ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ರಣಜಿ ತಂಡಕ್ಕೆ ಶ್ರೀಶಾಂತ್‌ಗೆ ಸ್ಥಾನ?

Last Updated 18 ಜೂನ್ 2020, 13:49 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗದ ಬೌಲರ್ ಎಸ್. ಶ್ರೀಶಾಂತ್ ಮುಂದಿನ ರಣಜಿ ಟ್ರೋಫಿ ಕ್ರಿಕೆಟ್‌ ಋತುವಿನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ತನ್ನ ರಾಜ್ಯ ತಂಡದಲ್ಲಿ ಅವರಿಗೆ ಅವಕಾಶ ಕೊಡಲು ಸಿದ್ಧವಾಗಿದೆ.

‘ಸೆಪ್ಟೆಂಬರ್‌ನಲ್ಲಿ ಅವರ ಮೇಲಿನ ನಿಷೇಧವು ಕೊನೆಗೊಳ್ಳಲಿದೆ. ಆದ್ದರಿಂದ ಅವರನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲು ಕೆಸಿಎ ನಿರ್ಧರಿಸಿದೆ’ ಎಂದು ಕೇರಳ ರಣಜಿ ತಂಡದ ಕೋಚ್ ಟೀನು ಯೋಹಾನನ್ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

‘ಅವರನ್ನು ನೇರವಾಗಿ ತಂಡಕ್ಕೆ ಆಯ್ಕೆ ಮಾಡುವುದಿಲ್ಲ. ಅವರ ಫಿಟ್‌ನೆಸ್‌ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಅವರು ಯಶಸ್ವಿಯಾದರೆ ಮಾತ್ರ ಮುಂದಿನ ವಿಚಾರ’ ಎಂದೂ ಯೋಹಾನನ್ ಸ್ಪಷ್ಟಪಡಿಸಿದ್ದಾರೆ.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದವರಲ್ಲಿ ಶ್ರೀಶಾಂತ್ ಕೂಡ ಒಬ್ಬರಾಗಿದ್ದರು. ಅವರ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜೀವಮಾನ ನಿಷೇಧ ವಿಧಿಸಿತ್ತು.

2015ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ವಿಶೇಷ ನ್ಯಾಯಾಲಯವು ಶ್ರೀಶಾಂತ್ ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ ಬಿಸಿಸಿಐ ತನ್ನ ನಿಲುವು ಬದಲಿಸಿರಲಿಲ್ಲ. ಶ್ರೀಶಾಂತ್ ಬೇರೆ ದೇಶಗಳ ಲೀಗ್‌ಗಳಲ್ಲಿ ಆಡಲು ತೆರಳುವುದಾಗಿ ಮಾಡಿದ ಮನವಿಗೂ ಬಿಸಿಸಿಐ ಒಪ್ಪಿಗೆ ನೀಡಲಿಲ್ಲ. ಮಂಡಳಿಯು ನಿಷೇಧ ತೆರವು ಮಾಡಬೇಕು ಎಂದು ಕೋರಿ ಶ್ರೀಶಾಂತ್ ಕೇರಳ ಹೈಕೋರ್ಟ್‌ ಮೊರೆಗೆ ಹೋದರು. 2018ರಲ್ಲಿ ತೀರ್ಪು ನೀಡಿದ ಹೈಕೋರ್ಟ್, ಶ್ರೀಶಾಂತ್ ಮೇಲೆನ ನಿಷೇಧ ತೆಗೆದುಹಾಕಲು ಸೂಚಿಸಿತು. ಆದರೆ ವಿಭಾಗೀಯ ಪೀಠವು ನಿಷೇಧವನ್ನು ಸಮರ್ಥಿಸಿತು.

ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಅಪೆಕ್ಸ್‌ ಕೋರ್ಟ್‌, ನಿಷೇಧದ ಅವಧಿಯನ್ನು ಕಡಿತಗೊಳಿಸುವಂತೆ ಸೂಚಿಸಿತು. ಬಿಸಿಸಿಐ ಏಳು ವರ್ಷಗಳಿಗೆ ನಿಷೇಧವನ್ನು ನಿಗದಿಪಡಿಸಿತು. 2013ರಿಂದಲೇ ಜಾರಿ ಮಾಡಿತು. ಮುಂಬರುವ ಆಗಸ್ಟ್ ಮುಕ್ತಾಯಕ್ಕೆ ಅವರ ನಿಷೇಧವೂ ಮುಗಿಯಲಿದೆ.

ಅಕ್ಟೋಬರ್‌ ನಂತರ ದೇಶಿ ಟೂರ್ನಿ ನಡೆಯುವ ಸಾಧ್ಯತೆಗಳಿದ್ದು. ಅದರಲ್ಲಿ ಅವಕಾಶವನ್ನು ಗಿಟ್ಟಿಸಲು 37 ವರ್ಷದ ಶ್ರೀಶಾಂತ್ ಸಿದ್ಧರಾಗಬೇಕಿದೆ. 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಶ್ರೀಶಾಂತ್ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT