ಗುರುವಾರ , ಜನವರಿ 21, 2021
30 °C

ಜನನಿ, ವೃಂದಾ ಮೇಲೆ ಭರವಸೆ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಿಳಾ ಅಂಪೈರ್‌ಗಳ ಸಂಖ್ಯೆ ತೀರಾ ಕಡಿಮೆ. ಭಾರತದ ಮಹಿಳಾ ಅಂಪೈರ್‌ಗಳ ಸಂಖ್ಯೆಯಂತೂ ಬೆರಳೆಣಿಕೆಯಷ್ಟೆ. ಈಗ ಐಸಿಸಿ ಅಂಪೈರ್‌ಗಳ ಸಮಿತಿಯಲ್ಲಿ ಭಾರತದ ಮೂವರು ಮಹಿಳಾ ಅಂಪೈರ್‌ಗಳು ಮಾತ್ರ ಇದ್ದಾರೆ. ಜಿ.ಎಸ್‌.ಲಕ್ಷ್ಮಿ ಈ ಹಿಂದೆಯೇ ಸಮಿತಿಯಲ್ಲಿದ್ದು ರೆಫರಿಯಾಗಿದ್ದಾರೆ. ಎಂಟು ತಿಂಗಳ ಹಿಂದೆ ಜನನಿ ನಾರಾಯಣನ್ ಮತ್ತು ವೃಂದಾ ರಾಠಿ ಅವರ ಸೇರ್ಪಡೆಯಾಗಿದೆ. ಈ ಇಬ್ಬರ ಬಗ್ಗೆ ಅಂಪೈರ್‌ಗಳ ಗುರು ಎಂದೇ ಹೆಸರು ಗಳಿಸಿರುವ ಡೆನಿಸ್ ಬರ್ನ್ಸ್‌ ಅಪಾರ ಕಾಳಜಿ ಹೊಂದಿದ್ದಾರೆ. ಭಾರತದಲ್ಲಿ ಮಹಿಳಾ ಅಂಪೈರ್‌ಗಳ ಹೊಸ ಅಲೆ ಸೃಷ್ಟಿಸಲು ಇವರಿಬ್ಬರಿಗೆ ಸಾಧ್ಯವಿದೆ ಎಂದು ಅವರು ಈಚೆಗೆ ಹೇಳಿಕೊಂಡಿರುವುದಾಗಿ ಬಿಸಿಸಿಐ ವೆಬ್‌ಸೈಟ್ ವರದಿ ಮಾಡಿತ್ತು.   

ಒಂದು ದಶಕದಿಂದ ಭಾರತದಲ್ಲಿ ಅಂಪೈರ್‌ಗಳ ತರಬೇತಿ, ಐಸಿಸಿ ಅಂಪೈರ್‌ ಸಮಿತಿಗೆ ಸೇರ್ಪಡೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬರ್ನ್ಸ್‌ ಈ ಇಬ್ಬರು ಅಂಪೈರ್‌ಗಳನ್ನು ಬೆಳೆಸಲು ಸಾಧ್ಯವಾದದ್ದರಲ್ಲಿ ಅತೀವ ಸಂತಸ ಇದೆ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಇಪ್ಪತ್ತು ವರ್ಷ ಅಂಪೈರಿಂಗ್ ಮಾಡಿದ ಬರ್ನ್ಸ್‌ ಕೆಲ ಕಾಲ ಮನೋವಿಜ್ಞಾನ ಮತ್ತು ಶಿಕ್ಷಣ ವಿಷಯದಲ್ಲಿ ಅಧ್ಯಾಪಕರಾಗಿದ್ದರು. ಮೆಲ್ಬರ್ನ್‌ಗೆ ತೆರಳಿದ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ಅಂಪೈರ್ ತರಬೇತುದಾರ ಮತ್ತು ಪ್ರಥಮ ದರ್ಜೆ ರೆಫರಿಯಾಗಿ ಕಾರ್ಯನಿರ್ವಹಿಸಿದರು. 2013ರಲ್ಲಿ ಐಸಿಸಿ ಅವರನ್ನು ತನ್ನ ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿತು.

ಅಂಪೈರಿಂಗ್ ಈಗ ಪೂರ್ಣಪ್ರಮಾಣದ ಉದ್ಯೋಗವಾಗಿರುವುದರಿಂದ ಯುವ ತಲೆಮಾರು ಆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅಂಪೈರಿಂಗ್‌ಗೆ ಸಂಬಂಧಿಸಿ ಬಿಸಿಸಿಐ ಸಾಕಷ್ಟು ಹಣ ವ್ಯಯಿಸುತ್ತಿರುವುದರಿಂದ ಭಾರತದಲ್ಲಿ ಉತ್ತಮ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂಬುದು ಅವರ ಅನಿಸಿಕೆ.

ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಂಪೈರಿಂಗ್ ವೃತ್ತಿ ಸುಲಭವಾಗಿದೆಯಾದರೂ ಸವಾಲುಗಳು ಇನ್ನೂ ಉಳಿದಿವೆ. ಈ ಹಿನ್ನೆಲೆಯಲ್ಲಿ ಜನನಿ ಮತ್ತು ವೃಂದಾ ಅವರನ್ನು  ಗಮನಿಸಿದರೆ ಅವರು ಉತ್ತಮ ಪ್ರಗತಿ ಸಾಧಿಸಿದ್ದು ಗಮನಕ್ಕೆ ಬರುತ್ತದೆ ಎಂಬುದು ಈ ಮಹಿಳಾ ಅಂಪೈರ್‌ಗಳ ಕುರಿತು ಅವರಾಡಿದ ಮೆಚ್ಚುಗೆಯ ನುಡಿ.

34 ವರ್ಷದ ಜನನಿ 2018ರಿಂದ ಭಾರತದಲ್ಲಿ ದೇಶಿ ಟೂರ್ನಿಗಳ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಶ್ರೀನಿವಾಸ್ ವೆಂಕಟರಾಘವನ್ ಮತ್ತು ಇಂಗ್ಲೆಂಡ್‌ನ ಡೇವಿಡ್ ಶೆಫರ್ಡ್ ಅವರನ್ನು ಮಾದರಿಯಾಗಿರಿಸಿಕೊಂಡಿರುವ ಜನನಿ ‘ಈ ಅವಕಾಶದಿಂದ ಇನ್ನಷ್ಟು ಕಲಿಯಲು ಬೇಕಾದ ಭೂಮಿಕೆ ಸಿದ್ಧವಾಗಿದೆ‘ ಎನ್ನುತ್ತಾರೆ.

ಕ್ರಿಕೆಟ್ ಆಟಗಾರ್ತಿ ಮತ್ತು ಸ್ಕೋರರ್ ಆಗಿ ಕಾರ್ಯನಿರ್ವಹಿಸಿರುವ 31 ವರ್ಷದ ಮುಂಬೈಕರ್ ವೃಂದಾ ಕ್ರಿಕೆಟ್‌ನಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡದ್ದು ಅಂಪೈರಿಂಗ್ ವೃತ್ತಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು