ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತಿಮ ಟೆಸ್ಟ್: ಸ್ಪಿನ್ ದಾಳಿಗೆ ಮುದುರಿದ ಇಂಗ್ಲೆಂಡ್‌

ಅಂತಿಮ ಟೆಸ್ಟ್: ಕುಲದೀಪ್‌ಗೆ 5 ವಿಕೆಟ್‌
Published 7 ಮಾರ್ಚ್ 2024, 19:41 IST
Last Updated 7 ಮಾರ್ಚ್ 2024, 21:20 IST
ಅಕ್ಷರ ಗಾತ್ರ

ಧರ್ಮಶಾಲಾ: ನಿರೀಕ್ಷೆಗೆ ಮೀರಿ ಧರ್ಮಶಾಲಾದಲ್ಲಿ ಇಡೀ ದಿನ ಹದವಾದ ಬಿಸಿಲು ಇತ್ತು. ಇಂಗ್ಲೆಂಡ್‌ ತಂಡ ಬಯಸಿದ್ದ ಚಳಿ ಇರದೇ ಹವಾಮಾನವೂ ಭಾರತದ ಪರ ಇತ್ತು. ಗುರುವಾರ ಆರಂಭವಾದ ಐದನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆರಂಭ ಆಟಗಾರರು ಭಾರತದ ವೇಗದ ದಾಳಿಯನ್ನು ನಿಭಾಯಿಸಿದರೂ, ಕುಲದೀಪ್ ಯಾದವ್ ನೇತೃತ್ವದಲ್ಲಿ ಸ್ಪಿನ್‌ತ್ರಯರು ದಾಳಿಗಿಳಿದ ನಂತರ ಇಂಗ್ಲೆಂಡ್‌ ಮುದುರಿತು.

ಈ ಪಂದ್ಯ ಕೆಲವರಿಗೆ ವಿಶೇಷವಾಗಿತ್ತು. ರವಿಚಂದ್ರನ್ ಅಶ್ವಿನ್ ಮತ್ತು ಜಾನಿ ಬೇಸ್ಟೊ 100ನೇ ಪಂದ್ಯದ ಸಂಭ್ರಮದಲ್ಲಿದ್ದರೆ, ಕನ್ನಡಿಗ ದೇವದತ್ತ ಪಡಿಕ್ಕಲ್ ಮೊದಲ ಟೆಸ್ಟ್‌ ಆಡಲು ಇಳಿದರು. ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಭಾರತದ ಐದನೇ ಆಟಗಾರ ಅವರು.

ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹಿಂದಿನ ಪಂದ್ಯಗಳಿಗಿಂತ ಇಲ್ಲಿ ಹೆಚ್ಚು ಸ್ವಿಂಗ್ ಪಡೆದರು. ಹಲವು ಬಾರಿ ಚೆಂಡು ಬ್ಯಾಟಿನಂಚಿಗೆ ಮುತ್ತಿಕ್ಕಿದರೂ ಅವು ಕ್ಯಾಚಾಗಲಿಲ್ಲ. ಜಾಕ್‌ ಕ್ರಾಲಿ (79, 108 ಎಸೆತ) ಮತ್ತು ಬೆನ್‌ ಡಕೆಟ್‌ (27) ಜೋಡಿಯನ್ನು  ಬೇರ್ಪಡಿಸಲು ವೇಗದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಆದರೆ ಕುಲದೀಪ್ ಯಾದವ್‌ (72ಕ್ಕೆ5) ಅವರನ್ನು ದಾಳಿಗಿಳಿಸಿದ್ದು, ನಿರೀಕ್ಷಿತ ಫಲನೀಡಿತು; ಅದೂ ಮೊದಲ ಓವರ್‌ನಲ್ಲಿ.

64 ರನ್‌ಗಳ ಜೊತೆಯಾಟದ ಬಳಿಕ, ಎಡಗೈ ಆಟಗಾರ ಡಕೆಟ್‌, ಚಿಮ್ಮಿದ ಚೆಂಡನ್ನು ಲೆಗ್‌ಸೈಡ್‌ಗೆ ಬೀಸಿ ಹೊಡೆಯಲು ಹೋದರು. ಆದರೆ ಬ್ಯಾಟಿನಂಚಿಗೆ ತಾಗಿದ ಚೆಂಡನ್ನು ಕವರ್ಸ್‌ನಲ್ಲಿದ್ದ ಶುಭಮನ್ ಗಿಲ್‌ ಹಿಂದಕ್ಕೆ ಓಡಿ ಡೈವ್‌ ಮಾಡಿ ಅಮೋಘವಾಗಿ ಹಿಡಿದರು. ಇದೇ ಓವರ್‌ನಲ್ಲಿ ಡಕೆಟ್‌ ಎರಡು ಬೌಂಡರಿ ಬಾರಿಸಿದ್ದರು. ಇದು ಕುಲದೀಪ್ ಮೊದಲ ವಿಕೆಟ್‌. ಈ ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಜೋ ರೂಟ್‌, ಜಡೇಜ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಅಶ್ವಿನ್‌ (51ಕ್ಕೆ4) ಕೊನೆಯ ನಾಲ್ಕು ವಿಕೆಟ್‌ ಬುಟ್ಟಿಗೆ ಹಾಕಿಕೊಂಡರು. ವಿಕೆಟ್‌ ಕಳೆದುಕೊಳ್ಳದೇ 64 ರನ್ ಗಳಿಸಿದ್ದ ಇಂಗ್ಲೆಂಡ್‌, ಚಹ ನಂತರ 16 ನಿಮಿಷಗಳಲ್ಲಿ 218 ರನ್ನಿಗೆ ಆಲೌಟಾಯಿತು.

ಯಶಸ್ವಿ ಜೈಸ್ವಾಲ್ (57, 58 ಎ, 5x4, 3x6) ಮತ್ತು ರೋಹಿತ್‌ ಶರ್ಮಾ (ಔಟಾಗದೇ 52, 83ಎ) ಅವರು ಇಂಗ್ಲೆಂಡ್‌ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದರು. ಭಾರತ 30 ಓವರುಗಳಲ್ಲಿ ಮೊತ್ತ 1 ವಿಕೆಟ್‌ಗೆ 135 ರನ್ ಗಳಿಸಿ ದಿನದಾಟ ಮುಗಿಸಿತು. ರೋಹಿತ್‌ ಜೊತೆ ಗಿಲ್ (ಔಟಾಗದೇ 39) ಎರಡನೇ ದಿನ ಆಟ ಮುಂದುವರಿಸಲಿದ್ದಾರೆ.

ಹಿಮಾಲಯ ಮಡಿಲಿನ ಈ ರಮಣೀಯ ತಾಣ 29 ವರ್ಷದ ಕುಲದೀಪ್ ಪಾಲಿಗೆ ಸವಿನೆನಪುಗಳ ಬುತ್ತಿ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ನಾಂದಿ ಹಾಡಿದ್ದ ಕುಲದೀಪ್ ಮೊದಲ ದಿನವೇ ನಾಲ್ಕು ವಿಕೆಟ್‌ ಪಡೆದು ಭಾರತದ ಗೆಲುವಿಗೆ ಮುನ್ನುಡಿ ಬರೆದಿದ್ದರು. ಈ ಸಲ ಇನ್ನೂ ಉತ್ತಮ ಪ್ರದರ್ಶನ ನೀಡಿದ್ದು, ಭಾರತಕ್ಕೆ 4–1 ಸರಣಿ ಜಯದ ಕನಸು ಬಿತ್ತಿದ್ದಾರೆ.

ಇಂಗ್ಲೆಂಡ್‌ ಒಂದು ವಿಕೆಟ್‌ಗೆ 100 ರನ್‌ಗಳೊಡನೆ ಲಂಚ್‌ಗೆ ಹೋಗುವಂತೆ ಕಂಡಿತ್ತು. ಆದರೆ ಓಲಿ ಪೋಪ್, ಕುಲದೀಪ್ ಬೌಲಿಂಗ್‌ನಲ್ಲಿ ಹೊಡೆತಕ್ಕೆ ಮುನ್ನುಗ್ಗಿದರು. ಗೂಗ್ಲಿ ಆಗಿದ್ದ ಎಸೆತವನ್ನು ವಿಕೆಟ್‌ ಕೀಪರ್ ಜುರೆಲ್ ಹಿಡಿದು ತಕ್ಷಣ ಬೇಲ್ಸ್ ಉರುಳಿಸಿದರು.

ಸರಣಿಯಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್‌ ಗಳಿಸಿರುವ ಕ್ರಾಲಿ, ಭೋಜನ ವಿರಾಮದ ನಂತರ ಹೆಚ್ಚುಕಾಲ ಉಳಿಯಲಿಲ್ಲ. ಕುಲದೀಪ್ ಎಸೆತದಲ್ಲಿ ಡ್ರೈವ್ ಮಾಡಲು ಯತ್ನಿಸಿದರು; ಆದರೆ ನಿರೀಕ್ಷೆ ಮೀರಿ ತಿರುಗಿದ ಚೆಂಡು ಬೇಲ್ಸ್‌ ಉರುಳಿಸಿತು. ಅಲ್ಪಾವಧಿಯಲ್ಲೇ ಆಕ್ರಮಣಕಾರಿ ಆಟವಾಡಿದ ಬೇಸ್ಟೊ (29, 18ಎಸೆತ) ಇನ್ನೊಂದು ಗೂಗ್ಲಿಗೆ ವಿಕೆಟ್ ತೆರಬೇಕಾಯಿತು. ಬೇಸ್ಟೊ ರಿವ್ಯೂ ಕೇಳಿದರೂ, ಮರುಪ್ರಸಾರದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್ ಆಗಿರುವುದು ಸ್ಪಷ್ಟವಾಗಿತ್ತು. ರೂಟ್‌ ನಿರ್ಗಮನದೊಡನೆ ಇಂಗ್ಲೆಂಡ್‌ನ ಅರ್ಧದಷ್ಟು ಮಂದಿ ವಾಪಸಾಗಿದ್ದರು. ನಂತರ  ಬಾಲಂಗೋಚಿಗಳ ವಿಕೆಟ್‌ಗಳು ಅಶ್ವಿನ್ ಪಾಲಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT