ಮಂಗಳವಾರ, ಜೂಲೈ 7, 2020
28 °C
ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌

ವಿಶ್ವಕಪ್‌ ಸಿದ್ಧತೆಗೆ ಐಪಿಎಲ್‌ ಉತ್ತಮ ವೇದಿಕೆ: ಜಸ್ಟಿನ್‌ ಲ್ಯಾಂಗರ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ‘ಮುಂಬರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಸಿದ್ಧತೆ ಕೈಗೊಳ್ಳಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅತ್ಯುತ್ತಮ ವೇದಿಕೆಯಾಗಿದೆ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ 29ಕ್ಕೆ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಲೀಗ್‌ ಅನ್ನು ಕೊರೊನಾ ಭೀತಿಯಿಂದಾಗಿ ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ. ಕೊರೊನಾ ಉಪಟಳ ಉಲ್ಬಣಿಸುತ್ತಿರುವ ಕಾರಣ ಈಗ ಐಪಿಎಲ್‌ ನಡೆಯುವುದೇ ಅನುಮಾನ ಎನಿಸಿದೆ.

‘ವಿಶ್ವಕಪ್‌ಗೂ ಮುನ್ನ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಐಪಿಎಲ್‌ ಸಹಕಾರಿಯಾಗಿತ್ತು. ಹೀಗಾಗಿಯೇ ನಮ್ಮ ಆಟಗಾರರಿಗೆ ಲೀಗ್‌ನಲ್ಲಿ ಆಡುವಂತೆ ಸಲಹೆ ನೀಡಿದ್ದೆ. ಆದರೆ ಈಗ ಲೀಗ್‌ನ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಆಟಗಾರರು ಹಾಗೂ ಅಭಿಮಾನಿಗಳ ಹಿತ ಮತ್ತು ಸುರಕ್ಷತೆ ಮುಖ್ಯ’ ಎಂದಿದ್ದಾರೆ.

‘ಆ್ಯರನ್‌ ಫಿಂಚ್‌ ಸಾರಥ್ಯದ ಆಸ್ಟ್ರೇಲಿಯಾ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಒಂದೆರಡು ಸ್ಥಾನಗಳಿಗೆ ಪೈಪೋಟಿ ಇದೆ. ಉಳಿದಂತೆ  ಆಯ್ಕೆಯ ವಿಚಾರವಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ಯಿಂದ ಗೆದ್ದಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿ’ ಎಂದೂ ತಿಳಿಸಿದ್ದಾರೆ.

ಅಕ್ಟೋಬರ್‌ 24ರಂದು ಸಿಡ್ನಿಯಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

ಕೊರೊನಾ ಭೀತಿಯಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಗುರುವಾರ ವಿಶ್ವಕಪ್‌ ಅರ್ಹತಾ ಟೂರ್ನಿಗಳನ್ನು ಮುಂದೂಡಿತ್ತು. ಟ್ವೆಂಟಿ–20 ವಿಶ್ವಕಪ್‌ ನಿಗದಿತ ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ ಎಂದೂ ಹೇಳಿತ್ತು.

ಪ್ಯಾಟ್‌ ಕಮಿನ್ಸ್‌, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಆ್ಯರನ್‌ ಫಿಂಚ್‌ ಸೇರಿದಂತೆ ಆಸ್ಟ್ರೇಲಿಯಾದ ಹಲವು ಆಟಗಾರರು ಈ ಸಲದ ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು