ಶನಿವಾರ, ಫೆಬ್ರವರಿ 27, 2021
30 °C
ತಮಿಳುನಾಡು– ಹಿಮಾಚಲ ಪ್ರದೇಶ ಹಣಾಹಣಿ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ: ಪಂಜಾಬ್‌ ಸವಾಲಿಗೆ ಕರುಣ್ ಬಳಗ ಸಜ್ಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಗುಂಪು ಹಂತದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿರುವ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಮಂಗಳವಾರ ಪಂಜಾಬ್ ವಿರುದ್ಧ ಸೆಣಸಲಿದೆ. ಎಲೀಟ್ ‘ಎ’ ಗುಂಪಿನಲ್ಲಿದ್ದ ಕರ್ನಾಟಕ ಗುಂಪು ಹಂತದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿತ್ತು. ಸೋತ ಏಕೈಕ ಪಂದ್ಯ ಪಂಜಾಬ್‌ ಎದುರಿನದಾಗಿತ್ತು. ಆದ್ದರಿಂದ ಆ ಸೋಲಿಗೆ ತಿರುಗೇಟು ನೀಡಿ ಮುಂದಿನ ಹಂತಕ್ಕೆ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕೆ ಇಳಿಯಲಿದೆ.

ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 43 ರನ್‌ಗಳಿಂದ ಗೆದ್ದಿದ್ದ ಕರುಣ್ ನಾಯರ್ ಬಳಗ ನಂತರ ಪಂಜಾಬ್‌ಗೆ ಒಂಬತ್ತು ವಿಕೆಟ್‌ಗಳಿಂದ ಮಣಿದಿತ್ತು. ತ್ರಿಪುರಾ ವಿರುದ್ಧ 10 ರನ್‌ಗಳಿಂದ, ರೈಲ್ವೇಸ್ ವಿರುದ್ಧ ಎರಡು ವಿಕೆಟ್‌ಗಳಿಂದ ಮತ್ತು ಉತ್ತರ ಪ್ರದೇಶ ವಿರುದ್ಧ ಐದು ವಿಕೆಟ್‌ಗಳಿಂದ ಜಯ ಗಳಿಸಿತ್ತು. ಮನದೀಪ್‌ ಸಿಂಗ್ ನಾಯಕತ್ವದ ಪಂಜಾಬ್ ಎಲ್ಲ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಆದ್ದರಿಂದ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೂ ಗುಂಪು ಹಂತದಲ್ಲಿ ಕರ್ನಾಟಕ ಅಧಿಕಾರಯುತವಾಗಿ ಆಡಿದ್ದು ಒಂದೆರಡು ಪಂದ್ಯಗಳಲ್ಲಿ ಮಾತ್ರ. ಬಲಿಷ್ಠ ಬ್ಯಾಟಿಂಗ್ ಪಡೆ ಇದ್ದರೂ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ. ದೇವದತ್ತ ಪಡಿಕ್ಕಲ್ ಮಾತ್ರ ಮಿಂಚಿದ್ದರು. ಅವರು ಐದು ಪಂದ್ಯಗಳಲ್ಲಿ ಗರಿಷ್ಠ 99 ರನ್ ಒಳಗೊಂಡಂತೆ ಒಟ್ಟು 207 ರನ್‌ ಕಲೆ ಹಾಕಿದ್ದಾರೆ. ಆದರೆ ಪಂಜಾಬ್ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೀಗಾಗಿ ತಂಡ ಎರಡು ಬಾರಿ 150ಕ್ಕೂ ಹೆಚ್ಚು ಮೊತ್ತ ಗಳಿಸಿದೆ.   ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯ ಮೂರನೇ ಸ್ಥಾನದಲ್ಲಿ ಪ್ರಭುಸಿಮ್ರನ್ ಸಿಂಗ್ ಇದ್ದಾರೆ. ಅವರು ಐದು ಪಂದ್ಯಗಳಲ್ಲಿ 277 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ (197 ರನ್‌) ಕೂಡ ಉತ್ತಮ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಗರಿಷ್ಠ ಮೊತ್ತ 167 ರನ್.

ಬೌಲಿಂಗ್‌ನಲ್ಲೂ ಪಂಜಾಬ್‌ ಉತ್ತಮ ಸಾಧನೆ ಮಾಡಿದ್ದು ಸಿದ್ಧಾರ್ಥ್ ಕೌಲ್, ಆರ್ಷದೀಪ್ ಸಿಂಗ್ ಮತ್ತು ಹರಪ್ರೀತ್ ಬ್ರಾರ್ ಎದುರಾಳಿ ತಂಡಗಳ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂವರು ಕ್ರಮವಾಗಿ ಹತ್ತು, ಎಂಟು ಮತ್ತು ಏಳು ವಿಕೆಟ್ ಗಳಿಸಿದ್ದಾರೆ. ಕರ್ನಾಟಕದ ಬೌಲಿಂಗ್‌ ವಿಭಾಗದ ಚುಕ್ಕಾಣಿ ಹಿಡಿದಿರುವ ಅಭಿಮನ್ಯು ಮಿಥುನ್ ಇನ್ನೂ ಲಯ ಕಂಡುಕೊಳ್ಳಲಿಲ್ಲ. ಜೆ.ಸುಚಿತ್ ಮತ್ತು ಪ್ರವೀಣ್ ದುಬೆ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ತಲಾ ಮೂರು ವಿಕೆಟ್ ಗಳಿಸಿ ಗಮನ ಸೆಳೆದಿದ್ದಾರೆ. ಪ್ರಸಿದ್ಧ ಕೃಷ್ಣ ಅವರು ಜಮ್ಮು ಮತ್ತು ಕಾಶ್ಮೀರ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿದ್ದರು. ಈ ಮೂವರ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ. ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

ಸಂಜೆ ಏಳು ಗಂಟೆಗೆ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ತಂಡಗಳು ಸೆಣಸಲಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಎನ್‌.ಜಗದೀಶನ್ (315 ರನ್‌) ಮತ್ತು ನಾಯಕ ದಿನೇಶ್ ಕಾರ್ತಿಕ್ ತಮಿಳುನಾಡು ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಆಗಿದ್ದು ಎಲೀಟ್ ‘ಸಿ‘ ಗುಂಪಿನಿಂದ ಬಂದಿರುವ ಹಿಮಾಚಲಪ್ರದೇಶದ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ.

ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್, ವೇಗಿ ಟಿ.ನಟರಾಜನ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಅನುಪಸ್ಥಿತಿಯಲ್ಲೂ ತಮಿಳುನಾಡು ಉತ್ತಮ ಆಟವಾಡಿದೆ. ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ಆರ್‌.ಸಾಯಿ ಕಿಶೋರ್ ಅವರೊಂದಿಗೆ ಬಾಬಾ ಅಪರಾಜಿತ್ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು