ಸೋಮವಾರ, ಜನವರಿ 20, 2020
20 °C
ಕ್ರಿಕೆಟ್‌ 2020

ರನ್, ಶತಕ–ಅರ್ಧಶತಕ ಗಳಿಕೆಯಲ್ಲೂ ನಂ.1: ಕ್ರಿಕೆಟ್ ಲೋಕದ ‘ದಶಕದ ಹೀರೋ’ ವಿರಾಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಜಗತ್ತು ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಕಳೆದ ದಶಕ (2010–2020) ಮೂರು ಏಕದಿನ ವಿಶ್ವಕಪ್‌ ಟೂರ್ನಿಗಳಿಗೆ ಸಾಕ್ಷಿಯಾಗಿದೆ. ಪಿಂಕ್‌ ಬಾಲ್‌ ಟೆಸ್ಟ್‌ ಆರಂಭವಾಗಿದೆ. ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಡಿಆರ್‌ಎಸ್‌) ಜಾರಿಯಾಗಿದೆ. ಅಫ್ಗಾನಿಸ್ತಾನ, ಬಾಂಗ್ಲಾದೇಶದ ಆಟಗಾರರು ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆಯುವ ಹಂತಕ್ಕೆ ಬೆಳೆದಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ತಂಡಗಳ ನಡುವಣ ಪೈಪೋಟಿ ಹೆಚ್ಚಾಗಿದೆ. ಕ್ರಿಕೆಟ್‌ ದೈತ್ಯ ವೆಸ್ಟ್‌ ಇಂಡೀಸ್‌, ಪಾಕಿಸ್ತಾನ, ಶ್ರೀಲಂಕಾ ತಂಡಗಳು ಪುಟಿದೇಳಲು ಎಣಗಾಡುತ್ತಿವೆ.

ಹೀಗೆ ನಿರಂತರ ಬದಲಾವಣೆಗಳಿಗೆ ಎದೆಯೊಡ್ಡುತ್ತಲೇ ಸಾಗಿರುವ ಕ್ರಿಕೆಟ್‌ ಲೋಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಲವು ಆಟಗಾರರು ಛಾಪು ಮೂಡಿದ್ದಾರೆ. ಅಸಾಧಾರಣ ಸಾಮರ್ಥ್ಯ ತೋರಿದ ಹಲವರು ಬಂದಷ್ಟೇ ವೇಗವಾಗಿ ಹಿನ್ನಲೆಗೆ ಸರಿದಿದ್ದಾರೆ. ಆದರೆ, ದಶಕದುದ್ದಕ್ಕೂ ಯಶಸ್ಸಿನ ಅಲೆಯಲ್ಲಿ ತೇಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಭುತ್ವ ಸಾಧಿಸಿದ ಏಕೈಕ ಆಟಗಾರ ವಿರಾಟ್‌ ಕೊಹ್ಲಿ.

ದೆಹಲಿಯ ಕೊಹ್ಲಿಗೆ ಈಗ ವಯಸ್ಸು 31. ಸದ್ಯ ಭಾರತ ಕ್ರಿಕೆಟ್‌ ತಂಡದ ನಾಯಕನಾಗಿರುವ ಈ ಆಟಗಾರ ಕಳೆದ ಹತ್ತು ವರ್ಷಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.


ಅಭ್ಯಾಸ ನಿರತ ವಿರಾಟ್‌ ಕೊಹ್ಲಿ

ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಮೊದಲ ಪಿಂಕ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿ, ಹಗಲು ರಾತ್ರಿ ಟೆಸ್ಟ್‌ನಲ್ಲಿ ಮೂರಂಕಿ ದಾಟಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡು 2019ರ ವಿದಾಯವನ್ನೂ ಸ್ಮರಣೀಯವಾಗಿಸಿಕೊಂಡರು. ಕೊಹ್ಲಿ ಹೆಸರಿನೊಂದಿಗೆ ದಶಕದುದ್ದಕ್ಕೂ ತಳುಕು ಹಾಕಿಕೊಂಡ ಇಂತಹ ಸಾಕಷ್ಟು ದಾಖಲೆಗಳಿವೆ.

2008ರಲ್ಲಿ ಶ್ರೀಲಂಕಾ ಎದುರು ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಮವಾಗಿ 2010 ಮತ್ತು 2011ನೇ ಸಾಲಿನಲ್ಲಿ ಕಣಕ್ಕಿಳಿದರು.

ಇದನ್ನೂ ಓದಿ: ವಿಸ್ಡನ್‌ ದಶಕದ ಟಿ20 ತಂಡ: ಕೊಹ್ಲಿ, ಬೂಮ್ರಾಗೆ ಗೌರವ

ಆರಂಭದಲ್ಲಿ ದುಡುಕು ಸ್ವಭಾವದ ಕ್ರಿಕೆಟರ್‌ ಆಗಿ ಗುರ್ತಿಸಿಕೊಂಡಿದ್ದ ಕೊಹ್ಲಿ, ಮೊದಲೆರಡು ವರ್ಷ ಸ್ಥಿರ ಪ್ರದರ್ಶನ ತೋರಲು ಪರದಾಡಿದ್ದರು. ಬಳಿಕ ಸುಧಾರಣೆ ಹಾದಿ ಹಿಡಿದು, ನಿರಂತರ ಯಶಸ್ಸಿನ ಲಯದಲ್ಲಿ ಮುಂದುವರಿದರು.

ದಶಕದ ಪ್ರಭುತ್ವ
ವಿರಾಟ್‌ ಕೊಹ್ಲಿ ಇದುವರೆಗೆ ಮೂರೂ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 401 ಪಂದ್ಯಗಳನ್ನು ಆಡಿದ್ದು 21,444 ರನ್‌ ಕಲೆಹಾಕಿದ್ದಾರೆ. ಅದರಲ್ಲಿ 2010–2020ರ ಅವಧಿಯಲ್ಲಿ ಆಡಿರುವ ಪಂದ್ಯಗಳ ಸಂಖ್ಯೆ 386. ಇಷ್ಟು ಪಂದ್ಯಗಳಿಂದ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 20,960 ಕಲೆಹಾಕಿದ್ದು, ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಹಾಶೀಂ ಆಮ್ಲಾ ಇದ್ದಾರೆ. ಅವರು 15,185 ರನ್ ಗಳಿಸಿದ್ದಾರೆ. ಕೊಹ್ಲಿ ಮತ್ತು ಆಮ್ಲಾ ನಡುವೆ 5,775 ರನ್‌ಗಳ ಅಂತರವಿದೆ. ಹೀಗಾಗಿ ವಿಸ್ಡನ್‌ ಗುರುತಿಸಿರುವ ದಶಕದ ಐವರು ಶ್ರೇಷ್ಠ ಕ್ರಿಕೆಟಿಗರಲ್ಲೂ ಕೊಹ್ಲಿ ಸ್ಥಾನಪಡೆದಿದ್ದಾರೆ. (ಸ್ಟೀವ್‌ ಸ್ಮಿತ್‌, ಡೇಲ್‌ ಸ್ಟೇನ್‌, ಎಬಿ ಡಿವಿಲಿಯರ್ಸ್, ಎಲ್ಲಿಸ್‌ ಪೆರ್ರಿ ಉಳಿದ ನಾಲ್ವರು)

ಉಳಿದಂತೆ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ (13,882), ದ.ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ (12,820) ಹಾಗೂ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (12,782‬) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿ ಇದ್ದಾರೆ. ಯಾವುದೇ ದಶಕದ ಅವಧಿಯಲ್ಲಿ ಆಡಿದ ವಿಶ್ವದ ಬೇರಾವ ಬ್ಯಾಟ್ಸ್‌ಮನ್‌ಗೆ ಕೊಹ್ಲಿಯಷ್ಟು ರನ್‌ ಪೇರಿಸಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಕಳೆದ ಜೂನ್‌ನಲ್ಲಿ ವಿಶ್ವಕಪ್‌ ಟೂರ್ನಿ ವೇಳೆ ವೇಗವಾಗಿ 20 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ದರು. ಅದಕ್ಕೂ ಮುನ್ನ ಈ ದಾಖಲೆ ಬ್ಯಾಟಿಂಗ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರಾ ಹೆಸರಿನಲ್ಲಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಕಲೆಹಾಕಲು ಕೊಹ್ಲಿ 417 ಇನಿಂಗ್ಸ್‌ಗಳನ್ನು ಆಡಿದ್ದರು. ಸಚಿನ್‌ ಮತ್ತು ಲಾರಾ ಅವರಿಗೆ 453 ಇನಿಂಗ್ಸ್‌ಗಳು ಬೇಕಾಗಿದ್ದವು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ 468 ಇನಿಂಗ್ಸ್‌ಗಳಲ್ಲಿ 20 ಸಾವಿರ ರನ್‌ ಗಳಿಸಿದ್ದರು.


ಸಚಿನ್‌ ತೆಂಡೂಲ್ಕರ್‌ (ಎಡ) ಮತ್ತು ಬ್ರಯನ್‌ ಲಾರಾ

ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಕಲೆಹಾಕಿದ ವಿಶ್ವದ 12ನೇ ಮತ್ತು ಭಾರತದ ಮೂರನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಕೊಹ್ಲಿಯದ್ದು.

ಈ ದಶಕದಲ್ಲಿ ಟೆಸ್ಟ್‌ ಹೊರತು ಪಡಿಸಿ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ದಾಖಲೆಯೂ ಕೊಹ್ಲಿಯ ಬೆನ್ನಿಗಿದೆ. ಏಕದಿನ ಕ್ರಿಕೆಟ್‌ನಲ್ಲಿ 11,125 ಮತ್ತು 2,633 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಸತತ 4ನೇ ವರ್ಷವೂ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ ಕೊಹ್ಲಿ

ಕೇವಲ ರನ್‌ ಗಳಿಕೆಯಲ್ಲಿ ಮಾತ್ರವಲ್ಲ ಶತಕ ಗಳಿಕೆಯಲ್ಲಿಯೂ ಮುಂದಿದ್ದಾರೆ. ಅವರು ಈ ದಶಕದಲ್ಲಿ ಒಟ್ಟು 69 (ಟೆಸ್ಟ್‌ ಕ್ರಿಕೆಟ್‌ನಲ್ಲಿ 27 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 42) ಸಲ ಮೂರಂಕಿ ದಾಟಿದ್ದಾರೆ. ಏಳು ದ್ವಿಶತಕಗಳೂ ಅವರ ಹೆಸರಲ್ಲಿವೆ. ಮಾತ್ರವಲ್ಲ ಅತಿಹೆಚ್ಚು (98) ಅರ್ಧಶತಕಗಳನ್ನು ಸಿಡಿಸಿದ ಖ್ಯಾತಿಯೂ ಅವರದು. ಟೆಸ್ಟ್‌ನಲ್ಲಿ 22, ಏಕದಿನದಲ್ಲಿ 52 ಹಾಗೂ ಟಿ20ಯಲ್ಲಿ 24 ಅರ್ಧಶತಕ ಗಳಿಸಿದ್ದಾರೆ.

47 (ಏಕದಿನದಲ್ಲಿ 26, ಟೆಸ್ಟ್‌ನಲ್ಲಿ 21) ಶತಕ ಗಳಿಸಿರುವ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಶತಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಮೂರನೇ ಸ್ಥಾನದಲ್ಲಿದ್ದಾರೆ. ಅವರು 40 (ಏಕದಿನದಲ್ಲಿ 17, ಟೆಸ್ಟ್‌ನಲ್ಲಿ 22, ಟಿ20ಯಲ್ಲಿ 1) ಸಲ ನೂರರ ಗಡಿ ದಾಟಿದ್ದಾರೆ.


ರೋಹಿತ್‌ ಶರ್ಮಾ

ಅರ್ಧಶತಕ ಗಳಿಕೆಯಲ್ಲಿ ರೋಹಿತ್‌ ಶರ್ಮಾಗೆ ಎರಡನೇ ಸ್ಥಾನ. ರೋಹಿತ್‌, ಟೆಸ್ಟ್‌ನಲ್ಲಿ 10, ಏಕದಿನದಲ್ಲಿ 39 ಹಾಗೂ ಟಿ20ಯಲ್ಲಿ 17 ಸೇರಿ ಒಟ್ಟು 70 ಅರ್ಧಶತಕ ಸಿಡಿಸಿದ್ದಾರೆ. 68 (ಏಕದಿನದಲ್ಲಿ 33, ಟೆಸ್ಟ್‌ 27, ಟಿ20ಯಲ್ಲಿ 8) ಅರ್ಧಶತಕ ಗಳಿಸಿರುವ ಆಮ್ಲಾ ಮೂರನೇ ಸ್ಥಾನದಲ್ಲಿದ್ದಾರೆ.

ಸತತ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿರುವ ವಿರಾಟ್‌, 2016, 2017, 2018ರಲ್ಲಿ ಮೂರು ಮಾದರಿಯ ಕ್ರಿಕೆಟ್‌ನಿಂದ ಕ್ರಮವಾಗಿ 2,595 ರನ್‌, 2,818 ರನ್‌, ಹಾಗೂ 2,735 ರನ್‌ ಗಳಿಸಿದ್ದರು. ಈ ವರ್ಷವೂ ಅದೇ ದಾಖಲೆ ಮುಂದುವರಿಸಿ 2,455 ರನ್‌ ಕಲೆಹಾಕಿದ್ದಾರೆ.

2020 ಸವಾಲಿನ ವರ್ಷ
ಸದ್ಯ ಐಸಿಸಿಯ ಏಕದಿನ ಮತ್ತು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ, 2020ರಲ್ಲೂ ರ‍್ಯಾಂಕಿಂಗ್ ಶ್ರೇಷ್ಠತೆ ಕಾಪಾಡಿಕೊಳ್ಳುವುದು ಸುಲಭವಲ್ಲ.

ಏಕದಿನ ಕ್ರಿಕೆಟ್‌ನಲ್ಲಿ 2019ರಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿರುವ ರೋಹಿತ್‌ ಶರ್ಮಾ ಹಾಗೂ ಪಾಕಿಸ್ತಾನದ ಯುವ ಆಟಗಾರ ಬಾಬರ್‌ ಅಜಂ, ಪೈಪೋಟಿ ನೀಡಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ 887 ಅಂಕ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್‌ 873 ಮತ್ತು ಮೂರನೇ ಸ್ಥಾನದಲ್ಲಿರುವ ಬಾಬರ್‌ 834 ಅಂಕ ಹೊಂದಿದ್ದಾರೆ.


ಮಾರ್ನಸ್‌ ಲಾಬುಶೇನ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಪರ್ಧೆಯೊಡ್ಡಲು ಆಸ್ಟ್ರೇಲಿಯಾದ ಮಾರ್ನಸ್‌ ಲಾಬುಶೇನ್‌ ( 2019ರಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ) ಮತ್ತು ಸ್ಟೀವ್‌ ಸ್ಮಿತ್‌ ಸಜ್ಜಾಗಿದ್ದಾರೆ. ಜೊತೆಗೆ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಇಂಗ್ಲೆಂಡ್‌ನ ಜೋ ರೂಟ್‌ ಕೂಡ ಇದ್ದಾರೆ.

ಟೆಸ್ಟ್‌ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಕೋಹ್ಲಿ ನಂ. 1 ಸ್ಥಾನದಲ್ಲಿದ್ದರೂ, ಎರಡನೇ ಸ್ಥಾನದಲ್ಲಿರುವ ಸ್ಮಿತ್‌ಗಿಂತ ಹೆಚ್ಚಿನ ಅಂತರದಲ್ಲೇನೂ ಇಲ್ಲ. ಸ್ಮಿತ್‌ ಖಾತೆಯಲ್ಲಿ 911 ಅಂಕಗಳಿವೆ. ಮೂರನೇ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್‌ (822) ಇದ್ದಾರೆ.

ಇದನ್ನೂ ಓದಿ: ದಿಟ್ಟ ಆಟಗಾರ ‘ಮಾರ್ನಸ್‌ ಲಾಬುಶೇನ್‌’

805 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಮಾರ್ನಸ್‌ ಲಾಬುಶೇನ್, ಕೊಹ್ಲಿಗೆ ಕಠಿಣ ಪೈಪೋಟಿ ನೀಡಬಲ್ಲರು. 2019ರ ಆರಂಭದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 110ನೇ ಕ್ರಮಾಂಕದಲ್ಲಿದ್ದ ಮಾರ್ನಸ್‌, ಕಳೆದ ವರ್ಷ ಆಡಿದ 11 ಟೆಸ್ಟ್‌ಗಳ 17 ಇನಿಂಗ್ಸ್‌ಗಳಿಂದ 1104 ರನ್‌ ಪೇರಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಅವರು ಇದೀಗ ಬರೋಬ್ಬರಿ 106 ಸ್ಥಾನಗಳ ಏರಿಕೆಯೊಂದಿಗೆ 4ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ಹೀಗಾಗಿ ಈ ಎಲ್ಲರೊಂದಿಗೆ ಸ್ಪರ್ಧಿಸುತ್ತಾ, ನಾಯಕತ್ವದ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸುವುದು ವಿರಾಟ್‌ ಕೊಹ್ಲಿಗೆ ಸವಾಲಿನ ಸಂಗತಿಯೇ ಸರಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು