ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರಿಗಿದು ಕೊನೆಯ ಒಲಿಂಪಿಕ್ಸ್‌

Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದಶಕಗಳ ಕಾಲ ಕ್ರೀಡಾ ಲೋಕವನ್ನು ಆಳಿದ ಹಲವು ತಾರೆಯರು ಈಗ ನಿವೃತ್ತಿಯ ಅಂಚಿಗೆ ಬಂದು ನಿಂತಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ಇವರು ಈಗ ಒಲಿಂಪಿಕ್ಸ್‌ ಪದಕದತ್ತ ಕಣ್ಣಿಟ್ಟಿದ್ದಾರೆ. ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯುವ ‘ಕ್ರೀಡಾ ಹಬ್ಬ’ ಇವರ ಪಾಲಿಗೆ ಕೊನೆಯದ್ದು. ಅಂತಹ ಕೆಲ ಸಾಧಕರ ಬಗ್ಗೆ ಜಿ.ಶಿವಕುಮಾರ ಬರೆದಿದ್ದಾರೆ.

1) ಲಿಯಾಂಡರ್‌ ಪೇಸ್‌

ವಯಸ್ಸು: 46

ಗ್ರ್ಯಾನ್‌ಸ್ಲಾಮ್‌ನಲ್ಲಿ 18 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಪೇಸ್‌ ಅವರದ್ದು. ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಜಯಿಸಿದ ವಿಶ್ವದ ಏಕೈಕ ಆಟಗಾರ ಇವರು.

1991ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಪೇಸ್‌, ಮರು ವರ್ಷವೇ (1992ರ ಬಾರ್ಸಿಲೋನಾ) ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದರು. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದರು. ಸತತ ಏಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಏಕೈಕ ಟೆನಿಸ್‌ ತಾರೆ ಎಂಬ ಹೆಗ್ಗಳಿಕೆ ಹೊಂದಿರುವ ಪೇಸ್‌, ಟೋಕಿಯೊ ಕೂಟದಲ್ಲೂ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. 2020 ನನ್ನ ಪಾಲಿಗೆ ವಿದಾಯದ ವರ್ಷ ಎಂದು ಹೇಳಿದ್ದ ಅವರು, ಒಲಿಂಪಿಕ್ಸ್‌ ಮುಂದೂಡಿರುವ ಕಾರಣ ಮತ್ತೊಂದು ವರ್ಷ ಟೆನಿಸ್‌ ಆಡಲು ತೀರ್ಮಾನಿಸಿದ್ದಾರೆ.

2) ಮೇರಿ ಕೋಮ್‌

ವಯಸ್ಸು: 37

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಸೇರಿದಂತೆ ಒಟ್ಟು ಎಂಟು ಪದಕಗಳನ್ನು ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿರುವ ಬಾಕ್ಸರ್‌ ಮೇರಿ ಕೋಮ್‌.

ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ (2014ರ ಇಂಚೆನ್‌) ಭಾರತದ ಏಕೈಕ ಬಾಕ್ಸರ್‌ ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ ಮಣಿಪುರದ ಮೇರಿ ಈಗ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. 2016ರ ರಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆಯಲು ವಿಫಲರಾಗಿದ್ದರು.‌

3) ರೋಹನ್‌ ಬೋಪಣ್ಣ

ವಯಸ್ಸು: 40

ಕರ್ನಾಟಕದ ರೋಹನ್‌, 2012ರ ಲಂಡನ್‌ ಹಾಗೂ 2016ರ ರಿಯೊ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದರು. ಹೀಗಿದ್ದರೂ ಅವರಿಗೆ ಪದಕ ಕೈಗೆಟುಕದಾಗಿದೆ. ಟೋಕಿಯೊದಲ್ಲಿ ಅಪೂರ್ವ ಆಟ ಆಡಿ ಈ ಕೊರಗು ನೀಗಿಸಿಕೊಳ್ಳಲು ಅವರು ಕಾತರರಾಗಿದ್ದಾರೆ.

ಗ್ರ್ಯಾನ್‌ಸ್ಲಾಮ್‌ನಲ್ಲಿ ಒಮ್ಮೆ ಪ್ರಶಸ್ತಿ ಗೆದ್ದಿರುವ ರೋಹನ್‌, 2018ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.

4) ರೋಜರ್‌ ಫೆಡರರ್‌

ವಯಸ್ಸು: 38

ಟೆನಿಸ್‌ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಫೆಡರರ್‌ ಕೂಡ ಒಬ್ಬರು. ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ 20 ಕಿರೀಟಗಳನ್ನು ಮುಡಿಗೇರಿಸಿಕೊಂಡ ಅಪ್ರತಿಮ ಸಾಧಕ ಇವರು.

ಸ್ವಿಟ್ಜರ್ಲೆಂಡ್‌ನ ಈ ಆಟಗಾರ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಸ್ಟಾನಿಸ್ಲಾಸ್‌ ವಾವ್ರಿಂಕ ಜೊತೆ ಆಡಿದ್ದರು. ಕೂಟದಲ್ಲಿ ಈ ಜೋಡಿಯಿಂದ ಚಿನ್ನದ ಪದಕದ ಸಾಧನೆ ಅರಳಿತ್ತು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲೂ ಕಣಕ್ಕಿಳಿದಿದ್ದ ರೋಜರ್‌, ಸಿಂಗಲ್ಸ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಗಾಯದ ಕಾರಣ ರಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದ ಫೆಡರರ್, ಟೋಕಿಯೊದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಹುಮ್ಮಸ್ಸಿನಲ್ಲಿದ್ದಾರೆ.

5) ಸೆರೆನಾ ವಿಲಿಯಮ್ಸ್‌

ವಯಸ್ಸು: 38

ಅಮೆರಿಕದ ಸೆರೆನಾ ಖಾತೆಯಲ್ಲಿ ಈಗಾಗಲೇ ನಾಲ್ಕು ಒಲಿಂಪಿಕ್ಸ್‌ ಚಿನ್ನದ ಪದಕಗಳಿವೆ.

ಮಹಿಳೆಯರ ಡಬಲ್ಸ್‌ನಲ್ಲಿ ಸಹೋದರಿ ವೀನಸ್‌ ವಿಲಿಯಮ್ಸ್‌ ಜೊತೆ ಮೂರು ಬಾರಿ (2000, 2008 ಮತ್ತು 2012) ಚಿನ್ನದ ಪದಕ ಜಯಿಸಿದ್ದರು.

ಮಹಿಳಾ ಸಿಂಗಲ್ಸ್‌ನಲ್ಲೂ ಚಿನ್ನದ ಪದಕ ಅವರ ಕೊರಳಿಗೇರಿದೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

6) ಜಸ್ಟಿನ್‌ ಗ್ಯಾಟ್ಲಿನ್‌

ವಯಸ್ಸು: 38

ಅಥ್ಲೆಟಿಕ್ಸ್‌ ವಲಯದಲ್ಲಿ ‘ಬ್ಯಾಡ್‌ ಬಾಯ್‌’ ಎಂದೇ ಕರೆಯಲ್ಪಡುವ ಜಸ್ಟಿನ್‌, ಟೋಕಿಯೊ ಒಲಿಂಪಿಕ್ಸ್‌ ಬಳಿಕ ನಿವೃತ್ತಿ ಪ್ರಕಟಿಸುವುದಾಗಿ ಈಗಾಗಲೇ ಹೇಳಿದ್ದಾರೆ.

2004ರ ಅಥೆನ್ಸ್‌ ಒಲಿಂಪಿಕ್ಸ್‌ನ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಗ್ಯಾಟ್ಲಿನ್‌, 4X100 ಮೀಟರ್ಸ್‌ ರಿಲೆಯಲ್ಲಿ ಬೆಳ್ಳಿ ಗೆದ್ದ ಅಮೆರಿಕ ತಂಡದಲ್ಲೂ ಇದ್ದರು. ಒಲಿಂಪಿಕ್ಸ್‌ನಲ್ಲಿ ಒಟ್ಟು ಐದು ಪದಕಗಳನ್ನು ಜಯಿಸಿರುವ ಹಿರಿಮೆ ಇವರದ್ದಾಗಿದೆ.

7) ಅಲಿಸನ್‌ ಫೆಲಿಕ್ಸ್‌

ವಯಸ್ಸು: 34

ಒಲಿಂಪಿಕ್ಸ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದ ಏಕೈಕ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ ಎಂಬ ಹೆಗ್ಗಳಿಕೆ ಫೆಲಿಕ್ಸ್‌ ಅವರದ್ದು. ಅಮೆರಿಕದ ಈ ತಾರೆಯ ಖಾತೆಯಲ್ಲಿ ಒಟ್ಟು ಒಂಬತ್ತು ಒಲಿಂಪಿಕ್ಸ್‌ ಪದಕಗಳಿವೆ.

ಇಷ್ಟಾದರೂ ಇವರ ಪದಕದ ದಾಹ ನೀಗಿಲ್ಲ. ಟೋಕಿಯೊ ಕೂಟದಲ್ಲೂ ಪ್ರಾಬಲ್ಯ ಮೆರೆಯುವ (200 ಮತ್ತು 400 ಮೀಟರ್ಸ್‌ ಓಟ; 4X100 ಹಾಗೂ 4X400 ಮೀಟರ್ಸ್‌ ರಿಲೆ) ತವಕದಲ್ಲಿರುವ ಇವರು ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಠಿಣ ತಾಲೀಮು ನಡೆಸುತ್ತಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇವರು 13 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT