ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ನಾಲ್ಕು ತಾಸು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಕುಲದೀಪ್ ಯಾದವ್

Last Updated 8 ಜೂನ್ 2020, 19:30 IST
ಅಕ್ಷರ ಗಾತ್ರ

ಲಖನೌ: ಭಾರತದ ಎಡಗೈ ಸ್ಪಿನ್ನರ್ ಮತ್ತು ಚೈನಾಮನ್ ಪರಿಣಿತ ಬೌಲರ್ ಕುಲದೀಪ್ ಯಾದವ್ ಈಗ ನಿತ್ಯವೂ ನಾಲ್ಕು ತಾಸು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರಂತೆ. ಇಷ್ಟು ಮಾತ್ರವಲ್ಲ, ಚೆಂಡಿಗೆ ಎಂಜಲು ತಾಗಿಸುವ ಅಭ್ಯಾಸದಿಂದ ಹೊರಬರಲು ಪ್ರಯತ್ನಿಸುತ್ತಿರುವುದಾಗಿಯೂ ಹೇಳಿದ್ದಾರೆ.

‌ಕೊರೊನಾ ಹಾವಳಿ ನಿಯಂತ್ರಿಸಲು ಹೇರಲಾಗಿದ್ದ ಲಾಕ್‌ಡೌನ್ ಸಡಿಲಿಕೆ ಆಗುತ್ತಿದ್ದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಆಟಗಾರರಿಗೆ ತಾವಿದ್ದಲ್ಲಿಯೇ ಕೌಶಲ್ಯ ವೃದ್ಧಿಸುವ ಅಭ್ಯಾಸ ಆರಂಭಿಸುವಂತೆ ಸೂಚಿಸಿತ್ತು. ಈ ಸೂಚನೆ ಸಿಗುತ್ತಿದ್ದಂತೆ ನೆಟ್ಸ್‌ ಕಡೆಗೆ ಹೆಜ್ಜೆ ಹಾಕಿದ ಕುಲದೀಪ್ ಯಾದವ್ ತಮ್ಮ ಬಾಲ್ಯದ ಕೋಚ್‌ ಕಪಿಲ್ ಪಾಂಡೆ ಬಳಿ ತರಬೇತಿ ಪಡೆಯಲು ಆರಂಭಿಸಿದ್ದಾರೆ. ಬಾಲ್ಯದಲ್ಲಿ ಕ್ರಿಕೆಟ್ ಕೌಶಲಗಳನ್ನು ಕಳೆದ ರೋವರ್ಸ್ ಮೈದಾನದಲ್ಲಿ ಅವರು ಬೆವರು ಹರಿಸುತ್ತಿದ್ದಾರೆ.

‘ಲಾಲ್ ಬಾಂಗ್ಲಾ ಪ್ರದೇಶದ ರೋವರ್ಸ್ ಕ್ರೀಡಾಂಗಣದಲ್ಲಿ ನಾನು ಬಾಲ್ಯದ ದಿನಗಳಲ್ಲಿ ಬೌಲಿಂಗ್ ಕಲಿತಿದ್ದೆ. ಈಗ ದಿನದ ಎರಡು ಅವಧಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಬೆಳಿಗ್ಗೆ 7.30ರಿಂದ ಒಂಬತ್ತು ಗಂಟೆಯ ವರೆಗೆ ದೈಹಿಕ ಕಸರತ್ತಿಗೆ ಒತ್ತು ನೀಡುತ್ತಿದ್ದೇನೆ. ಸಂಜೆ ನಾಲ್ಕರಿಂದ ರಾತ್ರಿ ಎಂಟು ಗಂಟೆಯ ವರೆಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತೇನೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿ ಒಂದು ವಾರವಾಗಿದೆಯಷ್ಟೆ. ಅದಕ್ಕೂ ಮೊದಲು ಮನೆಯಲ್ಲೇ ಇದ್ದು ಲಾಕ್‌ಡೌನ್‌ ನಿರ್ದೇಶನಗಳನ್ನು ಪಾಲಿಸುತ್ತಿದ್ದೆ. ಮುಂದಿನ ಕೆಲವೇ ವಾರಗಳಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಾನು ಸಜ್ಜುಗೊಳ್ಳಲಿದ್ದೇನೆ’ ಎಂದು ಆರು ಟೆಸ್ಟ್‌, 60 ಏಕದಿನ ಮತ್ತು 21 ಟಿ–20 ಪಂದ್ಯಗಳನ್ನು ಆಡಿರುವ ಕುಲದೀಪ್ ಭರವಸೆ ವ್ಯಕ್ತಪಡಿಸಿದರು.

‘ಚೆಂಡಿಗೆ ಎಂಜಲು ಹಚ್ಚುವ ಅಭ್ಯಾಸ ಬಿಡಲು ಬಹಳ ಕಷ್ಟವಾಗುತ್ತಿದೆ. ಬಾಲ್ಯದಿಂದಲೇ ಇದು ರೂಢಿಯಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನಿರ್ದೇಶನ ಪಾಲಿಸಲು ಈಗ ಪ್ರಯತ್ನಿಸುತ್ತಿದ್ದೇನೆ’ ಎಂದು 25 ವರ್ಷದ ಕುಲದೀಪ್ ತಿಳಿಸಿದರು.

‘ಈಗ, ಬೌಲರ್‌ಗಳು ತರಬೇತಿ ಸಂದರ್ಭದಲ್ಲೇ ಎಂಜಲಿನ ಸಹವಾಸ ಬಿಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಈ ಅಭ್ಯಾಸವನ್ನು ಬಿಡಲು ಸಾಧ್ಯ. ಮುಂದಿನ ದಿನಗಳಲ್ಲಿ ಚೆಂಡಿಗೆ ಹೊಳಪು ನೀಡಲು ಪರ್ಯಾಯ ಪದಾರ್ಥ ಬಳಕೆಗೆ ಬರುವ ಸಾಧ್ಯತೆ ಇದೆ’ ಎಂದು ಮೂರೂ ಮಾದರಿಗಳಲ್ಲಿ ಒಟ್ಟು 167 ವಿಕೆಟ್ ಕಬಳಿಸಿರುವ ಅವರು ಹೇಳಿದರು.

ಚುಟುಕು ಕ್ರಿಕೆಟ್‌ಗೆ ಆದ್ಯತೆ; ಆದರೆ ಈಗ ಅಲ್ಲ
ಸ್ಪರ್ಧಾತ್ಮಕ ಕ್ರಿಕೆಟ್ ಪುನರಾರಂಭಗೊಂಡ ನಂತರ ಯಾವ ಮಾದರಿಯಲ್ಲಿ ಆಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ ಚುಟುಕು ಕ್ರಿಕೆಟ್‌ಗೆ ಅದರಲ್ಲೂ ಐಪಿಎಲ್‌ಗೆ ಆದ್ಯತೆ ನೀಡುವುದಾಗಿ ಅವರು ಅಭಿಪ್ರಾಯಪಟ್ಟರು. ಆದರೆ ಸದ್ಯ ರಾಷ್ಟ್ರವು ಕೊರೊನಾ ಹಾವಳಿಯಿಂದ ತತ್ತರಿಸಿರುವುದರಿಂದ ಕ್ರಿಕೆಟ್‌ ಆದ್ಯತೆಯ ವಿಷಯ ಅಲ್ಲ ಎಂದು ಕೂಡ ಹೇಳಿದರು.

‘ದೇಶದಾದ್ಯಂತ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಇದ್ದಾರೆ. ದೆಹಲಿ ಮತ್ತು ಮುಂಬೈಯಲ್ಲಂತೂ ಅವರ ಕಷ್ಟ ಹೇಳತೀರದು. ಜನರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಸಾಹಸಪಡುತ್ತಿರುವಾಗ ನಾವು ಕ್ರೀಡೆಯ ಬಗ್ಗೆ ಯೋಚಿಸುವುದು ಸರಿಯಲ್ಲ. ಸಂಕಟಪಡುತ್ತಿರುವವರಿಗೆ ಸಹಾಯಹಸ್ತ ಚಾಚಬೇಕಾದ ಕಾಲ ಇದು. ನಾನು ಕೆಲವು ಸ್ವಯಂಸೇವಾ ಸಂಸ್ಥೆಗಳ ಜೊತೆಗೂಡಿ ನನ್ನೂರು ಕಾನ್ಪುರದ ಜನರಿಗಾಗಿ ನೆರವು ನೀಡುತ್ತಿದ್ದೇನೆ’ ಎಂದು ಕುಲದೀಪ್ ಯಾದವ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT