ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರಣ್ ಶರ್ಮಾ ಅಮೋಘ ಬ್ಯಾಟಿಂಗ್, ಮನೀಷ್ ಪಾಂಡೆ ಪಡೆ ಕನಸು ಭಗ್ನ

ಸೆಮಿಫೈನಲ್‌ಗೆ ಉತ್ತರಪ್ರದೇಶ ಲಗ್ಗೆ; ಕರಣ್ ಶರ್ಮಾ ಅಮೋಘ ಬ್ಯಾಟಿಂಗ್
Last Updated 8 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಕರ್ನಾಟಕದ ತಂಡದ ಕನಸು ತವರಿನಂಗಳದಲ್ಲಿಯೇ ಕಮರಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಮಾಡಿದ್ದ ತಪ್ಪನ್ನು ಎರಡನೇ ಇನಿಂಗ್ಸ್‌ನಲ್ಲಿ ತಿದ್ದಿಕೊಂಡ ಉತ್ತರಪ್ರದೇಶ 5 ವಿಕೆಟ್‌ಗಳಿಂದ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ನಾಯಕ ಕರಣ್ ಶರ್ಮಾ (ಅಜೇಯ 93) ಗೆಲುವಿನ ರೂವಾರಿಯಾದರು.

ಆದರೆ, ಮೊದಲ ಇನಿಂಗ್ಸ್‌ನಲ್ಲಿ 98 ರನ್‌ಗಳ ಮಹತ್ವದ ಮುನ್ನಡೆ ಗಳಿಸಿದ್ದ ಮನೀಷ್ ಪಾಂಡೆ ಬಳಗವು ಎರಡನೇ ಇನಿಂಗ್ಸ್‌ನಲ್ಲಿ ಮಾಡಿದ ಕಳಪೆ ಬ್ಯಾಟಿಂಗ್‌ಗೆ ದಂಡ ತೆತ್ತಿತು. ಎರಡನೇ ಇನಿಂಗ್ಸ್‌ನಲ್ಲಿ ಕೇವಲ 114 ರನ್‌ ಗಳಿಸಿತು. ಇದರಿಂದಾಗಿ 213 ರನ್‌ಗಳ ಗುರಿ ಬೆನ್ನಟ್ಟಿದ ಉತ್ತರಪ್ರದೇಶ ಶಿಸ್ತು, ತಾಳ್ಮೆ ಮತ್ತು ಯೋಜನಾಬದ್ಧ ಬ್ಯಾಟಿಂಗ್‌ ಮೂಲಕ 65.2 ಓವರ್‌ಗಳಲ್ಲಿ ಗೆದ್ದಿತು.

ಭಾರತ ತಂಡದಲ್ಲಿ ಆಡಿರುವ ಅನುಭವಿ ಮಯಂಕ್ ಅಗರವಾಲ್, ಮನೀಷ್, ಕರುಣ್ ನಾಯರ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳ ವೈಫಲ್ಯ ತಂಡವನ್ನು ಕಾಡಿತು. ಬೌಲರ್‌ಗಳ ಶ್ರಮ ವ್ಯರ್ಥವಾಯಿತು.

ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ253 ರನ್‌ಗಳಿಸಿತ್ತು ಮತ್ತು ಉತ್ತರಪ್ರದೇಶ ತಂಡವನ್ನು 155 ರನ್‌ಗಳಿಗೆ ಕಟ್ಟಿಹಾಕಿತ್ತು. ವೇಗಿಗಳಾದ ರೋನಿತ್ ಮೋರೆ, ವಿದ್ವತ್ ಕಾವೇರಪ್ಪ ಮತ್ತು ವೈಶಾಖ್ ವಿಜಯಕುಮಾರ್ ಅವರ ಬೌಲಿಂಗ್‌ಗೆ ಉತ್ತರಪ್ರದೇಶ ಕುಸಿದಿತ್ತು. ಎರಡನೇ ಇನಿಂಗ್ಸ್‌ನಲ್ಲಿಯೂ ವೈಶಾಖ್ (47ಕ್ಕೆ3) ಕರ್ನಾಟಕಕ್ಕೆ ಉತ್ತಮ ಆರಂಭವನ್ನೇ ನೀಡಿದರು. ಅದರಿಂದಾಗಿ ಎದುರಾಳಿ ತಂಡವು 96 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಛಲದ ಆಟವಾಡಿದ ಪ್ರಿಯಂ ಗರ್ಗ್ (52; 60ಎ, 4X6, 6X2), ಕರಣ್ ಹಾಗೂ ಕೊನೆಯಲ್ಲಿ ಪ್ರಿನ್ಸ್‌ ಯಾದವ್ (33; 73ಎ) ಕರ್ನಾಟಕದ ಬೌಲಿಂಗ್ ಪಡೆಯ ಪ್ರಯತ್ನಗಳನ್ನು ವಿಫಲಗೊಳಿಸಿದರು.

ಮಂಗಳವಾರ ದಿನದಾಟದ ಕೊನೆಗೆ ಕರ್ನಾಟಕವು ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳಿಗೆ 100 ರನ್ ಗಳಿಸಿತ್ತು. ಮೂರನೇ ದಿನದ ಬೆಳಿಗ್ಗೆ ಈ ಮೊತ್ತಕ್ಕೆ ಮತ್ತು 14 ರನ್‌ ಸೇರಿದಾಗ ಉಳಿದೆರಡು ವಿಕೆಟ್‌ಗಳು ಪತನವಾದವು.

ಇನಿಂಗ್ಸ್ ಆರಂಭಿಸಿದ ಉತ್ತರಪ್ರದೇಶ ರನ್ ಗಳಿಸಲು ಗಡಿಬಿಡಿ ಮಾಡಲಿಲ್ಲ. ಊಟದ ವಿರಾಮಕ್ಕೆ 53 ರನ್‌ ಗಳಿಸಿತು. ಈ ಅವಧಿಯಲ್ಲಿ ಎರಡು ವಿಕೆಟ್ ಗಳಿಸಿದ್ದ ವೈಶಾಖ್ ವಿಜಯಕುಮಾರ್ ಭರವಸೆ ಮೂಡಿಸಿದ್ದರು. ಆದರೆ, ಚಹಾ ವಿರಾಮದ ಹೊತ್ತಿಗೆ ಚಿತ್ರಣ ಬದಲಾಗಿತ್ತು. ಆದರೆ ಪ್ರಿಯಂ ಮತ್ತು ಕರಣ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 59 ರನ್‌ಗಳನ್ನು ಪೇರಿಸಿದರು. ಆಫ್‌ಸ್ಪಿನ್ನರ್ ಗೌತಮ್ ಬೌಲಿಂಗ್‌ನಲ್ಲಿ ಪ್ರಿಯಂ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ರಿಂಕು ಸಿಂಗ್ ಮತ್ತು ಧ್ರುವ್ ಚಾಂದ್ ಅವರ ವಿಕೆಟ್‌ಗಳನ್ನು ವಿದ್ವತ್ ಮತ್ತು ವೈಶಾಖ್ ಗಳಿಸಿದರೂ ಕರಣ್ ಆಟಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಅವರು ಪ್ರಿನ್ಸ್ ಅವರೊಂದಿಗೆ ಮುರಿಯದ ಆರನೇ ವಿಕೆಟ್ ಜತೆಯಾಟದಲ್ಲಿ 99 ರನ್‌ಗಳನ್ನು ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಶರತ್‌ಗೆ ಗಾಯ; ಅಂಪೈರ್‌ ಗೊಂದಲ
ಬುಧವಾರ ಬೆಳಿಗ್ಗೆ ಕರ್ನಾಟಕದ ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಅವರ ಕೈಗೆ ಚೆಂಡು ಬಡಿದು ಗಾಯವಾಯಿತು. ಬಲಗೈ ಬೆರಳಿನ ಮೂಳೆಮುರಿತಕ್ಕೊಳಗಾದ ಅವರು ಪೆವಿಲಿಯನ್‌ಗೆ ಮರಳಿದರು.

ಅವರ ಬದಲಿಗೆ ಬದಲೀ ವಿಕೆಟ್‌ಕೀಪರ್ ಬಿ.ಆರ್.ಶರತ್ ಕಣಕ್ಕಿಳಿದರು. ಆದರೆ, ಅಂಪೈರ್ ನಿತಿನ್ ಪಂಡಿತ್ ಮತ್ತು ಯಶವಂತ್ ಬರ್ಡೆ ಅವರು ಒಪ್ಪಲಿಲ್ಲ. 11ರ ತಂಡದಲ್ಲಿರುವವರೇ ಕೀಪಿಂಗ್ ಮಾಡಬೇಕು ಎಂದು ಸೂಚಿಸಿದರು. ಇದರಿಂದಾಗಿ ಮನೀಷ್ ಪಾಂಡೆ ಕೀಪಿಂಗ್ ಮಾಡಿದರು. ಎರಡು ಓವರ್‌ಗಳ ನಂತರ ಮತ್ತೆ ಬಿ.ಆರ್. ಶರತ್ ಅವರಿಗೇ ಕೀಪಿಂಗ್ ಮಾಡಲು ಅವಕಾಶ ನೀಡಲಾಯಿತು.

ಬದಲೀ ಕೀಪರ್ ನಿಯಮದ ಕುರಿತ ಗೊಂದಲವೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಕರಣ್‌ಗೆ ನೆರವಾದ ರಾಹುಲ್ ಸಲಹೆಗಳು: ಉತ್ತರಪ್ರದೇಶ ತಂಡಕ್ಕೆ ಇದೇ ಮೊದಲ ಬಾರಿ ನಾಯಕತ್ವ ವಹಿಸಿರುವ 23 ವರ್ಷದ ಕರಣ್ ಶರ್ಮಾ ಕರ್ನಾಟಕ ಎದುರಿನ ರಣಜಿ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ತಂಡದ ಜಯದ ರೂವಾರಿಯೂ ಆದರು. ಅಜೇಯ 93 ರನ್ ಗಳಿಸಿದ ಅವರ ಶಾಂತಚಿತ್ತ ಮತ್ತು ಏಕಾಗ್ರತೆಯ ಆಟ ಗಮನ ಸೆಳೆಯಿತು.

‘ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್‌ನಲ್ಲಿದ್ದಾಗ ಕೆ.ಎಲ್. ರಾಹುಲ್ ಅವರಿಂದ ಬಹಳಷ್ಟು ಅಂಶಗಳನ್ನು ಕಲಿತೆ. ಪಂದ್ಯಕ್ಕೂ ಮೊದಲು ಮಾಡಿಕೊಳ್ಳು ಸಿದ್ದತೆ, ಪಂದ್ಯಕ್ಕೂ ಮುನ್ನ ಮತ್ತು ಪಂದ್ಯದ ವೇಳೆ ನಿರ್ಧಾರ ತೆಗೆದುಕೊಳ್ಳುವ ರೀತಿ ಮತ್ತು ಮಾನಸಿಕವಾಗಿ ಸದೃಢವಾಗಿರುವ ತಂತ್ರಗಳನ್ನು ಕಲಿತೆ. ರಣಜಿ ಟ್ರೋಫಿಯಲ್ಲಿ ತಂಡದ ನಾಯಕತ್ವ ವಹಿಸಲು ಅವೆಲ್ಲವೂ ನೆರವಾದವು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT