ಬುಧವಾರ, ಫೆಬ್ರವರಿ 19, 2020
30 °C

ಬಾ..ಬಾ..; ಬೇಡ...ಬೇಡ: ಕಿವೀಸ್ ನೆಲದಲ್ಲಿ ಕನ್ನಡ ಮಾತಾಡಿ ಮನಗೆದ್ದ ರಾಹುಲ್–ಮನೀಷ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಂಟ್‌ ಮಾಂಗನೂಯಿ: ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆಡಿದ ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ಬ್ಯಾಟಿಂಗ್‌ ವೇಳೆ ಕನ್ನಡದಲ್ಲೇ ಸಂವಹನ ನಡೆಸಿದ ವಿಡಿಯೊ ಇದೀಗ ವೈರಲ್‌ ಆಗಿದೆ.

ರಾಹುಲ್‌ ಮತ್ತು ಪಾಂಡೆ ಆರನೇ ವಿಕೆಟ್‌ ಜೊತೆಯಾಟದಲ್ಲಿ 107 ರನ್‌ ಕೂಡಿಸಿದ್ದರು. ಈ ಜೊತೆಯಾಟದ ವೇಳೆ ಅವರು ಕನ್ನಡದಲ್ಲಿ ಮಾತನಾಡಿರುವುದು ಸ್ಟಂಪ್‌ಗೆ ಅಳವಡಿಸಿರುವ ಮೈಕ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: 21 ವರ್ಷಗಳ ಬಳಿಕ ದಾಖಲೆ ಬರೆದ ರಾಹುಲ್: ಧೋನಿಗೂ ಸಾಧ್ಯವಾಗಿರಲಿಲ್ಲ ಈ ಸಾಧನೆ!

ನ್ಯೂಜಿಲೆಂಡ್‌ನ ಪ್ರಮುಖ ಸ್ಪಿನ್ನರ್‌ ಮಿಚೇಲ್‌ ಸ್ಯಾಂಟನರ್ ಹಾಕಿದ 41ನೇ ಓವರ್‌ನ ಮೂರನೇ ಎಸೆತವನ್ನು ರಾಹುಲ್ ಕಟ್ ಮಾಡಿದರು. ಈ ವೇಳೆ ಅವರ ಬ್ಯಾಟಿಗೆ ತಾಗಿದ ಚೆಂಡು ಕೀಪರ್‌ ಬಳಿಯಿಂದ ಬೌಂಡರಿ ಗೆರೆಯತ್ತ ಸಾಗಿತು. ಫೀಲ್ಡರ್ ಅದನ್ನು ತಡೆಯುವ ಮುನ್ನ ಇಬ್ಬರೂ ಮೂರು ರನ್ ಕಬಳಿಸಿದರು.

ಈ ನಡುವೆ ಬಾ..ಬಾ..; ಹೌದು, ಓಡು ಇತ್ಯಾದಿ ಮಾತುಗಳು ಕೇಳಿಬಂದವು. ಹ್ಯಾಮಿಶ್‌ ಬೆನೆಟ್ ಅವರ 45ನೇ ಓವರ್‌ ನಡುವೆಯೂ ಕನ್ನಡ ಕೇಳಿಬಂತು.

ಈ ಪಂದ್ಯದಲ್ಲಿ ಶತಕ (112) ಸಿಡಿಸಿದ ರಾಹುಲ್‌, 21 ವರ್ಷಗಳ ಬಳಿಕ ಏಷ್ಯಾದಿಂದ ಹೊರಗೆ ಶತಕ ಗಳಿಸಿದ ಭಾರತದ ವಿಕೆಟ್‌ ಕೀಪರ್ ಎನಿಸಿಕೊಂಡರು. ಇಂಗ್ಲೆಂಡ್‌ನಲ್ಲಿ ನಡೆದಿದ್ದ 1999ರ ವಿಶ್ವಕಪ್‌ ಟೂರ್ನಿಯಲ್ಲಿ ರಾಹುಲ್‌ ದ್ರಾವಿಡ್‌ ಶತಕ ಬಾರಿಸಿದ್ದರು. ಟಾಂಟನ್‌ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 145 ರನ್‌ ಗಳಿಸಿದ್ದರು.

ಇದನ್ನೂ ಓದಿ: ಮತ್ತೆ ಮುಗ್ಗರಿಸಿದ ಭಾರತ: ಏಕದಿನ ಸರಣಿ ಕ್ಲೀನ್ ಸ್ವೀಪ್‌ ಸಾಧಿಸಿದ ಕಿವೀಸ್

ಆ ಬಳಿಕ ವಿದೇಶದಲ್ಲಿ ಆಡಿದ ಪಂದ್ಯಗಳಲ್ಲಿ ಶತಕ ಗಳಿಸಲು ಯಾವೊಬ್ಬ ಭಾರತೀಯ ವಿಕೆಟ್‌ ಕೀಪರ್‌ಗೂ ಸಾಧ್ಯವಾಗಿರಲಿಲ್ಲ. ದ್ರಾವಿಡ್‌ ಅವರೂ ಕನ್ನಡಿಗರೇ ಎಂಬುದು ವಿಶೇಷ.

ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಕೇದಾರ್‌ ಜಾಧವ್‌ ನಿರೀಕ್ಷಿತ ಪ್ರದರ್ಶನ ನೀಡವಲ್ಲಿ ವಿಫಲರಾಗಿದ್ದರು. ಹಾಗಾಗಿ ಮೂರನೇ ಪಂದ್ಯದಲ್ಲಿ ಸ್ಥಾನ ಪಡೆದ ಪಾಂಡೆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದರು. ಆರನೇ ಕ್ರಮಾಂಕದಲ್ಲಿ ಆಡಲಿಳಿದು 42 ರನ್‌ ಗಳಿಸಿ ಉಪಯುಕ್ತ ಕೊಡುಗೆ ನೀಡಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 296 ರನ್‌ ಗಳಿಸಿತ್ತು. ಕಿವಿಸ್‌ ಈ ಗುರಿಯನ್ನು ಕೇವಲ 5 ವಿಕೆಟ್‌ ಕಳೆದುಕೊಂಡು 47.1ನೇ ಓವರ್‌ನಲ್ಲಿ ಮುಟ್ಟಿತು. ಅದರೊಂದಿಗೆ ಮೂರೂ ಪಂದ್ಯಗಳನ್ನು ಗೆದ್ದ ಆತಿಥೇಯರು, ವಿರಾಟ್‌ ಕೊಹ್ಲಿ ಪಡೆ ಎದುರು ಕ್ಲೀನ್‌ ಸ್ವೀಪ್‌ ಸಾಧಿಸಿದರು.

ಇದನ್ನೂ ಓದಿ: ಕೊಹ್ಲಿ–ಬೂಮ್ರಾ ವಿಫಲ: 1989ರ ಬಳಿಕ ಮೊದಲ ಸಲ ವೈಟ್ ವಾಷ್ ಆದ ಭಾರತ

ದೂರದ ನ್ಯೂಜಿಲೆಂಡ್‌ನಲ್ಲಿ ಆಡುತ್ತಿರುವ ರಾಹುಲ್‌ ಮತ್ತು ಪಾಂಡೆ ಕನ್ನಡದಲ್ಲಿ ಮಾತನಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು