ಶುಕ್ರವಾರ, ನವೆಂಬರ್ 27, 2020
19 °C

ರಬಾಡ ಮೇಲೆ ಮಂಡೇಲಾ ಪ್ರಭಾವ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

‘ಮನುಷ್ಯನ ಮೂಲಭೂತ ಅವಶ್ಯಕತೆ ಸ್ವಾತಂತ್ರ್ಯ. ತಾವು ಕೀಳು ಎಂಬ ಭಾವ ಯಾರಲ್ಲಿಯೂ ಮೂಡಬಾರದು. ಇದೇ ಸಂಗತಿಯ ಕುರಿತು ಹೋರಾಟ ನಡೆಸಿದವರು ನೆಲ್ಸನ್‌ ಮಂಡೇಲಾ. ವರ್ಣಭೇದ ನೀತಿ ವಿರೋಧಿ ಈ ಹೋರಾಟಗಾರನ ಪ್ರಭಾವಳಿ ದಕ್ಷಿಣ ಆಫ್ರಿಕಾ ಮಾತ್ರವಲ್ಲ; ವಿಶ್ವವನ್ನೇ ವ್ಯಾಪಿಸಿತ್ತು’

ಹೀಗೆ ಮಹಾನಾಯಕನನ್ನು ಸ್ಮರಿಸಿದವರು ಅದೇ ‘ಕಗ್ಗತ್ತಲೆಯ ಖಂಡ’ದ ಹುಡುಗ ಕಗಿಸೊ ರಬಾಡ. ತಾವೊಬ್ಬ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಬೌಲರ್‌ ಎನಿಸಿಕೊಳ್ಳಲು ಮಂಡೇಲಾ ಸಿದ್ಧಾಂತದ ಕೊಡುಗೆ ಅಪಾರ ಎಂಬುದು ಅವರ ಅಂಬೋಣ.

ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡುತ್ತಿರುವ ಈ ಯುವ ವೇಗಿ, ಚಾಣಾಕ್ಷ ಬೌಲಿಂಗ್‌ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಆಡಿದ 12 ಪಂದ್ಯಗಳಿಂದ 23 ವಿಕೆಟ್‌ ಪಡೆದು ‘ಪರ್ಪಲ್‌ ಕ್ಯಾಪ್‌‘ಧಾರಿಯಾಗಿದ್ದಾರೆ. ಅವರು ಪ್ರತಿನಿಧಿಸುವ ತಂಡ ಕೂಡ ಪಾಯಿಂಟ್ಸ್ ಪಟ್ಟಿಯ ಅಗ್ರಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್‌ದೊಂದಿಗೆ ಪೈಪೋಟಿಗೆ ಇಳಿದಿದೆ. ನೆಲ್ಸನ್‌ ಮಂಡೇಲಾ ಅವರು ತಮ್ಮ ಮೇಲೆ ಬೀರಿದ ಪ್ರಭಾವವನ್ನು ರಬಾಡ ಅವರು ಇತ್ತೀಚೆಗೆ ವರ್ಚುವಲ್‌ ಪತ್ರಿಕಾಗೋಷ್ಠಿಯೊಂದರಲ್ಲಿ ಹಂಚಿಕೊಂಡರು.

‘ಮಾನಸಿಕ ಸ್ವಾತಂತ್ರ್ಯ ಅತ್ಯಂತ ಮುಖ್ಯವಾದುದು. ಕ್ರೀಡಾಪಟುವಾಗಿ ನಮಗೊಂದು ಉತ್ತಮ ವೇದಿಕೆ ಸಿಕ್ಕಾಗ ಈ ಕುರಿತು ಸಂದೇಶಗಳನ್ನು ಹರಡಲು ಪ್ರಯತ್ನಿಸಬೇಕು‘ ಎಂಬುದು ಜೋಹಾನ್ಸ್‌ಬರ್ಗ್‌ನ 25 ವರ್ಷದ ಆಟಗಾರನ ನುಡಿ.

‘ಕ್ರಿಕೆಟ್‌ ನನಗೊಂದು ಸಾಮಾಜಿಕ ಜವಾಬ್ದಾರಿ ನೀಡುತ್ತದೆ. ಸೂಕ್ತ ಕಾರಣಗಳಿಗಾಗಿ ಹೋರಾಟ ನಡೆಸಬೇಕು ಎಂಬುದನ್ನು ನೆನಪಿಸುತ್ತದೆ. ಬಹಳಷ್ಟು ಜನರು ನನ್ನನ್ನು ಒಬ್ಬ ಉತ್ತಮ ಕ್ರೀಡಾಪಟುವಾಗಿ ಕಾಣುತ್ತಾರೆ. ಆದರೆ ನಾನೂ ಎಲ್ಲರಂತೆ ಜನಸಾಮಾನ್ಯ ಅಷ್ಟೇ’ ಎಂಬುದು ಹಮ್ಮುಬಿಮ್ಮಿಲ್ಲದ ರಬಾಡ ಮಾತು.

ಮಾನವ ಹಕ್ಕುಗಳನ್ನು ಗೌರವಿಸಬೇಕು ಎನ್ನುವ ರಬಾಡ, ನಮ್ಮ ಆಲೋಚನೆಗಳನ್ನು ಯಾರ ಮೇಲೂ ಹೇರಬಾರದು ಎಂಬ ಸಂಗತಿಯನ್ನು ಮೈಗೂಡಿಸಿಕೊಂಡವರು.

2014ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದ ಬಲಗೈ ವೇಗಿ 43 ಟೆಸ್ಟ್‌ ಪಂದ್ಯಗಳಿಂದ 197 ವಿಕೆಟ್‌ ಕಿತ್ತಿದ್ದಾರೆ. 117 ವಿಕೆಟ್‌ಗಳನ್ನು 75 ಏಕದಿನ ಪಂದ್ಯಗಳಿಂದ ಗಳಿಸಿದ್ದಾರೆ. 24 ಟ್ವೆಂಟಿ–20 ಪಂದ್ಯಗಳಲ್ಲಿ ಅವರ ವಿಕೆಟ್‌ ಗಳಿಕೆ 30.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು