ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ಗೆ ಐಪಿಎಲ್‌ ‘ಕಸ್ಟರ್‌ ಕಾರ್‌ವಾನ್‘ ಸಾಧ್ಯತೆ: ಐಸಿಸಿ

Last Updated 22 ಏಪ್ರಿಲ್ 2021, 15:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಆಯೋಜನೆಗೆ ಅನುಸರಿಸಲಾಗುತ್ತಿರುವ ಅವಳಿನಗರ ‘ಕ್ಲಸ್ಟರ್ ಕಾರ್‌ವಾನ್‘ ಮಾದರಿಯು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಗಮನ ಸೆಳೆದಿದೆ.

ಇದೆ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಪದ್ಧತಿಯನ್ನು ಜಾರಿಗೊಳಿಸುವತ್ತ ಒಲವು ತೋರಿಸಿದೆ.

ಐಸಿಸಿಯ ಬಯೋ ಸುರಕ್ಷತಾ ವಿಭಾಗದ ಮುಖ್ಯಸ್ಥ ಡೇವ್ ಮಸ್ಕರ್ ನೇತೃತ್ವದ ನಿಯೋಗವು ಇದೇ 26ರಂದು ಭಾರತಕ್ಕೆ ಭೇಟಿ ನೀಡಲಿದೆ. ಈ ಕುರಿತು ಅಧ್ಯಯನ ನಡೆಸಲಿದೆ.

ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆಯೇ ನಡೆಯುತ್ತಿರುವ ಐಪಿಎಲ್‌ನ ವೇಳಾಪಟ್ಟಿಯನ್ನು ವಿಭಿನ್ನವಾಗಿ ರಚಿಸಲಾಗಿದೆ. ಮುಂಬೈ, ಚೆನ್ನೈ, ಬೆಂಗಳೂರು, ದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತ ನಗರಗಳಲ್ಲಿ ಪಂದ್ಯಗಳ ಆಯೋಜನೆಗೆ ಸಿದ್ಧತೆ ಮಾಡಲಾಗಿದೆ. ಮೊದಲ ಹಂತದಲ್ಲಿ ಚೆನ್ನೈ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆಯುತ್ತಿವೆ. ಈ ರೀತಿ ಎರಡು ನಗರಗಳಲ್ಲಿ ಪಂದ್ಯಗಳ ಆಯೋಜನೆ ಮಾಡುತ್ತಿರುವುದನ್ನು ಕ್ಲಸ್ಟರ್‌ ಕಾರ್‌ವಾನ್ ಎಂದು ಕರೆಯಲಾಗಿದೆ.

ಇದರಿಂದಾಗಿ ಆಟಗಾರರ ಪ್ರಯಾಣ, ವಸತಿ, ಅಭ್ಯಾಸ ಮತ್ತು ಪಂದ್ಯಗಳ ಆಯೋಜನೆಯನ್ನು ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ ಎಂದು ಮಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳ ಆಯೋಜನೆಗಾಗಿ ಒಂಬತ್ತು ನಗರಗಳನ್ನು ಬಿಸಿಸಿಐ ಗುರುತಿಸಿದೆ. ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 16 ತಂಡಗಳು ಸ್ಪರ್ಧಿಸಲಿವೆ.

‘ಐಪಿಎಲ್‌ಗಾಗಿ ಆರು ತಾಣಗಳನ್ನು ಗುರುತಿಸಲಾಗಿದೆ. ಆದರೆ ಎರಡೇ ಊರುಗಳಲ್ಲಿ ಪ್ರಥಮ ಹಂತದ ಪಂದ್ಯಗಳು ನಡೆಯುತ್ತಿದೆ. ಈ ಪದ್ಧತಿಯು ಬಹುತೇಕ ಯಶಸ್ವಿಯಾಗಿರುವುದು ಉತ್ತಮ ಸಂಗತಿ. ಇದು ಟಿ20 ವಿಶ್ವಕಪ್ ವೇಳಾಪಟ್ಟಿ ಮತ್ತು ಪಂದ್ಯಗಳ ಆಯೋಜನೆಗೆ ದಿಕ್ಸೂಚಿಯಾಗಲಿದೆ‘ ಎಂದು ಮಸ್ಕರ್ ಹೇಳಿದ್ದಾರೆ.

‘ಬಯೋಬಬಲ್‌ನಲ್ಲಿ ದ್ವಿಪಕ್ಷೀಯ ಸರಣಿ ಆಯೋಜಿಸುವುದು ಸುಲಭ. ಆದರೆ, ಬಹಳಷ್ಟು ತಂಡಗಳು ಆಡುವ ಟೂರ್ನಿಯನ್ನು ಜೀವಸುರಕ್ಷಾ ವಲಯದಲ್ಲಿ ಆಯೋಜಿಸುವುದು ಕಠಿಣ ಸವಾಲಿನ ಕೆಲಸ‘ ಎಂದು ಮಸ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT