್ಣ ಊರುಗಳಲ್ಲಿ ಪಂದ್ಯಗಳನ್ನು ನಡೆಸಿದ ಒಂದೆರೆಡು ವರ್ಷಗಳ ಕಾಲ ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಜನ ಮೈದಾನದತ್ತ ಬಂದರು. ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸಣ್ಣ ಊರುಗಳಲ್ಲಿ ಪಂದ್ಯಗಳನ್ನು ನಡೆಸಿದರೂ ಜನ ಬರುತ್ತಿಲ್ಲ. ಈಗ ನಡೆಯುತ್ತಿರುವ ಐಪಿಎಲ್‌ ಟೂರ್ನಿಯ ಪಂದ್ಯಗಳನ್ನು ನೋಡಿದಾಗ ರಣಜಿ ಪಂದ್ಯದ ವೇಳೆಯ ಇರುತ್ತಿದ್ದ ಖಾಲಿ, ಖಾಲಿ ಮೈದಾನಗಳು ನೆನಪಾದವು.

ಟಿಕೆಟ್‌ ಕನಸು: ಕೋವಿಡ್‌ ನಡುವೆಯೂ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆದು ಪ್ರೇಕ್ಷಕರಿಗೆ ಅವಕಾಶ ಕೊಟ್ಟಿದ್ದರೆ ಎಲ್ಲ ಮೈದಾನಗಳು ಭರ್ತಿಯಾಗಿರುತ್ತಿದ್ದವು. ನಮಗೆ ಕೋವಿಡ್‌ ಭೀತಿಗಿಂತಲೂ ಕ್ರಿಕೆಟ್‌ ಮೇಲಿನ ಅಭಿಮಾನವೇ ಹೆಚ್ಚು. ಏಕೆಂದರೆ ನಮ್ಮಲ್ಲಿ ಕ್ರಿಕೆಟ್‌ ಅನ್ನು ಧರ್ಮವೆಂದು ಪೂಜಿಸುತ್ತಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳು ನಡೆದಾಗ ಟಿಕೆಟ್‌ಗಾಗಿ ರಾತ್ರಿಯಿಂದಲೇ ಸರತಿಯಲ್ಲಿ ಕಾದು ಅಲ್ಲೇ ಮಲಗಿ, ಪೊಲೀಸರ ಬೆತ್ತದ ರುಚಿಯನ್ನೂ ಅನುಭವಿಸುವ ಕ್ರಿಕೆಟ್‌ ಪ್ರೇಮಿಗಳು ಇದ್ದಾರೆ. ಈ ಪಂದ್ಯಕ್ಕಾಗಿಯಾದರೂ ಟಿಕೆಟ್ ಸಿಗುವುದೇ ಎನ್ನುವ ಕನಸು ಕಾಣುತ್ತ ಒಂದೂ ಪಂದ್ಯವನ್ನು ನೋಡಲಾಗದೆ ಟಿಕೆಟ್‌ಗಾಗಿ ತಿರುಕನ ಕನಸು ಕಾಣುವ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಪಂದ್ಯಗಳು ಆಟಗಾರರಿಗೂ ಸವಾಲಿನದ್ದಾಗಿದೆ. ಏಕೆಂದರೆ ಕ್ರಿಕೆಟ್ ಮತ್ತು ಪ್ರೇಕ್ಷಕರು ಒಂದೇ ನಾಣ್ಯದ ಎರಡು ಮುಖಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT