ಶನಿವಾರ, ಸೆಪ್ಟೆಂಬರ್ 18, 2021
28 °C
ಕೃತಜ್ಞತೆ ಸಲ್ಲಿಸಿದ ರಾಣಿ, ಮನ್‌ಪ್ರೀತ್

ಅಭಿಮಾನಿಗಳ ಪ್ರೀತಿಯ ಅರಿವು ನಮಗಿದೆ: ಹಾಕಿ ತಂಡಗಳ ನಾಯಕರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜನರ ಪ್ರೀತಿ ಮತ್ತು ಪ್ರೋತ್ಸಾಹದ ಅರಿವು ನಮಗಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಮೇಳದವರೆಗೆ ನಾವು ಬೆಳೆಯಲು ಕಾರಣರಾದವರೆಲ್ಲರ ನಿರೀಕ್ಷೆಯನ್ನು ಹೊತ್ತು ಟೋಕಿಯೊಗೆ ಹೊರಟಿದ್ದೇವೆ’–

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ತೆರಳಿರುವ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಅವರು ಅಭಿಮಾನಿಗಳಿಗೆ ಬರೆದ ಪತ್ರದ ಸಾರಾಂಶ ಇದು.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಕಳೆದ ಎರಡು ವರ್ಷಗಳ ಬಹುಪಾಲು ಸಮಯವನ್ನು ಈ ಎರಡೂ ತಂಡಗಳು ಕಳೆದಿವೆ. ಒಲಿಂಪಿಕ್ಸ್‌ ಸಿದ್ಧತೆಯನ್ನು ಇಲ್ಲಿಯೇ ಮಾಡಿಕೊಂಡಿವೆ. ಕೊರೊನಾದಿಂದಾಗಿ ಲಾಕ್‌ಡೌನ್ ಆದಾಗ ಇದೇ ವಸತಿ ನಿಲಯದಲ್ಲಿ ಪ್ರತ್ಯೇಕವಾಸದಲ್ಲಿ ಆಟಗಾರರಿದ್ದರು. ಆ ದಿನಗಳ ನೆನಪುಗಳನ್ನೂ ಇಬ್ಬರೂ ಹಂಚಿಕೊಂಡಿದ್ದಾರೆ.

‘ಒಲಿಂಪಿಕ್ಸ್‌ನಂತಹ ಅತಿದೊಡ್ಡ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. ಅಂತಹುದರಲ್ಲಿ ತಂಡಗಳನ್ನು ಮುನ್ನಡೆಸುವ ಗೌರವವು ನಮಗೆ ದಕ್ಕಿದೆ. ಇದು ನಮ್ಮ ಜೀವಮಾನದ ಸಾಧನೆಯೇ ಸರಿ. ನಾವು ಚಿಕ್ಕವರಿದ್ದಾಗ ಒಲಿಂಪಿಯನ್‌ ಕ್ರೀಡಾಪಟುಗಳನ್ನು ಅಚ್ಚರಿಯಿಂದ ನೋಡುತ್ತಿದ್ದೆವು. ಅವರ ಆಟವನ್ನು ನೋಡಲು ಉತ್ಸುಕರಾಗಿರುತ್ತೆದ್ದವು. ಇಂದು ನಾವು ಅವರೆಲ್ಲರ ಹಾದಿಯಲ್ಲಿ ಹೋಗುತ್ತಿದ್ದೇವೆಯೆಂಬುದು ಹೆಮ್ಮೆಯ ಸಂಗತಿ‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ತಂಡದಲ್ಲಿ ಪರಸ್ಪರ ಎಲ್ಲರೂ ಹೆಚ್ಚು ಕಾಲ ಜೊತೆಗೂಡಿ ಇರುವಂತಾಗಿದ್ದು ಒಳ್ಳೆಯದಾಯಿತು. ಇದರಿಂದಾಗಿ ನಾವೆಲ್ಲರೂ ಬಹಳ ನಿಕಟ ಸ್ನೇಹಿತರಾಗಿದ್ದೇವೆ. ಇದು ತಂಡವನ್ನು ಬಲಯುತಗೊಳಿಸಿದೆ. ಪರಸ್ಪರ ಎಲ್ಲರ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಚಿಂತನ, ಮಂಥನ ಮಾಡಿದ್ದೇವೆ. ಇದರಿಂದಾಗಿ ಮಾನಸಿಕವಾಗಿ ಸಬಲರಾಗಿದ್ದೇವೆ. ಇದರಿಂದಾಗಿ ಮುಂಬರುವ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚಿದೆ' ಎಂದು ಬರೆದಿದ್ದಾರೆ.

ತಂಡಗಳ ಕೋಚ್‌ಗಳು, ಸಾಯ್, ಹಾಕಿ ಇಂಡಿಯಾ ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಗೂ ಅವರಿಬ್ಬರೂ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು