ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಲು ಹಚ್ಚುವುದನ್ನು ನಿಷೇಧಿಸಿ:ಐಸಿಸಿ ಕ್ರಿಕೆಟ್‌ ಸಮಿತಿ ಶಿಫಾರಸು

ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್‌ ಸಮಿತಿಯ ಶಿಫಾರಸು
Last Updated 18 ಮೇ 2020, 21:33 IST
ಅಕ್ಷರ ಗಾತ್ರ

ನವದೆಹಲಿ : ಕ್ರಿಕೆಟ್‌ ಪಂದ್ಯದ ವೇಳೆ ಚೆಂಡಿನ ಹೊಳಪಿಗಾಗಿ ಎಂಜಲು ಹಚ್ಚುವುದನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಅನಿಲ್‌ ಕುಂಬ್ಳೆ ನೇತೃತ್ವದ ಕ್ರಿಕೆಟ್‌ ಸಮಿತಿಯು, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ಸಲಹೆ ನೀಡಿದೆ.

ಸೋಮವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನ ವೇಳೆ ಐಸಿಸಿ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಪೀಟರ್‌ ಹಾರ್ಕೋರ್ಟ್‌ ಅವರು ಚೆಂಡಿನ ಮೇಲೆ ಎಂಜಲು ಹಚ್ಚುವುದರಿಂದ ಆಗುವ ಅಪಾಯದ ಕುರಿತು ವಿವರಿಸಿದರು. ಬಳಿಕ ಎಲ್ಲರೂ ಎಂಜಲು ಹಚ್ಚುವ ಪದ್ಧತಿಗೆ ತಿಲಾಂಜಲಿ ಇಡಲು ಒಕ್ಕೊರಲಿನಿಂದ ಸಮ್ಮತಿಸಿದರು.

‘ನಾವೀಗ ಸಂದಿಗ್ಧತೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲವೊಂದು ಶಿಫಾರಸುಗಳನ್ನು ಮಾಡಿದ್ದೇವೆ. ಚೆಂಡಿನ ಮೇಲೆ ಎಂಜಲು ಲೇಪಿಸುವುದರಿಂದ ಕೊರೊನಾ ವೈರಸ್‌ನ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಈ ಪದ್ಧತಿಗೆ ತಿಲಾಂಜಲಿ ಇಡಬೇಕೆಂದು ಸೂಚಿಸಿದ್ದೇವೆ’ ಎಂದು ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬೌಲರ್‌ಗಳು ಚೆಂಡಿನ ಹೊಳಪಿಗಾಗಿ ಬೆವರು ಹಚ್ಚಬಹುದು. ಅದಕ್ಕೆ ಅಭ್ಯಂತರವೇನೂ ಇಲ್ಲ. ಅದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ಇಲ್ಲ’ ಎಂದಿದ್ದಾರೆ.

ಈ ಹಿಂದೆ ಪ್ರತಿ ಇನಿಂಗ್ಸ್‌ನಲ್ಲಿ ತಂಡವೊಂದಕ್ಕೆ ಗರಿಷ್ಠ ಎರಡು ಡಿಆರ್‌ಎಸ್‌ (ತೀರ್ಪು ಮರುಪರಿಶೀಲನಾ ಪದ್ಧತಿ) ಅವಕಾಶಗಳನ್ನು ನೀಡಲಾಗುತ್ತಿತ್ತು. ಇದನ್ನು ಮೂರಕ್ಕೆ ಹೆಚ್ಚಿಸಬೇಕೆಂದೂ ಸಮಿತಿ ಸಲಹೆ ನೀಡಿದೆ.

ಕೊರೊನಾ ಬಿಕ್ಕಟ್ಟಿನ ಕಾರಣ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಯನ್ನು ಸೀಲ್‌ಡೌನ್‌ ಮಾಡಿವೆ. ಜೊತೆಗೆ ಅಂತರರಾಷ್ಟ್ರೀಯ ವಿಮಾನಯಾನದ ಮೇಲೂ ನಿರ್ಬಂಧ ಹೇರಿವೆ. ಹೀಗಾಗಿ ಇನ್ನು ಮುಂದೆ ದ್ವಿಪಕ್ಷೀಯ ಸರಣಿಗಳ ವೇಳೆ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳೀಯ ಅಂಪೈರ್‌ಗಳನ್ನೇ ನೇಮಿಸಬೇಕು ಎಂದೂ ಕುಂಬ್ಳೆ ನೇತೃತ್ವದ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT