ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಬೆಳಗಾವಿಗೆ ಗೆಲುವಿನ ‘ದರ್ಶನ’

ಮನೀಷ್ ಪಾಂಡೆ ಅಬ್ಬರದ ಬ್ಯಾಟಿಂಗ್; ಬಸವಳಿದ ಬೆಂಗಳೂರು ಬ್ಲಾಸ್ಟರ್ಸ್
Last Updated 23 ಆಗಸ್ಟ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಅಂತೂ ಇಂತೂ ಬೆಳಗಾವಿ ಪ್ಯಾಂಥರ್ಸ್‌ ತಂಡಕ್ಕೆ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಮೊದಲ ಗೆಲುವಿನ ‘ದರ್ಶನ’ ಆಯಿತು.

ತಂಡದ ಮಧ್ಯಮವೇಗಿ ಎಂ.ಬಿ. ದರ್ಶನ್ (27ಕ್ಕೆ3) ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಿದ ಮನೀಷ್ ಪಾಂಡೆ (ಔಟಾಗದೆ 58; 30ಎಸೆತ, 4ಬೌಂಡರಿ, 4 ಸಿಕ್ಸರ್) ಅವರ ಆಟದಿಂದ ಬೆಳಗಾವಿ ತಂಡವು 8 ವಿಕೆಟ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಜಯಿಸಿತು.

ಟಾಸ್ ಗೆದ್ದ ಬೆಳಗಾವಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿಸ್ತಿನ ಬೌಲಿಂಗ್ ದಾಳಿ ಮಾಡಿದ ದರ್ಶನ್ (27ಕ್ಕೆ3) ಬೆಂಗಳೂರು ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಹಾಕಿದರು. ಬೆಂಗಳೂರಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 110 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಗುರಿ ಬೆನ್ನಟ್ಟಿದ ಬೆಳಗಾವಿ ತಂಡವು 11.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 115 ರನ್ ಗಳಿಸಿ ಗೆದ್ದಿತು. ಪಂದ್ಯ ಮುಗಿದಾಗ 49 ಎಸೆತಗಳು ಬಾಕಿ ಇದ್ದವು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮನೀಷ್ ಕೇವಲ 30 ಎಸೆತಗಳನ್ನು ಎದುರಿಸಿದರು. ಅದರಲ್ಲಿ ನಾಲ್ಕು ಅಮೋಘ ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನು ಸಿಡಿಸಿದರು.

ಎರಡು ದಿನಗಳ ಹಿಂದೆ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮನೀಷ್ ಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ತಂಡ ಗೆದ್ದಿರಲಿಲ್ಲ. ಬೆಳಗಾವಿಗೆ ಇದು ನಾಲ್ಕನೇ ಪಂದ್ಯ. ಒಟ್ಟು ಎರಡು ಸೋತಿದೆ. ಒಂದು ಮಳೆಯಿಂದಾಗಿ ರದ್ದಾಗಿದೆ.

ದರ್ಶನ್ ಮಿಂಚು: ಬೆಂಗಳೂರು ತಂಡದ ಬ್ಯಾಟಿಂಗ್ ಪಡೆಯು ದೊಡ್ಡ ಮೊತ್ತ ಗಳಿಸದಂತೆ ದರ್ಶನ್ ನೋಡಿಕೊಂಡರು. ಅವರಿಗೆ ಝಹೂರ್ ಫಾರೂಕಿ ಮತ್ತು ರಿತೇಶ್ ಭಟ್ಕಳ ತಲಾ ಎರಡು ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಬೆಂಗಳೂರಿನ ಬಿ.ಆರ್. ಶರತ್ (32; 29ಎಸೆತ, 5ಬೌಂಡರಿ), ನಾಯಕ ಆರ್ ಜೋನಾಥನ್ (29 ರನ್) ಮತ್ತು ನಿಕಿನ್ ಜೋಸ್ (21 ರನ್) ಅವರಿಗಷ್ಟೇ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಯಿತು. ದರ್ಶನ್ ಅವರು ಶರತ್, ಜೋನಾಥನ್ ಮತ್ತು ಮನೋಜ್ ಬಾಂಢಗೆ ವಿಕೆಟ್‌ಗಳನ್ನು ಕಬಳಿಸಿದರು.

ಕೊನೆ ದಿನವೂ ಖಾಲಿ: ಶುಕ್ರವಾರ ಕೆಪಿಎಲ್ ಟೂರ್ನಿಯ ಬೆಂಗಳೂರು ಲೆಗ್‌ ಮುಕ್ತಾಯವಾಯಿತು. ಕೊನೆಯ ದಿನದ ಪಂದ್ಯಗಳನ್ನು ವೀಕ್ಷಿಸಲು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದರು.

ಆಗಸ್ಟ್ 16ರಿಂದ ಇಲ್ಲಿ ನಡೆದ ಒಟ್ಟು 15 ಪಂದ್ಯಗಳಲ್ಲಿ ಬಹುತೇಕ ಗ್ಯಾಲರಿಗಳು ಖಾಲಿ ಉಳಿದವು. ಕೆಲವು ಪಂದ್ಯಗಳಿಗೆ ಫ್ರಾಂಚೈಸಿಗಳೇ ತಮ್ಮ ಅಭಿಮಾನಿಗಳನ್ನು ಕರೆತಂದಿದ್ದರು.

ಶನಿವಾರ ವಿಶ್ರಾಂತಿಯ ದಿನವಾಗಿದ್ದು ಭಾನುವಾರದಿಂದ ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 110 (ಬಿ.ಆರ್. ಶರತ್ 32, ಆರ್. ಜೋನಾಥನ್ 29, ನಿಕಿನ್ ಜೋಸ್ 21, ಝಹೂರ್ ಫಾರೂಕಿ 23ಕ್ಕೆ2, ಎಂ.ಬಿ. ದರ್ಶನ್ 27ಕ್ಕೆ3, ರಿತೇಶ್ ಭಟ್ಕಳ 7ಕ್ಕೆ2)

ಬೆಳಗಾವಿ ಪ್ಯಾಂಥರ್ಸ್: 11.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 115 (ದಿಕ್ಷಾಂಶು ನೇಗಿ 18, ಮನೀಷ್ ಪಾಂಡೆ ಔಟಾಗದೆ 58, ಅಭಿನವ್ ಮನೋಹರ್ ಔಟಾಗದೆ 22, ಮನೋಜ್ ಬಾಂಢಗೆ 29ಕ್ಕೆ1, ಭರತ್ ಧುರಿ 8ಕ್ಕೆ1)

ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್‌ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT