ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕದ ಅಂಚಿನಲ್ಲಿ ಎಡವಿದ ಖ್ವಾಜಾ

ಮೊದಲ ಟೆಸ್ಟ್‌: ವಾರ್ನರ್‌, ಲಾಬುಶೇನ್ ಅರ್ಧಶತಕ; ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಆಸ್ಟ್ರೇಲಿಯಾ
Last Updated 6 ಮಾರ್ಚ್ 2022, 13:50 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ (97; 159 ಎಸೆತ, 15 ಬೌಂಡರಿ) ಶತಕದ ಅಂಚಿನಲ್ಲಿ ಎಡವಿದರು. ಆದರೂ ಭರ್ಜರಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆತಿಥೇಯ ಪಾಕಿಸ್ತಾನಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.

ಪಿಂಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತವನ್ನು (4ಕ್ಕೆ 476 ಡಿಕ್ಲೇರ್) ಬೆನ್ನತ್ತಿದ ಆಸ್ಟ್ರೇಲಿಯಾ ಮೂರನೇ ದಿನದಾಟದ ಮುಕ್ತಾಯಕ್ಕೆ 2ಕ್ಕೆ 271 ರನ್ ಗಳಿಸಿದೆ. ತಂಡ ಇನ್ನೂ 205 ರನ್‌ಗಳ ಹಿನ್ನಡೆಯಲ್ಲಿದೆ.

ಪಾಕಿಸ್ತಾನದಲ್ಲಿ ಜನಿಸಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉಸ್ಮಾನ್ ಖಾಜಾ ಶನಿವಾರ ಐದು ರನ್ ಗಳಿಸಿದ್ದರು. ಭಾನುವಾರ ಅಮೋಘ ಆಟ ಮುಂದುವರಿಸಿದ ಅವರು ಡೇವಿಡ್ ವಾರ್ನರ್ ಜೊತೆ ಮೊದಲ ವಿಕೆಟ್‌ಗೆ 156 ರನ್ ಸೇರಿಸಿದರು.

ವಾರ್ನರ್ ಔಟಾದ ನಂತರ ಖ್ವಾಜಾ ಮತ್ತು ಮಾರ್ನಸ್ ಲಾಬುಶೇನ್ ಭರ್ಜರಿ ಆಟವಾಡಿದರು. ಇವರಿಬ್ಬರು 47 ರನ್‌ ಕಲೆ ಹಾಕಿದರು. 11ನೇ ಶತಕದತ್ತ ಹೆಜ್ಜೆ ಹಾಕಿದ್ದ ಖ್ವಾಜಾ 54ನೇ ಓವರ್‌ನಲ್ಲಿ ಎಡವಿದರು. ಎಡಗೈ ಸ್ಪಿನ್ನರ್ ನೌಮನ್ ಅಲಿ ಅವರ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ ಅವರ ಕೈಗವಸಿಗೆ ಸೋಕಿದ ಚೆಂಡು ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿದ್ದ ಇಮಾನ್ ಉಲ್ ಹಕ್ ಅವರ ಕೈ ಸೇರಿತು.

ಅಂಪೈರ್ ಅಲೀಂ ದಾರ್ ಅವರು ನಾಟೌಟ್ ತೀರ್ಪು ನೀಡಿದರೂ ತೀರ್ಪು ಮರುಪರಿಶೀಲನೆಯ ಫಲಿತಾಂಶದ ನಂತರ ಪಾಕಿಸ್ತಾನ ಆಟಗಾರರು ಸಂಭ್ರಮಿಸಿದರು. ಖ್ವಾಜಾ ಔಟಾದ ನಂತರ ಲಾಬುಶೇನ್ ಆಟ ರಂಗೇರಿತು. ಸ್ಟೀವನ್ ಸ್ಮಿತ್ ಜೊತೆಗೂಡಿದ ಅವರು ಮುರಿಯದ ಮೂರನೇ ವಿಕೆಟ್‌ಗೆ 68 ರನ್ ಸೇರಿಸಿದರು.

ಅಷ್ಟರಲ್ಲಿ ಬೆಳಕಿನ ಅಭಾವದಿಂದ ಪಂದ್ಯಕ್ಕೆ ಅಡ್ಡಿಯಾಯಿತು. ನಂತರ ಮಳೆಯೂ ಕಾಡಿದ್ದರಿಂದ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಮುಂದಿನ ಎರಡು ದಿನವೂ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಪಂದ್ಯದಲ್ಲಿ ಫಲಿತಾಂಶ ಬರುವುದು ಅನುಮಾನ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: ಮೊದಲ ಇನಿಂಗ್ಸ್: 162 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 476 ಡಿಕ್ಲೇರ್‌; ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: (ಶನಿವಾರ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 5)73 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 271 (ಉಸ್ಮಾನ್ ಖ್ವಾಜಾ 97, ಡೇವಿಡ್ ವಾರ್ನರ್ 68, ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ 69, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 24; ಸಜೀದ್ ಖಾನ್ 94ಕ್ಕೆ 1, ನೌಮಾನ್ ಅಲಿ 49ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT