ಭಾನುವಾರ, ಮಾರ್ಚ್ 7, 2021
30 °C
ನೆನಪಿನಾಳಕ್ಕೆ ಇಳಿದ ವೆಸ್ಟ್‌ ಇಂಡೀಸ್‌ ಕ್ರಿಕೆಟ್ ದಿಗ್ಗಜ ಲಾರಾ

213 ರನ್‌ಗಳ ಆ ಇನಿಂಗ್ಸ್‌ ಶ್ರೇಷ್ಠ: ಬ್ರಯಾನ್‌ ಲಾರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವಿ ಮುಂಬೈ: ಆಸ್ಟ್ರೇಲಿಯಾವನ್ನು 1999ರ ಆ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಸೋಲಿಸಲಿದೆ ಎಂದು ತಮ್ಮ ಸ್ನೇಹಿತನೊಬ್ಬ ಭವಿಷ್ಯ ನುಡಿದಾಗ ಬ್ರಯಾನ್‌ ಲಾರಾ ಅವರಿಗೆ ನಂಬಿಕೆ ಬಂದಿರಲಿಲ್ಲ. ಅವರು ಮಾದಕ ವಸ್ತುಗಳಿಗೆ ಪ್ರಸಿದ್ಧವಾದ ಜಮೈಕಾದ ‘ಮರೈವಾನಾ’ ಪ್ರಭಾವದಲ್ಲಿದ್ದಾರೆಂದು ಭಾವಿಸಿದ್ದರು.

ಆದರೆ ಸ್ನೇಹಿತನ ಭವಿಷ್ಯ ಸುಳ್ಳಾ ಗಲಿಲ್ಲ. ಆ ಸರಣಿಯಲ್ಲಿ ನಾಯಕನಾಗಿದ್ದ ಲಾರಾ ಮುಂಚೂಣಿಯಲ್ಲಿ ನಿಂತು 213 ರನ್‌ ಬಾರಿಸಿ ಸಂಕಟದಲ್ಲಿದ್ದ ತಮ್ಮ ತಂಡಕ್ಕೆ ನಂಬಲಸಾಧ್ಯವಾದ ರೀತಿಯಲ್ಲಿ ಗೆಲುವು ತಂದುಕೊಟ್ಟಿದ್ದರು.

ಆಡಿರುವ ಹಲವು ಅಮೋಘ ಇನಿಂಗ್ಸ್‌ಗಳ ಪೈಕಿ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಗಳಿಸಿದ 213 ರನ್‌ಗಳ ಇನಿಂಗ್ಸ್‌ ಅತಿ ಶ್ರೇಷ್ಠ ಎಂದು ಗುರುವಾರ ಲಾರಾ ಅಭಿಪ್ರಾಯಪಟ್ಟರು.

ಕಾಂಗರೂಗಳ ವಿರುದ್ಧವೇ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಗಳಿಸಿದ 277, ಬಾರ್ಬಡೋಸ್‌ನಲ್ಲಿ ಗಳಿಸಿದ 153 ರನ್‌ಗಳ ಅಮೋಘ ಇನಿಂಗ್ಸ್‌ಗಿಂತ, ಜಮೈಕಾದ ಆ ಇನಿಂಗ್ಸ್‌ ಸ್ಮರಣೀಯ ಎಂದಿದ್ದಾರೆ. ಸಿಡ್ನಿಯಲ್ಲಿ ಗಳಿಸಿದ 277 ರನ್‌ಗಳ ಆ ಇನಿಂಗ್ಸ್‌ ಕ್ರಿಕೆಟ್‌ ಜಗತ್ತಿಗೆ ಈ ಪ್ರತಿಭಾನ್ವಿತ ಆಟಗಾರನ ಆಗಮನವನ್ನು ಸಾರಿತ್ತು. ಲಾರಾ ತಮ್ಮ ಮಗಳಿಗೂ ಈ ಮೈದಾನದ ಹೆಸರನ್ನೇ (ಸಿಡ್ನಿ) ಇಟ್ಟಿದ್ದರು.

ಇಂಗ್ಲೆಂಡ್‌ ವಿರುದ್ಧ ಗಳಿಸಿದ ಭರ್ಜರಿ 375 ಮತ್ತು ಅಜೇಯ 400 ರನ್‌ಗಳ ಇನಿಂಗ್ಸ್‌ ಕೂಡ ಅವರಿಗೆ ಅಷ್ಟೊಂದು ಸಂತೃಪ್ತಿ ತಂದಿಲ್ಲ. ‘ಪ್ರತಿಕೂಲ ಪರಿಸ್ಥಿತಿಯಲ್ಲಿ ಆ ಇನಿಂಗ್ಸ್‌ ಬಂದಿತ್ತು. ನನ್ನ ತಲೆದಂಡ ಹತ್ತಿರವಿರುವಾಗಲೇ ನಾನು ಆ ಇನಿಂಗ್ಸ್‌ (213) ಆಡಿದ್ದೆ. ನನ್ನ ಸ್ಥಾನ ಅಲುಗಾಡುತಿತ್ತು. ನನ್ನನ್ನು ಕಿತ್ತುಹಾಕಲು ಆಯ್ಕೆದಾರರು ಕಾಯುತ್ತಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

 ‘ಆ ಇನಿಂಗ್ಸ್‌ ನನ್ನ ಸಾಮರ್ಥ್ಯ ಏನೆಂದು ಸಾಬೀತುಪಡಿಸಿತು. ಆದು ಸೊಗಸಾದ ಇನಿಂಗ್ಸ್‌ ಆಗಿರಲಿಕ್ಕಿಲ್ಲ. ಆದರೆ ಅದು ನನ್ನ ಕ್ರಿಕೆಟ್‌ ಜೀವನದ ಅತಿ ಶ್ರೇಷ್ಠ ಇನಿಂಗ್ಸ್ ಆಗಿತ್ತು. ವಾರದ ನಂತರ ನನ್ನನ್ನು ಆ ವರ್ಷದ ಉಳಿದ ಸರಣಿಗಳಿಗೆ ನಾಯಕನಾಗಿ ಮುಂದುವರಿಸಿದರು. ವಾರಕ್ಕೆ ಮೊದಲು 153 ರನ್‌ಗಳ (ಬಾರ್ಬಡೋಸ್‌ನಲ್ಲಿ) ಆಟವಾಡಿದ್ದೆ. ಆದರೆ 213 ರನ್‌ಗಳ ಆ ಆಟ ಉನ್ನತವಾದುದು’ ಎಂದರು.

ಡಿ.ವೈ. ಪಾಟೀಲ ವಿಶ್ವವಿದ್ಯಾಲಯದಿಂದ ತಮಗೆ ಡಾಕ್ಟರೇಟ್‌ ಆಫ್‌ ಸೈನ್ಸ್‌ ಪದವಿ ಪ್ರದಾನ ಮಾಡಿದ ನಂತರ ಲಾರಾ ಅವರು ಮಾತನಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು